Advertisement
ರಾಜ್ಯದಲ್ಲಿ ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 400ಕ್ಕೂ ಅಧಿಕ ದಾಲ್ಮಿಲ್ಗಳಿವೆ. ಈ ಪೈಕಿ ಕೆಲವು ಕಣ್ಮುಚ್ಚಿವೆ. ಸುಮಾರು 100ದಾಲ್ಮಿಲ್ಗಳು ಗಂಭೀರ ಸ್ಥಿತಿಗೆ ಸಿಲುಕಿವೆ. ಸುಮಾರು 200 ದಾಲ್ಮಿಲ್ಗಳು ಗಂಭೀರ ಸ್ಥಿತಿಯತ್ತ ಮುಖ ಮಾಡಿವೆ. ಸುಮಾರು ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ತೊಗರಿಯ ಮೌಲ್ಯವರ್ಧನೆ, ಸುಮಾರು 30-40 ಸಾವಿರ ಜನರಿಗೆ ಉದ್ಯೋಗ ಒದಗಿಸಿರುವ ದಾಲ್ಮಿಲ್ ಉದ್ಯಮ ಇಂದು ಸಂಕಷ್ಟ ಸ್ಥಿತಿ ಎದುರಿಸುವಂತಾಗಿದೆ. ಅದೇ ರೀತಿ ಮಹಾರಾಷ್ಟ್ರದ ಸುಮಾರು 700 ದಾಲ್ಮಿಲ್ಗಳ ಪೈಕಿ ಸುಮಾರು 500ರಷ್ಟು ಸಂಕಷ್ಟ ಸ್ಥಿತಿ ಎದುರಿಸುತ್ತಿವೆ ಎನ್ನಲಾಗಿದೆ.
Related Articles
Advertisement
ತೊಗರಿಗೆ ಹೆಸರುವಾಸಿ: ಇನ್ನು ಕಲಬುರಗಿ ಎಂದ ಕೂಡಲೇ ಹಲವರ ಕಣ್ಮುಂದೆ ಬರುವುದು ತೊಗರಿಬೇಳೆ ಹಾಗೂ ಅಲ್ಲಿನ ದಾಲ್ಮಿಲ್ ಉದ್ಯಮ. ಈ ಜಿಲ್ಲೆಯಲ್ಲಿ ಬೆಳೆಯುವ ಕೆಂಪು ತೊಗರಿಯಲ್ಲಿ ಹೇರಳ ಪೋಷಕಾಂಶ, ಕ್ಯಾಲ್ಸಿಯಂ, ಖನಿಜಾಂಶವಿದೆ. ಕಲಬುರಗಿ ಜಿಲ್ಲೆಯೊಂದರಲ್ಲೇ ಸುಮಾರು ಐದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದೆ. ಕಲಬುರಗಿಯಲ್ಲಿ ಬೆಳೆಯುವ ತೊಗರಿ ಶ್ರೇಷ್ಠ ಗುಣಮಟ್ಟ ಹೊಂದಿದೆ. ಇತ್ತೀಚೆಗೆ ಜಿಯೋಗ್ರಾಫಿಕಲ್ ಇನ್‌ಡಿಕೇಶನ್(ಜಿಐ-ಟ್ಯಾಗ್) ಪಡೆದುಕೊಂಡಿದೆ. ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 9-10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗುತ್ತಿದೆ.
ಬಿಟಿ ಹತ್ತಿಯತ್ತ ರೈತರು: ದಾಲ್ಮಿಲ್ಗಳ ಸಂಕಷ್ಟ ಸ್ಥಿತಿ, ತೊಗರಿಗೆ ಉತ್ತಮ ದರ ದೊರೆಯದ್ದರಿಂದ ಕಲಬುರಗಿ ಜಿಲ್ಲೆ ಸೇರಿದಂತೆ ಅನೇಕ ಕಡೆ ರೈತರು ತೊಗರಿ ಬೆಳೆಯಿಂದ ವಿಮುಖರಾಗಿ ಬಿ.ಟಿ.ಹತ್ತಿ ಇನ್ನಿತರ ಬೆಳೆಗಳಿಗೆ ಮಾರು ಹೋಗುತ್ತಿದ್ದಾರೆ. ದೇಶದಲ್ಲಿ 2018-19ರಲ್ಲಿ 40.02 ಮಿಲಿಯ ಟನ್ ತೊಗರಿ ಉತ್ಪಾದನೆ ಗುರಿಯಲ್ಲಿ, 3.68 ಮಿಲಿಯ ಟನ್ ಮಾತ್ರ ಉತ್ಪಾದನೆಯಾಗಿತ್ತು. ಕೇಂದ್ರ ಸರಕಾರ ತೊಗರಿಗೆ ಎಂಎಸ್‌ಪಿಯನ್ನು ಕೆ.ಜಿಗೆ 58.50ರೂ. ನಿಗದಿಪಡಿಸಿದ್ದರಿಂದ ಮಾರುಕಟ್ಟೆಯಲ್ಲಿ ತೊಗರಿಗೆ ಒಂದಿಷ್ಟು ದರ ಸಿಗುವಂತಾಗಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆ ಕೆಂಪು ತೊಗರಿಗೆ ಜಿಐ ಟ್ಯಾಗ್ ಮಾನ್ಯತೆಯಿಂದ ಸಹಜವಾಗಿ ತೊಗರಿಯ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂಬ ಆಶಾಭಾವನೆ ರೈತರದ್ದಾಗಿದ್ದು, ತೊಗರಿಬೇಳೆಗೂ ಉತ್ತಮ ದರ ದೊರೆಯಲಿದೆ ಎಂಬ ನಿರೀಕ್ಷೆ ದಾಲ್ಮಿಲ್ ಉದ್ಯಮಿಗಳದ್ದಾಗಿದೆ.
ದಾಲ್ ಉದ್ಯಮವನ್ನು ಅಗ್ರೋ ಬೇಸ್ಡ್ ಉದ್ಯಮವಾಗಿಸಬೇಕೆಂದು ಕಲಬುರಗಿಯ ಉದ್ಯಮಿಗಳು ಕೇಂದ್ರಕ್ಕೆ ಮನವಿಗೆ ಮುಂದಾಗಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ ಉದ್ಯಮ ಸಂಕಷ್ಟ ಮನವರಿಕೆ ಮಾಡಲು ನಿರ್ಧರಿಸಿದ್ದಾರೆ. ಕಲ್ಯಾಣ ಕರ್ನಾಟಕದ ಸಂವಿಧಾನ 371(ಜೆ)ಕಲಂದಡಿಯಾದರೂ ದಾಲ್ ಉದ್ಯಮಕ್ಕೆ ವಿಶೇಷ ಸೌಲಭ್ಯ ನೀಡಬೇಕೆಂಬ ಮನವಿಗೆ ಮುಂದಾಗಿದ್ದಾರೆ.
•ಅಮರೇಗೌಡ ಗೋನವಾರ