Advertisement

ರಾಜ್ಯದಲ್ಲೂ ಹೆಚ್ಚುವರಿ ಸ್ಥಾನದ ನಿರೀಕ್ಷೆ?

12:32 AM May 20, 2019 | Team Udayavani |

ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳ ಪೈಕಿ ಈ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಸಾಧನೆ ತೋರುವುದಾಗಿ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಜತೆಗೆ, ಬಿಜೆಪಿ ಪ್ರಾಬಲ್ಯವಿರುವ ಹಲವು ರಾಜ್ಯಗಳಲ್ಲಿ ಈ ಬಾರಿ ಸ್ಥಾನ ಗಳಿಕೆಯಲ್ಲಿ ಹಿನ್ನಡೆಯಾಗುವ ಅಂಶಗಳಿದ್ದರೂ ಕರ್ನಾಟಕದಲ್ಲಿ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವುದಾಗಿ ಸಮೀಕ್ಷೆಗಳು ಹೇಳಿರುವುದು ವಿಶೇಷ.

Advertisement

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಬಿಜೆಪಿಗೆ ಭದ್ರ ನೆಲೆಯಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕಿದೆ. ಹಾಗಾಗಿ, ಹಿಂದಿನ ಮೂರ್‍ನಾಲ್ಕು ಲೋಕಸಭಾ ಚುನಾವಣೆಗಳಿಂದ ರಾಜ್ಯದಲ್ಲಿ ಎರಡಂಕಿ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತಲೇ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ 17 ಸ್ಥಾನ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದ ಬಗ್ಗೆ ಬಿಜೆಪಿ ವರಿಷ್ಠರಿಗೂ ವಿಶೇಷ ಕಾಳಜಿ ಇದೆ. ವರಿಷ್ಠರ ಕಾಳಜಿ, ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಈ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ ಕೂಡ ಉತ್ತಮ ಸಾಧನೆ ತೋರುವ ಲಕ್ಷಣ ಗೋಚರಿಸಿದೆ.

ಉತ್ತರ ಭಾರತ ಹಾಗೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿಗೆ ಉತ್ತಮ ನೆಲೆ ಇದ್ದು, ತನ್ನದೇ ಆದ ಪ್ರಾಬಲ್ಯ ಸಾಧಿಸಿದೆ. ಹಾಗಾಗಿ, ಈ ಭಾಗದ ರಾಜ್ಯಗಳಲ್ಲಿ ಗರಿಷ್ಠ ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ. ಆದರೆ, ಭಾನುವಾರ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಕೆಲ ರಾಜ್ಯಗಳಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳು ಸಿಗುವ ಲಕ್ಷಣಗಳಿಲ್ಲ. ಸದ್ಯದ ಸಮೀಕ್ಷೆಗಳಲ್ಲಿ ಆ ರೀತಿಯ ಅಂಶಗಳು ಗೋಚರಿಸಿವೆ.

ಆದರೆ, ಕರ್ನಾಟಕದಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುವುದಾಗಿ ಎಲ್ಲ ಸಮೀಕ್ಷೆಗಳು ಹೇಳಿವೆ. ಗರಿಷ್ಠ 23 ಸ್ಥಾನ ಗೆಲ್ಲುವುದಾಗಿ ಕೆಲ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದರಿಂದ ಮೈತ್ರಿ ಪಕ್ಷಗಳಿಗಿಂತಲೂ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಸಮೀಕ್ಷಾ ವರದಿಗಳಲ್ಲಿ ಕಾಣುತ್ತಿದೆ. ಬಿಜೆಪಿ ಪ್ರಾಬಲ್ಯದ ರಾಜ್ಯಗಳ ಪೈಕಿ ಬಿಜೆಪಿ ಕೆಲ ಸ್ಥಾನಗಳನ್ನು ಕಳೆದುಕೊಳ್ಳುವ ಲೆಕ್ಕಾಚಾರವಿದ್ದರೂ, ಕರ್ನಾಟಕದಲ್ಲಿ ಹೆಚ್ಚುವರಿ ಸ್ಥಾನ ಗೆಲ್ಲುವ ಧನಾತ್ಮಕ ಭರವಸೆಯನ್ನು ಸಮೀಕ್ಷೆಗಳು ಮೂಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next