ಕಾಸರಗೋಡು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶೇಕಡಾವಾರು ಮತದಾನ ಹೆಚ್ಚಳದಿಂದಾಗಿ ಕೆಲವು ಅಭ್ಯರ್ಥಿಗಳಿಗೆ ನಿರೀಕ್ಷೆ ಮೂಡಿಸಿದ್ದರೆ, ಇನ್ನೂ ಕೆಲವರಿಗೆ ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಪ್ರಮುಖವಾಗಿ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಶೇ.80 ಕ್ಕಿಂತಲೂ ಅಧಿಕ ಮತದಾನವಾಗಿದೆ. ಈ ಎಂಟು ಕ್ಷೇತ್ರಗಳು ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟ ಕ್ಷೇತ್ರಗಳಾಗಿವೆ. ಮತದಾನ ಶೇಕಡಾವಾರು ಹೆಚ್ಚಳದಿಂದ ತಮಗೆ ಅನುಕೂಲಕರವಾಗಲಿದೆ ಎಂದು ಎಲ್ಲ ಪಕ್ಷಗಳ ಅಭ್ಯರ್ಥಿಗಳೂ ಭರವಸೆ ವ್ಯಕ್ತಪಡಿಸುತ್ತಾರೆ. ಆದರೆ ಅದೇ ವೇಳೆ ಆತಂಕವೂ ಇದೆ. ಅದನ್ನು ತೋರಿಸಿಕೊಳ್ಳುತ್ತಿಲ್ಲ ಅಷ್ಟೇ.
ಈ ಬಾರಿ ಗೆಲುವು ತಮ್ಮದೇ ಎಂದು ಯುಡಿಎಫ್ ಮತ್ತು ಎನ್‌ಡಿಎ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ. ಇದೇ ವೇಳೆ ಮತದಾನ ಹೆಚ್ಚಳದಿಂದ ಗೆಲುವು ಇನ್ನಷ್ಟು ಖಾತರಿ ಪಡಿಸಿದೆ ಎಂದು ಎಡರಂಗದ ಅಭ್ಯರ್ಥಿಗಳು ಹೇಳಿಕೊಂಡಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ 1991ರಲ್ಲಿ ಮತದಾನವಾಗಿತ್ತು. ಆ ಬಳಿಕ ಈ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಶೇ. 80.57, ಕಣ್ಣೂರಿನಲ್ಲಿ ಶೇ. 83.05, ವಡಗರದಲ್ಲಿ ಶೇ. 82.42, ಚಾಲಕುಡಿಯಲ್ಲಿ ಶೇ. 80.44, ವಯನಾಡಿನಲ್ಲಿ ಶೇ. 80.31, ಕಲ್ಲಿಕೋಟೆಯಲ್ಲಿ ಶೇ. 81.47, ಆಲತ್ತೂರಿ ನಲ್ಲಿ ಶೇ. 80.33, ಆಲಪ್ಪುಳದಲ್ಲಿ ಶೇ. 80.69, ಪತ್ತನಂತಿಟ್ಟದಲ್ಲಿ ಶೇ.74.19, ಕೊಲ್ಲಂನಲ್ಲಿ ಶೇ.74.36, ಕೋಟ್ಟಯಂನಲ್ಲಿ ಶೇ.75.59, ಮಾವೇಲಿಕ್ಕರದಲ್ಲಿ ಶೇ.74.09 ಎಂಬಂತೆ ಮತದಾನವಾಗಿದೆ.
ಮತದಾನ ಶೇಕಡಾವಾರು ಹೆಚ್ಚಳದಿಂದ ಕೆಲವರಿಗೆ ಆತಂಕ ವನ್ನುಂಟು ಮಾಡಿದೆ. ಮತದಾನ ಹೆಚ್ಚಳವಾದರೆ ಅದು ಯುಡಿಎಫ್‌ಗೆ ಅನುಕೂಲ ಎಂಬ ಮಾತೊಂದಿದೆ. ಆದರೆ ಈ ಬಾರಿ ಎನ್‌ಡಿಎ ಕೂಡ ಪ್ರಬಲ ರಾಜಕೀಯ ಪಕ್ಷ ತೀವ್ರ ಪೈಪೋಟಿ ನೀಡಿದೆ. ಈ ಕಾರಣದಿಂದ ವಿಜಯ ಲಕ್ಷಿ$¾à ಯಾರಿಗೆ ಒಲಿಯಲಿದೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ. ಶಬರಿಮಲೆ ವಿಷಯದಲ್ಲಿ ಚುನಾವಣೆಯಲ್ಲಿ ಪ್ರಭಾವ ಬೀರಿರುವುದು ಒಂದು ಗಮನೀಯ ಅಂಶವಾಗಿದೆ.
ಬಿಜೆಪಿ ಪ್ರಧಾನವಾಗಿ ತಿರುವನಂತಪುರ, ಪತ್ತನಂತಿಟ್ಟ, ತೃಶ್ಶೂರು ಮತ್ತು ಪಾಲಾ^ಟ್ ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆಯನ್ನು ಇರಿಸಿಕೊಂಡಿದೆ. ವಯನಾಡಿನಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದರಿಂದ ಕೇರಳದಲ್ಲಿ ರಾಹುಲ್ ಅಲೆ ಎಷ್ಟು ಸೃಷ್ಟಿಸಿದೆ ಎಂಬುದು ಚುನಾವಣಾ ಫಲಿತಾಂಶದ ಬಳಿಕವಷ್ಟೇ ತಿಳಿಯಲು ಸಾಧ್ಯ. ಈ ಕಾರಣದಿಂದ ಹೆಚ್ಚಿನ ಕ್ಷೇತ್ರಗಳನ್ನು ಯುಡಿಎಫ್ ಗೆದ್ದುಕೊಳ್ಳಲಿದೆ ಎಂದು ಯುಡಿಎಫ್ ಮುಖಂಡರು ಭರವಸೆಯಲ್ಲಿದ್ದಾರೆ.
ಇದೇ ಸಂದರ್ಭದಲ್ಲಿ 17 ಕ್ಷೇತ್ರಗಳನ್ನು ಎಲ್‌ಡಿಎಫ್ ಗೆದ್ದುಕೊಳ್ಳಲಿದೆ ಎಂದು ಎಡರಂಗದ ನೇತಾರರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.