ಲಾಕ್ ಡೌನ್ ಸಡಿಲಿಕೆಯಾಗಿದೆ. ಒಂದೊಂದೇ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ಕೊಡುತ್ತಿದೆ. ಇದು ಸಿನಿಮಾ ಮಂದಿಯಲ್ಲಿ ಖುಷಿ ತಂದಿದೆ. ಈಗಾಗಲೇ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್‍ಗಳಿಗೆ ಅನುಮತಿ ಸಿಕ್ಕಿ ಕೆಲಸಗಳು ಆರಂಭವಾಗಿವೆ. ಆದರೆ, ಸಿನಿಮಾ ಮಂದಿಯ ನಿಜವಾದ ಖುಷಿ ಅಡಗಿರೋದು ಚಿತ್ರೀಕರಣ ಹಾಗೂ ಸಿನಿಮಾ ಬಿಡುಗಡೆಯಲ್ಲಿ. ಚಿತ್ರೀಕರಣ ಆರಂಭವಾಗಿ, ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕರೆ ಅಲ್ಲಿಗೆ ಸಿನಿಮಾ ರಂಗದ ಪೂರ್ಣ ಚಟುವಟಿಕೆ ಶುರುವಾದಂತೆ. ಈ ಬಗ್ಗೆ ಈಗಾಗಲೇ ಚಿತ್ರರಂಗದ ನಿಯೋಗ ಮನವಿ ಮಾಡಿದೆ ಕೂಡಾ.
ಸಾಕಷ್ಟು ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿವೆ. ಒಂದು ಕಡೆ ಚಟುವಟಿಕೆ ಇಲ್ಲ ಎಂಬ ಬೇಸರವಾದರೆ ಮತ್ತೊಂದು ಕಡೆ ಸಿನಿಮಾ ಕಾರ್ಮಿಕರಿಗೆ ಕೆಲಸವಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಚಿತ್ರೀಕರಣ ಬೇಗನೇ ಶುರುವಾಗುವ ಅನಿವಾರ್ಯತೆ ಇದೆ. ಈಗಾಗಲೇ ಕಿರುತೆರೆಯ ಚಿತ್ರೀಕರಣಗಳು ನಿಧಾನವಾಗಿ ಆರಂಭವಾಗಿ ಆ ರಂಗದ ಮೊಗದಲ್ಲಿ ಮಂದಹಾಸ ಮೂಡಿವೆ. ಜೂನ್ 1 ರಿಂದಲೇ ಅನೇಕ ಧಾರಾವಾಹಿಗಳ ಪ್ರಸಾರ ಆರಂಭವಾಗಿದೆ. ಹೀಗಾಗಿ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ಕೊಡಬೇಕು ಎಂಬ ಮಾತು ಹಾಗೂ ಮನವಿ ಜೋರಾಗಿ ಕೇಳಿಬರುತ್ತಿದೆ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಸಿನಿಮಾ ಬಿಡುಗಡೆಗೂ ಅವಕಾಶ ಸಿಗಬಹುದು ಎಂಬ ನಂಬಿಕೆಯಲ್ಲಿ ಚಿತ್ರರಂಗವಿದೆ.
ಸಿನಿ ಬಿಡುಗಡೆಯಲ್ಲಿ ಭಾರೀ ವ್ಯತ್ಯಯ: ಸದ್ಯ ಕೋವಿಡ್ 19 ಇಡೀ ದೇಶವನ್ನು ಕಾಡುತ್ತಿದೆ. ಹಲವಾರು ಉದ್ಯಮಗಳು ಕೋವಿಡ್ 19 ಹೊಡೆತಕ್ಕೆ ಸಿಕ್ಕಿ ಮಕಾಡೆ ಮಲಗಿವೆ. ಇನ್ನೊಂದಿಷ್ಟು ಕ್ಷೇತ್ರಗಳು ಚೇತರಿಸಿಕೊಳ್ಳಲು ವರ್ಷಗಳೇ ಬೇಕು. ಇದರಿಂದ ಚಿತ್ರರಂಗ ಕೂಡಾ ಹೊರತಾಗಿಲ್ಲ. ಮುಖ್ಯವಾಗಿ ಚಿತ್ರರಂಗದಲ್ಲಿ ಕೂಡಲೇ ತಲೆದೊರಲಿರುವ ಸಮಸ್ಯೆ ಎಂದರೆ ರಿಲೀಸ್. ಹೌದು, ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಸಿನಿಮಾ ಬಿಡುಗಡೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದಕ್ಕೆ ಕಾರಣ ಮತ್ತದೇ ಕೋವಿಡ್ 19 ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಸಾಮಾನ್ಯವಾಗಿ ಪ್ರತಿ ವಾರ ಚಿತ್ರರಂಗದಲ್ಲಿ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಲೇ ಬಂದಿವೆ. ಆದರೆ ಕೋವಿಡ್ 19 ನಿಂದಾಗಿ ಸದ್ಯ ವಾರದಿಂದ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಿನಿಟ್ರಾಫಿಕ್ ಜೋರಾಗಲಿದೆ. ಈಗಾಗಲೇ ಮಾರ್ಚ್ ಏಪ್ರಿಲ್, ಮೇ,ಜೂನ್‍ನಲ್ಲಿ ಬಿಡುಗಡೆಗೆ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದವು. ಆದರೆ ಈ ಕೋವಿಡ್ 19 ನಿಂದಾಗಿ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಸಬರ, ಸ್ಟಾರ್‍ಗಳ … ಹೀಗೆ ಸಾಕಷ್ಟು ಸಿನಿಮಾಗಳು ಸರತಿಯಲ್ಲಿವೆ. ರಿಲೀಸ್‍ಗೆ ಅನುಮತಿ ಸಿಕ್ಕ ನಂತರ ಬಿಡುಗಡೆಯಲ್ಲಿ ಒಂದಷ್ಟು ವ್ಯತ್ಯಯ, ಗೊಂದಲಗಳಾಗುವ ಲಕ್ಷಣಗಳಿವೆ.
ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಿನಿಮಾ ಬಿಡುಗಡೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಅದಕ್ಕೆ ಕಾರಣ ಕೋವಿಡ್ 19 ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸ್ಟಾರ್ ಸಿನಿಮಾಗಳು ಸರತಿಯಲ್ಲಿ ನಿಂತಿವೆ. ರಾಬರ್ಟ್, ಕೋಟಿಗೊಬ್ಬ -3, ಪೊಗರು, ಸಲಗ, 100, ಯುವರತ್ನ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಈ ಸಿನಿಮಾಗಳ ನಡುವೆ ಬಂದರೆ ಸಿನಿಮಾ ಬಿಡುಗಡೆಯಾದ ಸಂತಸ ಸಿಗಬಹುದೇ ಹೊರತು ಅದರಾಚೆ ಯಾವುದೇ ಲಾಭವಾಗಬಹುದು. ಆ ಕಾರಣದಿಂದ ಹೊಸಬರ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಬೇಕಾಗುತ್ತದೆ. ಅಲ್ಲಿಗೆ ಬಿಡುಗಡೆಯ ಸಂಖ್ಯೆಯಲ್ಲೂ ಗಣನೀಯವಾಗಿ ಇಳಿಕೆಯಾಗಲಿದೆ.