Advertisement

ಮೋರ್ಟು- ಬೆಳ್ಳಾಲ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ

01:48 AM May 17, 2019 | sudhir |

ಆಜ್ರಿ: ಮೋರ್ಟು – ಬೆಳ್ಳಾಲ ಸಂಪರ್ಕ ಸೇತುವೆ ಕಾಮಗಾರಿ ಮಳೆಗಾಲಕ್ಕೂ ಮುನ್ನ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಕಾಮಗಾರಿ ಮುಗಿಯುವುದು ಅನುಮಾನ ಎಂದು ಸ್ಥಳೀಯರು ಹೇಳಿದ್ದಾರೆ. ಚಕ್ರಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಈ ಸೇತುವೆ ಕಾಮಗಾರಿ ಕಳೆದೊಂದು ವರ್ಷದಿಂ ನಡೆಯುತ್ತಿದೆ.

Advertisement

ಸೇತುವೆಗೆ ಸಂಪರ್ಕಿಸುವ ಸುಮಾರು 6.5 ಕಿ.ಮೀ. ಉದ್ದದ ರಸ್ತೆಗೆ ಡಾಮರೀಕರಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇನ್ನು 1.5 ಕಿ.ಮೀ. ಉದ್ದದ ರಸ್ತೆಗೆ ಡಾಮರೀಕರಣ ಕಾಮಗಾರಿ ಬಾಕಿ ಇದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಸೇತುವೆಯನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಯಿದೆ. ಸೇತುವೆ ಕಾಮಗಾರಿಗೆ 2.49 ಕೋ.ರೂ. ಮಂಜೂರಾಗಿ ದ್ದರೆ, ಒಟ್ಟು ಸುಮಾರು 4.50 ಕೋ.ರೂ. – 5 ಕೋ. ರೂ. ಈ ಸೇತುವೆ, ಡಾಮರೀಕರಣ ಹಾಗೂ ಕಾಂಕ್ರೀಟಿಕರಣ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದೆ.

ಕಾಲುಸಂಕವೇ ಆಶ್ರಯ
10 ಕಿ.ಮೀ. ದೂರ ಸಂಚರಿಸುವ ದಾರಿಗೆ ಮಳೆಗಾಲದಲ್ಲಿ ಸೇತುವೆಯಿಲ್ಲದೆ 30 ಕಿ. ಮೀ. ಸಂಚರಿಸುವ ದುಃಸ್ಥಿತಿ ಬೆಳ್ಳಾಲ, ಮೋರ್ಟು ಭಾಗದ ಜನರದ್ದು. ಕುಂದಾಪುರದಿಂದ 35 ಕಿ. ಮೀ. ದೂರದ, ಸಿದ್ದಾಪುರ ಸಮೀಪದ ಆಜ್ರಿ, ಬೆಳ್ಳಾಲಕ್ಕೆ ಸಂಪರ್ಕ ಕಲ್ಪಿಸುವ ಮೋರ್ಟು ಬಳಿ ಚಕ್ರಾ ನದಿಗೆ ಇಷ್ಟು ದಿನ ಕಾಲು ಸಂಕವೇ ಆಶ್ರಯವಾಗಿತ್ತು. ಆಜ್ರಿಯಿಂದ ಚಕ್ರಾ ನದಿ ದಾಟಿ ಮೋರ್ಟು- ಬೆಳ್ಳಾಲ – ಕೆರಾಡಿ – ಮಾರಣಕಟ್ಟೆಯಾಗಿ ಕೊಲ್ಲೂರಿಗೆ ತೆರಲು ಹತ್ತಿರದ ಮಾರ್ಗ ಇದಾಗಿದೆ. ಆದರೆ ಸೇತುವೆಯಿಲ್ಲದೆ ಸುತ್ತು ಬಳಸಿ ತೆರಳಬೇಕಾಗಿತ್ತು. ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಭಾಗದಲ್ಲಿ ಸುಮಾರು 1,000 ಕ್ಕೂ ಹೆಚ್ಚು ಮನೆಗಳಿದ್ದು, ಈ ಭಾಗದ ಜನರಿಗೆ ಸಿದ್ದಾಪುರ ಹತ್ತಿರದ ಪೇಟೆ. ಆದರೆ ಮಳೆಗಾಲ ಆರಂಭವಾದ ಮೇಲೆ ಸಿದ್ದಾಪುರಕ್ಕೆ ಹೋಗಬೇಕಾದರೆ 30 ಕಿ.ಮೀ. ಸುತ್ತು ಹಾಕಿ ತೆರಳಬೇಕು.

ಮಳೆಗಾಲದಲ್ಲಿ ಸಂಪರ್ಕ ಕಡಿತ
ಸಿದ್ದಾಪುರ ಮಾರ್ಗವಾಗಿ ಆಜ್ರಿಯಿಂದ ಮೋರ್ಟು ದಾರಿಯಾಗಿ ಬೆಳ್ಳಾಲ ಗ್ರಾಮಕ್ಕೆ ತೆರಳಬೇಕಾದರೆ ನದಿ ದಾಟಬೇಕು. ಬೇಸಗೆಯಲ್ಲಿ ಈ ಊರಿನವರು ತಾತ್ಕಾಲಿಕ ಕಾಲು ಸಂಕದ ಮೂಲಕವೇ ನದಿ ದಾಟುತ್ತಾರೆ. ಇದರಲ್ಲಿ ದ್ವಿಚಕ್ರ ವಾಹನ ಮಾತ್ರ ಸಂಚರಿಸುತ್ತದೆ. ಬೆಳ್ಳಾಲ, ಕೆರಾಡಿ, ಮಾರಣಕಟ್ಟೆ ಕಡೆಗಳಿಂದ ಸಿದ್ದಾಪುರ, ಹೆಮ್ಮಕ್ಕಿ, ಶಂಕರನಾರಾಯಣ ಶಾಲೆ- ಕಾಲೇಜುಗಳಿಗೆ ವ್ಯಾಸಂಗಕ್ಕಾಗಿ ಸುಮಾರು 250 ರಿಂದ 300 ಮಕ್ಕಳು ಬರುತ್ತಿದ್ದು, ಮಳೆಗಾಲದಲ್ಲಿ ಅವರು ಸುತ್ತು ಹಾಕಿ ತೆರಳುತ್ತಾರೆ. ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.

3-4 ದಿನದಲ್ಲಿ ಆರಂಭ
ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ಬೇರೆಯೊಂದು ಕಡೆ ಕೂಡ ಕಾಮಗಾರಿ ಇದ್ದುದರಿಂದ ಕೆಲ ದಿನ ಸ್ಥಗಿತಗೊಳಿಸಲಾಗಿದೆ. ಇನ್ನು 3-4 ದಿನಗಳಲ್ಲಿ ಕಾಂಕ್ರೀಟೀಕರಣ ಹಾಗೂ ಸೇತುವೆಯ ಇನ್ನಿತರ ಕಾಮಗಾರಿ ಆರಂಭಗೊಳ್ಳಲಿದೆ. ಮೇ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. 4.5 ಕಿ.ಮೀ. ಡಾಮರೀಕರಣ ಕಾಮಗಾರಿ ಪೂರ್ಣಗೊಂಡಿದೆ. 1.5 ಕಿ.ಮೀ. ರಸ್ತೆ ಕಾಂಕ್ರೀಟೀಕರಣ ಬಾಕಿ ಇದೆ.
– ದುರ್ಗಾದಾಸ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ತಾ.ಪಂ. ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next