Advertisement

ಆಯ್ಕೆ ಬೆನ್ನಿಗೇ ಅಸಮಾಧಾನದ ಹೊಗೆ ಶುಕ್ಲಾ ಮೇಲೆ ನಿರೀಕ್ಷೆ 

12:30 AM Feb 04, 2019 | |

ಸಾಮಾನ್ಯ ಪರಿಸ್ಥಿತಿಯಲ್ಲಿ ಸಿಬಿಐಗೆ ಹೊಸ ನಿರ್ದೇಶಕರ ನೇಮಕವಾಗುವುದು ಅಂಥ ವಿಶೇಷ ಸುದ್ದಿಯೇನಲ್ಲ. ಆದರೆ ಕಳೆದ ಕೆಲವು ಸಮಯದಿಂದೀಚೆಗೆ ಸಿಬಿಐಯಲ್ಲಿ ನಡೆದಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಸರಕಾರ ಮಧ್ಯಪ್ರದೇಶದ ಮಾಜಿ ಐಪಿಎಸ್‌ ಅಧಿಕಾರಿ ರಿಶಿ ಕುಮಾರ್‌ ಶುಕ್ಲ ಅವರನ್ನು ನೇಮಿಸಿರುವುದು ಮಹತ್ವ ಪಡೆದುಕೊಂಡಿದೆ.

Advertisement

ಸಿಬಿಐ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಶುಕ್ಲ ಅದರ ಸಾರಥ್ಯ ವಹಿಸಿಕೊಂಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ತೀವ್ರ ಆಕ್ಷೇಪದ ನಡುವೆಯೇ ಈ ನೇಮಕಾತಿ ಆಗಿದೆ. ಈಗೀಗ ಪ್ರತಿಯೊಂದನ್ನು ವಿರೋಧಿಸುವುದು ವಿಪಕ್ಷಕ್ಕೆ ಅಭ್ಯಾಸವಾಗಿರುವುದರಿಂದ ಖರ್ಗೆ ಆಕ್ಷೇಪಕ್ಕೆ ಹೇಳಿಕೊಳ್ಳುವಷ್ಟು ಮಹತ್ವ ಸಿಕ್ಕಿಲ್ಲ. 

ಸುಮಾರು ಒಂದು ವರ್ಷದಿಂದ ಸಿಬಿಐ ಅನಪೇಕ್ಷಿತ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿದೆ. ಅದರ ಇಬ್ಬರು ಉನ್ನತ ಅಧಿಕಾರಿಗಳ ಕಚ್ಚಾಟ ದೇಶದ ಈ ಪರಮೋತ್ಛ ತನಿಖಾ ಸಂಸ್ಥೆಯ ವರ್ಚಸ್ಸಿಗೆ ಇನ್ನಿಲ್ಲದ ಮಸಿ ಬಳಿದಿದೆ. ಅಧಿಕಾರಿಗಳ ನಡುವಿನ ಅಪನಂಬಿಕೆ ಮತ್ತು ವೃತ್ತಿ ಮತ್ಸರ, ಅಗತ್ಯಕ್ಕಿಂತ ಹೆಚ್ಚಿನ ರಾಜಕೀಯ ಹಸ್ತಕ್ಷೇಪ ಈ ಮುಂತಾದ ಕಾರಣಗಳಿಂದಾಗಿ ಸಿಬಿಐಯ ವಿಶ್ವಾಸಾರ್ಹತೆಗೆ ಇನ್ನಿಲ್ಲದ ಹಾನಿಯಾಗಿದೆ. ಇದೀಗ ನೂತನ ನಿರ್ದೇಶಕ ಶುಕ್ಲ ಮೇಲೆ ನಷ್ಟವಾಗಿರುವ ಸಿಬಿಐಯ ವಿಶ್ವಾಸಾರ್ಹತೆ ಮತ್ತು ವರ್ಚಸ್ಸನ್ನು ಮರಳಿ ತರುವ ಮಹತ್ವ ಹೊಣೆಗಾರಿಕೆಯಿದೆ. 

ನಿರ್ದೇಶಕರಾಗಿ ನೇಮಕವಾದ ಮರುದಿನವೇ ಶುಕ್ಲಗೆ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಸಂದರ್ಭ ಎದುರಾಗಿದೆ. ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದ ಏರ್‌ಸೆಲ್‌-ಮ್ಯಾಕ್ಸಿಸ್‌ ಪ್ರಕರಣದಲ್ಲಿ ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ವಿಚಾರಣೆಗೊಳಪಡಿಸಲು ಸಿಬಿಐಗೆ ಅನುಮತಿ ದೊರಕಿದೆ. ಚಿದಂಬರಂ ಪುತ್ರ ಕಾರ್ತಿ ವಿರುದ್ಧ ಈಗಾಗಲೇ ಆರೋಪ ಹೊರಿಸಲಾಗಿದೆ. ಇದೀಗ ಪಿ. ಚಿದಂಬರಂ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸುವುದು ಸಿಬಿಐ ಪಾಲಿಗೆ ಅಗ್ನಿಪರೀಕ್ಷೆಯೇ ಸರಿ. ಚುನಾವಣೆ ಕಾಲದಲ್ಲಿ ಈ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದ್ದು, ಈ ಕೇಸನ್ನು ಶುಕ್ಲ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಅವರ ಸಾಮರ್ಥ್ಯಕ್ಕೆ ಹಿಡಿಯುವ ಕೈಗನ್ನಡಿಯಾಗಲಿದೆ. 

ದಕ್ಷತೆ ಮತ್ತು ಅನುಭವ ಶುಕ್ಲಾಗೆ ಸಾಕಷ್ಟು ಇದೆ. ಮಧ್ಯಪ್ರದೇಶದ ಡಿಜಿಪಿಯಾಗಿ ಸೇವೆ ಸಲ್ಲಿಸಿದ ಹಿರಿಮೆಯಿದೆ. ಹಿಂದಿನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಆಪ್ತರೆಂಬ ಕೊಂಕುಗಳಿದ್ದರೂ ಕರ್ತವ್ಯ ನಿಭಾವಣೆಯಲ್ಲಿ ಈ ರಾಜಕೀಯ ಸಂಬಂಧಗಳು ಪ್ರಭಾವ ಬೀರದಂತೆ ನೋಡಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಸರಕಾರ ಬಂದ ಬಳಿಕ ಅವರನ್ನು ಡಿಜಿಪಿ ಸ್ಥಾನದಿಂದ ಪೊಲೀಸ್‌ ವಸತಿ ನಿಗಮಕ್ಕೆ ಎತ್ತಂಗಡಿ ಮಾಡಲಾಗಿತ್ತು. ಇದೀಗ ಅಲ್ಲಿಂದ ಅವರು ನೇರವಾಗಿ ಸಿಬಿಐ ನಿರ್ದೇಶಕರ ಸ್ಥಾನದಲ್ಲಿ ಹೋಗಿ ಕುಳಿತಿದ್ದಾರೆ. 

Advertisement

ಶುಕ್ಲಾ ಸೇವಾವಧಿ ಎರಡು ವರ್ಷ. ಇಷ್ಟರಲ್ಲಿ ಅವರು ಮಾಡಬೇಕಾದ ಕೆಲಸ ಅನೇಕ ಇವೆ. ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣ, 2ಜಿ ಹಗರಣ, ಕಲ್ಲಿದ್ದಲು, ಏರ್‌ ಇಂಡಿಯಾ, ಭೂಪಿಂದರ್‌ ಸಿಂಗ್‌ ಹೂಡಾ ಮೇಲಿನ ಪ್ರಕರಣ ಸೇರಿ ಹಲವು ಹೈಪ್ರೊಫೈಲ್‌ ಕೇಸುಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ. ಇವುಗಳಿಗೊಂದು ತಾರ್ಕಿಕ ಅಂತ್ಯ ನೀಡಬೇಕಾದ ಹೊಣೆಗಾರಿಕೆ ಶುಕ್ಲಾ ಮೇಲಿದೆ. ಅಂತೆಯೇ ಉತ್ತರ ಪ್ರದೇಶದ ಮರಳು ಮಾಫಿಯಾ, ಶಾರದಾ ಚಿಟ್‌ಫ‌ಂಡ್‌ ಕೇಸ್‌, ಐಸಿಐಸಿಐ ಅವ್ಯವಹಾರ ಈ ಮುಂತಾದ ಕೇಸುಗಳು ಸಿಬಿಐ ಮುಂದೆ ಇವೆ. ಇಷ್ಟರ ತನಕ ಕಾರ್ಯ ನಿರ್ವಹಣೆಯಲ್ಲಿ ಶುಕ್ಲಾ ಪಕ್ಷಾತೀತವಾಗಿ ನಡೆದುಕೊಂಡಿದ್ದಾರೆ ಎಂದು ಅವರ ಸೇವಾ ದಾಖಲೆ ಹೇಳುತ್ತಿದೆ. ಹೀಗಾಗಿ ಹೈಪ್ರೊಫೈಲ್‌ ಪ್ರಕರಣಗಳಲ್ಲಿ ಅವರು ರಾಜಕೀಯ ಪ್ರಭಾವಕ್ಕೆ ಒಳಗಾಗದಿರಬಹುದು ಎಂಬ ನಿರೀಕ್ಷೆಯಿದೆ.
 
ಸುಪ್ರೀಂ ಕೋರ್ಟ್‌ ಕೆಲ ವರ್ಷದ ಹಿಂದೆ ಸಿಬಿಐಯನ್ನು ಪಂಜರದಲ್ಲಿರುವ ಗಿಣಿ ಎಂದು ಬಣ್ಣಿಸಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದೆ ಎನ್ನುವುದು ಇದರ ತಾತ್ಪರ್ಯವಾಗಿತ್ತು. ಇದಾಗಿ ಹಲವು ವರ್ಷವಾಗಿದ್ದರೂ ಈ ಕಳಂಕದಿಂದ ಹೊರಬರಲು ಸಿಬಿಐಗೆ ಸಾಧ್ಯವಾಗಿಲ್ಲ. ಕೆಲ ಸಮಯದಿಂದೀಚೆಗೆ ನಡೆದಿರುವ ಯದ್ವಾತದ್ವಾ ವರ್ಗಾವಣೆಯಿಂದಾಗಿ ಸಿಬಿಐ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿದಿದೆ. ಇದೇ ವೇಳೆ ಕೆಲವು ಅಧಿಕಾರಿಗಳು ರಾಜಕೀಯ ಕೃಪಾಕಟಾಕ್ಷದಿಂದ ಆಯಕಟ್ಟಿನ ಜಾಗ ಹಿಡಿದು ಕುಳಿತಿದ್ದು, ಈ ಅವ್ಯವಸ್ಥೆಗಳನ್ನೆಲ್ಲ ಸರಿಪಡಿಸಿಕೊಂಡು ತನಿಖಾ ಸಂಸ್ಥೆಯನ್ನು ಮುನ್ನಡೆಸಬೇಕಾದ ಗುರುತರ ಜವಾಬ್ದಾರಿಗೆ ಶುಕ್ಲಾ ಹೆಗಲು ಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯರೂ, ಅನುಭವಿಗಳೂ ಆಗಿರುವ ಶುಕ್ಲಾ ಮೇಲೆ ದೇಶ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next