Advertisement

Vande Bharat: ವಂದೇ ಭಾರತ್‌ ರೈಲು ಸೇವೆ ದೇಶಾದ್ಯಂತ ವಿಸ್ತರಣೆ

12:05 AM Oct 04, 2023 | Team Udayavani |

ಭಾರತೀಯ ರೈಲ್ವೇ ಮತ್ತು ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ “ವಂದೇ ಭಾರತ್‌ ಎಕ್ಸ್‌ ಪ್ರಸ್‌’ ರೈಲು ಸೇವೆ ಇದೀಗ ದೇಶಾದ್ಯಂತ ವಿಸ್ತರಿಸಲ್ಪಡುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಖ್ಯೆ 34ಕ್ಕೇರಿದೆ. ಈ ಎಕ್ಸ್‌ಪ್ರೆಸ್‌ ರೈಲುಗಳ ಓಡಾಟ ಆರಂಭವಾದ ಬಳಿಕ ನಗರಗಳ ನಡುವಣ ಪ್ರಯಾಣದ ಅವಧಿ ಕಡಿಮೆಯಾಗಿದೆಯಲ್ಲದೆ ಪ್ರಯಾಣಿಕರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಆರಂಭ ಯಾವಾಗ?
2019ರ ಫೆಬ್ರವರಿ 15ರಂದು ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಹೊಸದಿಲ್ಲಿ-ವಾರಾಣಸಿ ನಡುವಣ ದೇಶದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಎಂಟು ತಿಂಗಳ ಬಳಿಕ ಹೊಸದಿಲ್ಲಿ-ಶ್ರೀಮಾತಾ ವೈಷ್ಣೋದೇವಿ ಕಟ್ರಾ ನಡುವೆ ವಂದೇ ಭಾರತ್‌ ರೈಲಿನ ಸಂಚಾರವನ್ನು ಆರಂಭಿಸಲಾಗಿತ್ತು. ಅನಂತರ ಕೊರೊನಾ ಮತ್ತು ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದಾಗಿ ಎರಡು ವರ್ಷಗಳ ಕಾಲ ಹೊಸದಾಗಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗಿರಲಿಲ್ಲ. 2022ರ ಸೆಪ್ಟಂಬರ್‌ ಬಳಿಕ ಮತ್ತೆ ಭಾರತೀಯ ರೈಲ್ವೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ದೇಶದ ವಿವಿಧ ನಗರಗಳ ನಡುವೆ ಓಡಿಸಲಾರಂಭಿಸಿದ್ದು ಕಳೆದೊಂದು ವರ್ಷದ ಅವಧಿಯಲ್ಲಿ 32 ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಓಡಾಟ ಆರಂಭಿಸಿವೆ. ಈ ಮೂಲಕ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಓಡಾಟಕ್ಕೆ ಚುರುಕು ಲಭಿಸಿದ್ದು ಈ ಸೇವೆಯ ವಿಸ್ತರಣೆ ತೀವ್ರಗತಿಯಲ್ಲಿ ಸಾಗುತ್ತಿದ್ದು ದೇಶದ ಹಲವು ನಗರಗಳ ನಡುವೆ ಸಂಪರ್ಕ ಬೆಸೆಯತೊಡಗಿದೆ.

ವಂದೇ ಭಾರತ್‌ ವಿಶೇಷತೆ
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಭಾರತದಲ್ಲಿಯೇ ನಿರ್ಮಾಣಗೊಂಡಿರುವ ಅತ್ಯಾಧುನಿಕ ರೈಲಾಗಿದ್ದು ಎರಡು ನಗರಗಳ ನಡುವೆ ಕಡಿಮೆ ಅವಧಿಯಲ್ಲಿ ಚಲಿಸಬಲ್ಲದಾಗಿದೆ. ಎಲ್ಲ ಅತ್ಯಾಧುನಿಕ ವ್ಯವಸ್ಥೆಗಳನ್ನು ಈ ರೈಲು ಹೊಂದಿದೆ. ಭಾರತೀಯ ರೈಲ್ವೇ ಈ ಹಿಂದೆ ಪರಿಚಯಿಸಿದ ಬಹುತೇಕ ರೈಲು ಸೇವೆಗಳಿಗಿಂತ ಅತೀ ಕ್ಷಿಪ್ರ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ದೇಶದ ಪ್ರಮುಖ ನಗರಗಳನ್ನು ಬೆಸೆಯುತ್ತಿದೆ. ಇತ್ತೀಚೆಗೆ ಹೊಸದಾಗಿ ಸಂಚಾರ ಆರಂಭಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಕೇಸರಿ ಬಣ್ಣದೊಂದಿಗೆ ಹೊಸ ರೂಪ ಪಡೆದಿದೆಯಲ್ಲದೆ ಮತ್ತಷ್ಟು ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒಳಗೊಂಡಿದೆ.

ಕರ್ನಾಟಕಕ್ಕೆ 3 ವಂದೇ ಭಾರತ್‌ ರೈಲು
ಸದ್ಯ ಕರ್ನಾಟಕದಲ್ಲಿ ಎರಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಓಡಾಟ ನಡೆಸುತ್ತಿವೆ. 2022ರ ನ.11ರಂದು ಚೆನ್ನೈ ಸೆಂಟ್ರಲ್‌ ಮತ್ತು ಮೈಸೂರು ನಡುವೆ ಮತ್ತು ಈ ವರ್ಷದ ಜೂ. 27ರಂದು ಬೆಂಗಳೂರು-ಧಾರವಾಡ ಹಾಗೂ ಸೆ. 24ರಂದು ಯಶವಂತಪುರ-ಕಾಚಿಗುಡ ನಡುವೆ ರೈಲು ಓಡಾಟ ಆರಂಭಿಸಿದೆ.

ಕರಾವಳಿಗೂ ಬರಲಿ ವಂದೇ ಭಾರತ್‌ ರೈಲು
ತಿರುವನಂತಪುರ-ಕಾಸರಗೋಡು ನಡುವೆ ಸಂಚರಿಸುತ್ತಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರು ವರೆಗೆ ವಿಸ್ತರಿಸಬೇಕೆಂಬ ಬೇಡಿಕೆಯನ್ನು ಕೇರಳೀಗರು ಮುಂದಿಟ್ಟಿದ್ದಾರೆ. ಆದರೆ ಕರ್ನಾಟಕ ಕರಾ ವಳಿಯ ಜನತೆ ಮಂಗಳೂರು-ಮುಂಬಯಿ ನಡುವೆ ಹೊಸದಾಗಿ ವಂದೇ ಭಾರತ್‌ ರೈಲು ಓಡಾಟವನ್ನು ಆರಂಭಿಸುವಂತೆ ಮನವಿ ಸಲ್ಲಿಸಿದ್ದಾರೆ. ತಮ್ಮ ಮನವಿಗೆ ಭಾರತೀಯ ರೈಲ್ವೇಯಿಂದ ಶೀಘ್ರವೇ ಸೂಕ್ತ ಸ್ಪಂದನೆ ಲಭಿಸೀತು ಎಂಬ ಆಶಾವಾದ ಕರ್ನಾಟಕ ಕರಾವಳಿಗರದ್ದಾಗಿದೆ.

Advertisement

2030ರ ವೇಳೆಗೆ 800 ರೈಲುಗಳ ಓಡಾಟ
ಪ್ರಸಕ್ತ ಹಣಕಾಸು ವರ್ಷಾಂತ್ಯಕ್ಕೆ ದೇಶಾದ್ಯಂತ ಓಡಾಡುತ್ತಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಖ್ಯೆಯನ್ನು 75ಕ್ಕೆ ಹೆಚ್ಚಿಸಲು ಅಥವಾ ಈ ರೈಲುಗಳ ಸರ್ವಿಸ್‌ ಅನ್ನು 150ಕ್ಕೆ ಹೆಚ್ಚಿಸುವ ಗುರಿಯನ್ನು ಭಾರತೀಯ ರೈಲ್ವೇ ಹೊಂದಿದೆ. 2030ರ ಅಂತ್ಯಕ್ಕೆ ಭಾರತೀಯ ರೈಲ್ವೇ ದೇಶದಲ್ಲಿ ಸಂಚಾರದಲ್ಲಿರುವ ರೈಲುಗಳನ್ನು ಸಂಪೂರ್ಣ ಇಂಗಾಲ ಮುಕ್ತವನ್ನಾಗಿಸಲು ಪಣತೊಟ್ಟಿದ್ದು ಈ ನಿಟ್ಟಿನಲ್ಲಿ ದೇಶಾದ್ಯಂತ 800 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಸಂಪೂರ್ಣ ಸ್ವದೇಶಿ ತಂತ್ರಜ್ಞಾನ
ಚೆನ್ನೈಯ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಹೊಂದಿದೆ. ಪ್ರತೀ ಬಾರಿಯೂ ರೈಲುಗಳಲ್ಲಿನ ಸೌಲಭ್ಯಗಳಲ್ಲಿ ಸುಧಾರಣೆಗಳನ್ನು ಮಾಡುತ್ತ ಬರಲಾಗಿದ್ದು ಸೆ. 24ರಂದು ಏಕಕಾಲದಲ್ಲಿ ಚಾಲನೆ ನೀಡಲಾದ ಈ ರೈಲುಗಳಲ್ಲಿ ಹಲವಾರು ಹೊಸ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ ಈ ರೈಲುಗಳು ನೀಲಿ ಬಣ್ಣವನ್ನು ಹೊಂದಿದ್ದರೆ ಈಗ ಕೇಸರಿ ಬಣ್ಣದಿಂದ ಕಂಗೊಳಿಸುತ್ತಿವೆ. ಆರಾಮದಾಯಕ ಆಸನ ವ್ಯವಸ್ಥೆ, ಪ್ರತೀ ಆಸನದ ಕೆಳಗೆ ಮೊಬೈಲ್‌ ಚಾರ್ಚಿಂಗ್‌ ಪಾಯಿಂಟ್‌, ಲಗೇಜ್‌ಗಳನ್ನಿರಿಸುವ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ, ಹವಾನಿಯಂತ್ರಣ ವ್ಯವಸ್ಥೆಯಲ್ಲೂ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಈ ವರ್ಷದ ಅಕ್ಟೋಬರ್‌ ಅಂತ್ಯದ ವೇಳೆಗೆ ಎಸಿರಹಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು, ಮುಂದಿನ ವರ್ಷದ ಜನವರಿಯಲ್ಲಿ 12 ಕೋಚ್‌ಗಳ ಮೆಟ್ರೋ ರೈಲುಗಳು ಮತ್ತು ಮಾರ್ಚ್‌ ವೇಳೆಗೆ ವಂದೇ ಭಾರತ್‌ ಸ್ಲಿàಪರ್‌ ಕೋಚ್‌ಗಳನ್ನು ಪರಿಚಯಿಸಲು ಭಾರತೀಯ ರೈಲ್ವೇ ತೀರ್ಮಾನಿಸಿದ್ದು ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ.

ಎಲ್ಲ ರೈಲುಗಳಿಗೆ ಸ್ವತಃ ಮೋದಿ ಚಾಲನೆ
ಜೂ. 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ಏಕಕಾಲದಲ್ಲಿ ದೇಶದ ವಿವಿಧೆಡೆಗಳಲ್ಲಿ ಸಂಚರಿಸಲಿರುವ ಐದು “ವಂದೇ ಭಾರತ್‌ ಎಕ್ಸ್‌ಪ್ರಸ್‌’ ರೈಲುಗಳಿಗೆ ವರ್ಚುವಲ್‌ ಮೂಲಕ ಹಸುರು ನಿಶಾನೆ ತೋರಿದ್ದರು. ಆ ಬಳಿಕ ಎರಡು ಮತ್ತು ಇತ್ತೀಚೆಗೆ ಸೆ. 24ರಂದು ಏಕಕಾಲದಲ್ಲಿ 9 ವಂದೇ ಎಕ್ಸ್‌ಪ್ರೆಸ್‌ ರೈಲುಗಳಿಗೆ ಹೀಗೆ ದೇಶದಲ್ಲಿ ಸದ್ಯ ಸಂಚಾರ ನಡೆಸುತ್ತಿರುವ ಎಲ್ಲ 34 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಪ್ರಧಾನಿ ಮೋದಿ ಅವರೇ ಚಾಲನೆ ನೀಡಿರುವುದು ವಿಶೇಷ.

ವಂದೇ ಭಾರತ್‌ ರೈಲುಗಳಿಗೆ ಕಲ್ಲು ತೂರಾಟ
ಒಂದೆಡೆಯಿಂದ ದೇಶಾದ್ಯಂತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಓಡಾಟ ಮತ್ತು ಸೇವೆ ವಿಸ್ತರಣೆಗೊಳ್ಳುತ್ತಿದ್ದರೆ ಮತ್ತೂಂದೆಡೆಯಿಂದ ದುಷ್ಕರ್ಮಿಗಳು ಈ ರೈಲುಗಳನ್ನು ಗುರಿಯಾಗಿಸಿ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ರೈಲು ಸೇವೆಗೆ ಮಸಿ ಬಳಿಯುವ ಕಾರ್ಯದಲ್ಲಿ ನಿರತವಾಗಿರುವ ಕಿಡಿಗೇಡಿಗಳು ದೇಶದ ವಿವಿಧೆಡೆ ಪದೇಪದೆ ಕಲ್ಲು ತೂರಾಟ ನಡೆಸುವ ಮೂಲಕ ಪ್ರಯಾಣಿಕರಲ್ಲಿ ಭಯ ಮೂಡಿಸುವ ಷಡ್ಯಂತ್ರದಲ್ಲಿ ನಿರತರಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ದುಷ್ಕರ್ಮಿಗಳು ಕೆಲವೊಂದೆಡೆ ವಂದೇ ಭಾರತ್‌ ರೈಲು ಸಂಚರಿಸುವ ಮಾರ್ಗದಲ್ಲಿ ರೈಲು ಹಳಿಗಳಿಗೆ ಹಾನಿ ಎಸಗುತ್ತಿದ್ದಾರೆ. ಆದರೆ ಕಿಡಿಗೇಡಿಗಳು ಮತ್ತು ವಿಘ್ನ ಸಂತೋಷಿಗಳ ಈ ಎಲ್ಲ ಷಡ್ಯಂತ್ರ, ಕುಕೃತ್ಯಗಳ ಹೊರತಾಗಿಯೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಯಾನಿಗಳಿಗೆ ಗುಣಮಟ್ಟದ ಸೇವೆ ಮತ್ತು ಸುಖಕರ ಪ್ರಯಾಣದ ಅನುಭವವನ್ನು ಒದಗಿಸಿಕೊಡುವ ಮೂಲಕ ದೇಶಾದ್ಯಂತ ಜನರ ಮನಗೆದ್ದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next