ಸಿಂಧನೂರು: ಜನರ ಬಹುಬೇಡಿಕೆಯ ಹಲವು ಅಭಿವೃದ್ಧಿ ಕೆಲಸಗಳಿಗೆ ಇಂದು ಚಾಲನೆ ನೀಡುತ್ತಿದ್ದು, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಶನಿವಾರ ಎಸ್‌ಎಚ್ 23ರ ವ್ಯಾಪ್ತಿಗೆ ಒಳಪಡುವ ರಾಯಚೂರು-ಕಲ್ಮಾಲಾ-ಶಿಗ್ಗಾವ್ ರಸ್ತೆ ವಿಸ್ತರಣೆಯ 5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
50 ಲಕ್ಷ ರೂ. ವೆಚ್ಚದಲ್ಲಿ ಜವಳಗೇರಾ ಗ್ರಾಮದಲ್ಲಿ ನಿರ್ಮಾಣವಾಗಿರುವ ರೈತ ಸಂಪರ್ಕ ಕೇಂದ್ರದ ಹೊಸ ಕಟ್ಟಡ ಲೋಕಾರ್ಪಣೆ ಮಾಡಲಾಗಿದೆ. ಹೊಸಳ್ಳಿ ಇಜೆ ಕ್ಯಾಂಪಿನಿಂದ ಹಟ್ಟಿ ಗ್ರಾಮದವರೆಗೆ ಪಿಡಬ್ಲ್ಯುಡಿ ಇಲಾಖೆಯಿಂದ 4 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ, ಸಿಂಧನೂರು ನಗರದ 23ನೇ ವಾರ್ಡ್ ನಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 17 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ, ವಾರ್ಡ್ 29ರಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಸಣ್ಣ ನೀರಾವರಿ ಇಲಾಖೆಯಿಂದ 8 ಕೋಟಿ ರೂ. ವೆಚ್ಚದಲ್ಲಿ ಅಲಬನೂರು ಗ್ರಾಮದ ರೈತರಿಗಾಗಿ ಏತ ನೀರಾವರಿ ಕಲ್ಪಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಚಂದ್ರುಭೂಪಾಲ ನಾಡಗೌಡ, ಮುಖಂಡರಾದ ಸಣ್ಣ ವೆಂಕಯ್ಯಶೆಟ್ಟಿ, ವೆಂಕಟೇಶ ನಂಜಲದಿನ್ನಿ, ಮುಳ್ಳುಪುಡಿ ನಾಗೇಶ್ ಸೇರಿದಂತೆ ಗ್ರಾಮದ ಮುಖಂಡರು, ಪಿಡಿಒ ಇದ್ದರು.
ಪಂಚರಾಜ್ಯ ಚುನಾವಣೆ ಪರಿಣಾಮವಿಲ್ಲ
ದೇಶದಲ್ಲಿ ಕಾಂಗ್ರೆಸ್ ಹೋಗಿದೆ. ಕೆಟ್ಟ ಪರಿಣಾಮ ಬೀರಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತಿದ್ದು, ನೀವೊಂದು ಸ್ವಲ್ಪ (ಜೆಡಿಎಸ್) ಉಸಿರಾಟ ಆಡುತ್ತಿದ್ದಾರೆ ಎಂದು ಅವರೇ ಸದನದಲ್ಲಿ ಹೇಳಿದ್ದಾರೆ ಎಂದು ಶಾಸಕ ವೆಂಕಟರಾವ್ ನಾಡಗೌಡ, ಜೆಡಿಎಸ್ ಅಸ್ತಿತ್ವ ಸಮರ್ಥಿಸಿಕೊಂಡರು.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಗೆದ್ದ ಮೇಲೆ ಮಾತನಾಡುತ್ತಾರೆ. ಅವರ ವಿರೋಧ ಇರುವುದು ಕಾಂಗ್ರೆಸ್ ವಿರುದ್ಧ. ನಾವೇನು ಇಡೀ ದೇಶದಲ್ಲಿ ಇಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಮೇಲೆ ಪಂಚ ರಾಜ್ಯ ಚುನಾವಣೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.