ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆಯ ಸವಾಲು ಎದುರಿಸುತ್ತಿರುವ ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆಗಳ ವಿಸ್ತರಣೆಗೆ ಯೋಜನೆ ರೂಪಿಸಿ ಹಲವು ವರ್ಷಗಳು ಕಳೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ನನೆಗುದಿದೆ ಬೀಳುವಂತಾಗಿದೆ.
ಬಳ್ಳಾರಿ ರಸ್ತೆ ಮೂಲಕ ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೆಬ್ಟಾಳ, ಯಲಹಂಕ ಹಾಗೂ ಬಳ್ಳಾರಿ ಸೇರಿದಂತೆ ಹಲವು ಭಾಗಗಳಿಗೆ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಆದರೆ, ರಸ್ತೆಗಳು ಕಿರಿದಾಗಿರುವುದರಿಂದ ಹಲವು ವರ್ಷಗಳಿಂದಲೂ ದಟ್ಟಣೆ ಸಮಸ್ಯೆ ಮುಂದುವರಿದಿದ್ದು, ಸಮಸ್ಯೆಗೆ ಪರಿಹಾರ ಒದಗಿಸುವಂತೆ ಜನರು ಹಲವು ವರ್ಷಗಳಿಂದ ಪಾಲಿಕೆಯನ್ನು ಒತ್ತಾಯಿಸುತ್ತಲೇ ಇದ್ದಾರೆ.
ದಟ್ಟಣೆ ಸಮಸ್ಯೆ ಪರಿಹಾರಿಸುವ ಉದ್ದೇಶದಿಂದ ಪಾಲಿಕೆ ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆ ಅಗಲೀಕರಣ ಕಾಮಗಾರಿಗೆ ಕೆಲವು ವರ್ಷಗಳ ಹಿಂದೆಯೇ ಚಾಲನೆ ನೀಡಿದೆ. ಆದರೆ, ಒಂದಲ್ಲ ಒಂದು ಸಮಸ್ಯೆಯಿಂದ ಯೋಜನೆಗೆ ಹಿನ್ನೆಡೆಯಾಗುತ್ತಿದ್ದು, ಜನರು ದಟ್ಟಣೆ ಸಮಸ್ಯೆಯಿಂದ ಬೇಸತ್ತಿದ್ದಾರೆ. ಹಿಂದಿನ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದರೂ, ರಸ್ತೆ ಅಗಲೀಕರಣ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಇದರ ನಡುವೆ ಅರಮನೆ ಮೈದಾನ ಜಾಗಕ್ಕೆ ಟಿಡಿಆರ್ ನೀಡುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪಾರ್ಕಿಂಗ್, ಬೀದಿ ವ್ಯಾಪಾರಕ್ಕೆ ಬಳಕೆ: ಜಯಮಹಲ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಪಾಲಿಕೆಯಿಂದ ವಿಸ್ತರಿಸಿರುವ ರಸ್ತೆಯು ವಾಹನ ಸವಾರರಿಗಿಂತಲೂ ಖಾಸಗಿ ವಾಹನಗಳ ನಿಲುಗಡೆ ಹಾಗೂ ಬೀದಿ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗಿದೆ. ಪಾಲಿಕೆಯಿಂದ ಎರಡೂ ರಸ್ತೆಗಳಲ್ಲಿ ರಸ್ತೆ ಅಗಲೀಕರಣ ಮಾಡಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ರಸ್ತೆ ಬಳಕೆಗೆ ಯೋಗ್ಯವಿಲ್ಲದಂತಾಗಿದೆ.
Advertisement
ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆಗಳಲ್ಲಿ ನಿತ್ಯ ಸಂಚಾರ ದಟ್ಟಣೆ ಇದ್ದು, ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಹನ ಸವಾರರು ಗಂಟೆಗಟ್ಟಲೇ ರಸ್ತೆಯಲ್ಲಿ ನಿಲ್ಲಬೇಕಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಪಾಲಿಕೆಯಿಂದ ರಸ್ತೆ ಅಗಲೀಕರಣ ಯೋಜನೆ ಕೈಗೆತ್ತಿಕೊಂಡರೂ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ.
Related Articles
Advertisement
ಟಿಡಿಆರ್ ನೀಡುವ ಬಗ್ಗೆ ಗೊಂದಲ: ಮೇಖ್ರೀ ವೃತ್ತದಿಂದ ಬಿಡಿಎ ಜಂಕ್ಷನ್‌ವರೆಗೆ 45 ಮೀಟರ್, ಮೇಖ್ರೀವೃತ್ತದಿಂದ ಫನ್‌ವಲ್ಡ್ರ್ವರೆಗೆ 45 ಮೀಟರ್ ಹಾಗೂ ಅಲ್ಲಿಂದ ದಂಡು ರೈಲ್ವೆ ನಿಲ್ದಾಣದವರಿಗೆ 30 ಮೀಟರ್ ರಸ್ತೆಯನ್ನು ಅಗಲೀಕರಣ ಮಾಡಲು ಪಾಲಿಕೆ ಯೋಜನೆ ರೂಪಿಸಿದೆ. ಯೋಜನೆಗಾಗಿ ಒಟ್ಟಾರೆಯಾಗಿ 15.39 ಎಕರೆ ಜಮೀನು ಅಗತ್ಯವಿದ್ದು, ಇದಕ್ಕಾಗಿ 1300 ಕೋಟಿ ರೂ. ಟಿಡಿಆರ್ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಅರಮನೆ ಮೈದಾನದ ಒಡೆತನ ವಿಚಾರಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿರುವುದು ಯೋಜನೆಗೆ ಹಿನ್ನಡೆಯುಂಟು ಮಾಡುತ್ತಿದೆ.
ಕಾಡುತ್ತಿದೆ ಒಳಚರಂಡಿ ನೀರಿನ ದುರ್ವಾಸನೆ
ಯಶವಂತಪುರ ಕೈಗಾರಿಕಾ ಪ್ರದೇಶದ ಬಹುತೇಕ ಭಾಗಗ ಳಲ್ಲಿ ಒಳಚರಂಡಿ ನೀರು ಹೊರಬರುತ್ತಿರುವುದರಿಂದ ಸುತ್ತಮುತ್ತಲಿನ ಭಾಗಗಳಲ್ಲಿ ತೀವ್ರ ದುರ್ವಾಸನೆ ಹರಡಿದೆ. ಇನ್ನು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಒಳಚರಂಡಿ ತ್ಯಾಜ್ಯವೂ ರಸ್ತೆಗೆ ಬರುತ್ತಿದ್ದು ಜನರು ಸಂಚರಿಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾ ಗಿದೆ ಎಂದು ಇಲ್ಲಿನ ಖಾಸಗಿ ಕಂಪೆನಿಯ ಉದ್ಯೋಗಿ ಸತೀಶ್ ನಾಯಕ್ ಎಂಬುವರು ಆರೋಪಿಸಿದ್ದಾರೆ.
ಲಕ್ಷಾಂತರ ವೆಚ್ಚದಲ್ಲಿ ಮರಗಳ ಹಸ್ತಾಂತರ
ಜಯಮಹಲ್ ರಸ್ತೆ ವಿಸ್ತರಣೆಗಾಗಿ 112 ಮರಗಳನ್ನು ತೆರವುಗೊಳಿಸಲು ಪಾಲಿಕೆ ಮುಂದಾದಾಗ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ 52ಕ್ಕೂ ಹೆಚ್ಚಿನ ಮರಗಳನ್ನು ಸ್ಥಳಾಂತರ ಮಾಡಲು ಪಾಲಿಕೆ ಯೋಜನೆ ರೂಪಿಸಿತ್ತು. ಮೊದಲ ಹಂತವಾಗಿ 15 ಮರಗಳನ್ನು ತೆಗೆದು ಅರಮನೆ ಮೈದಾನದಲ್ಲಿ ಮರುನಾಟಿ ಮಾಡಲಾಗಿತ್ತು. ಈ ವೇಳೆ ಪ್ರತಿ ಮರ ಸ್ಥಳಾಂತರಕ್ಕೆ ಪಾಲಿಕೆ 50 ಸಾವಿರ ರೂ. ವೆಚ್ಚ ಮಾಡಿತ್ತಾದರೂ ಯೋಜನೆ ಮಾತ್ರ ಪೂರ್ಣಗೊಂಡಿಲ್ಲ.