Advertisement

ಸಂಪುಟ ವಿಸ್ತರಣೆ ಸರ್ಕಸ್‌: ಹೈಕಮಾಂಡ್‌ ಅಂಗಳದಲ್ಲಿದೆ ವಿಸ್ತರಣೆ ಚೆಂಡು

06:00 AM Dec 21, 2018 | Team Udayavani |

ಬೆಳಗಾವಿ: ಡಿಸೆಂಬರ್‌ 22ರಂದು ಸಂಪುಟ ವಿಸ್ತರಣೆ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ಅನುಮತಿಗಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಗುರುವಾರ ದೆಹಲಿಗೆ ತೆರಳಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಈಗಾಗಲೇ ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂದು ರಾಜ್ಯ ನಾಯಕರು ಯೋಜಿಸಿದ್ದು, ಪುನಾರಚನೆ ಆಗಬೇಕೆಂಬ ಬೇಡಿಕೆಯೂ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ನಾಯಕರಲ್ಲಿ ಗೊಂದಲ ಇರುವುದರಿಂದ ಹೈ ಕಮಾಂಡ್‌ ಸೂಚನೆ ಮೇರೆಗೆ ಮುಂದಡಿ ಇಡಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತ ಸಮುದಾಯದಲ್ಲಿ ಎಂ.ಬಿ.ಪಾಟೀಲ್‌, ಎಸ್‌.ಆರ್‌.ಪಾಟೀಲ್‌ ಅಥವಾ ಬಿ.ಸಿ. ಪಾಟೀಲ್‌, ಒಕ್ಕಲಿಗ ಸಮುದಾಯದಲ್ಲಿ ಎಂ.ಕೃಷ್ಣಪ್ಪ ಅಥವಾ ಎಸ್‌.ಟಿ.ಸೋಮಶೇಖರ್‌, ದಲಿತ ಎಡಗೈ ಸಮುದಾಯದಲ್ಲಿ ರೂಪಕಲಾ ಶಶಿಧರ್‌ ಅಥವಾ ಆರ್‌.ಬಿ.ತಿಮ್ಮಾಪುರ ಹೆಸರು ಪಟ್ಟಿಯಲಿವೆ ಎಂದು ಹೇಳಲಾಗುತ್ತಿದೆ.

ಅಲ್ಪ ಸಂಖ್ಯಾತ ಕೋಟಾದಡಿ ತನ್ವೀರ್‌ ಸೇಠ್ ಅಥವಾ ರಹೀಂ ಖಾನ್‌, ವಾಲ್ಮೀಕಿ ಸಮುದಾಯದಿಂದ ತುಕಾರಾಂ ಅಥವಾ ಪಿ.ಟಿ. ಪರಮೇಶ್ವರ ನಾಯ್ಕ, ಇನ್ನು ಹಿಂದುಳಿದ ವರ್ಗಗಳ ಸಮುದಾಯದಿಂದ ಎಂ.ಟಿ.ಬಿ.ನಾಗರಾಜ್‌, ಸಿ.ಎಸ್‌.ಶಿವಳ್ಳಿ ಹಾಗೂ ಎಚ್‌.ಎಂ.ರೇವಣ್ಣ ಹೆಸರು ಕೇಳಿ ಬರುತ್ತಿವೆ.

ಜಯಮಾಲಾಗೆ ಕೊಕ್‌?:
ಸಂಪುಟ ಪುನಾರಚನೆ ಮಾಡುವುದಾದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರನ್ನು ಕೈ ಬಿಟ್ಟು, ಮಹಿಳಾ ಕೋಟಾದಡಿ ದಲಿತ ಎಡಗೈ ಸಮುದಾಯಕ್ಕೆ ಸೇರಿದ ರೂಪಕಲಾ ಶಶಿಧರ್‌ ಅವರಿಗೆ ಅವಕಾಶ ದೊರೆಯಬಹುದು ಎಂದು ಹೇಳಲಾಗುತ್ತಿದೆ. ಜಯಮಾಲಾ ಅವರನ್ನು ಸಂಪುಟದಿಂದ ಕೈ ಬಿಡದೇ ಹೋದರೆ, ದಲಿತ ಎಡಗೈ ಸಮುದಾಯದ ಆರ್‌.ಬಿ.ತಿಮ್ಮಾಪುರ್‌ಗೆ ಅವಕಾಶ ಒಲಿಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಪರಿಷತ್‌ ಕೋಟಾದಡಿ ಎಸ್‌.ಆರ್‌.ಪಾಟೀಲ್‌ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಹಿಳಾ ಕೋಟಾ ಹಾಗೂ ಹಿಂದುಳಿದ ವರ್ಗದ ಮಹಿಳಾ ಕೋಟಾದಲ್ಲಿ ಅಂಜಲಿ ನಿಂಬಾಳ್ಕರ್‌ ಹೆಸರೂ ಬಲವಾಗಿ ಕೇಳಿ ಬರುತ್ತಿದೆ. ಇವರ ಮಧ್ಯೆಯೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಸಂಪುಟದಲ್ಲಿ ಸ್ಥಾನ ಪಡೆಯಲು ಹೈ ಕಮಾಂಡ್‌ ಮಟ್ಟದಲ್ಲಿ ತಮ್ಮದೇ ಆದ ರೀತಿಯಲ್ಲಿ ಲಾಬಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವರಾದ ಆರ್‌.ಶಂಕರ್‌, ವೆಂಕಟರಮಣಪ್ಪ ಹಾಗೂ ಪುಟ್ಟರಂಗಶೆಟ್ಟಿ ಅವರನ್ನೂ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದ್ದು, ಅವರಿಗೆ ಪರ್ಯಾಯವಾಗಿ ಹಿಂದುಳಿದ ವರ್ಗದ ಶಾಸಕರಿಗೆ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆ ಇದೆ.

Advertisement

ರಾಹುಲ್‌ ಭೇಟಿ ನಂತರ ಸ್ಪಷ್ಟತೆ:
ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕೋ, ಬೇಡವೋ ಎನ್ನುವ ಬಗ್ಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ರಾಜ್ಯ ನಾಯಕರ ಜೊತೆ ಶುಕ್ರವಾರ ಬೆಳಗ್ಗೆ ಮಾತುಕತೆ ನಡೆಸಿ, ಸಂಪುಟ ವಿಸ್ತರಣೆಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಶುಕ್ರವಾರ ಸಂಜೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ಕಾರ್ಯಕ್ರಮವಿದ್ದು, ಅವರು ಶಿಮ್ಲಾದಿಂದ ವಾಪಸ್ಸಾಗಿ ಮಧ್ಯಪ್ರದೇಶ, ಛತ್ತೀಸ್‌ಗಡ ಹಾಗೂ ರಾಜಸ್ಥಾನ ಸರ್ಕಾರಗಳ ಸಂಪುಟ ವಿಸ್ತರಣೆ ಕುರಿತಂತೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮೂರು ರಾಜ್ಯಗಳ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದ ನಂತರ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ನಿಗಮ ಮಂಡಳಿ, ಕಾರ್ಯದರ್ಶಿ ಹುದ್ದೆಗಳಿಗೂ ಒಪ್ಪಿಗೆ ಸಾಧ್ಯತೆ
ಒಂದೊಮ್ಮೆ ಡಿ. 22ರಂದೇ ಸಂಪುಟ ವಿಸ್ತರಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಒಪ್ಪಿಗೆ ನೀಡಿದರೆ, ನಿಗಮ- ಮಂಡಳಿ ಅಧ್ಯಕ್ಷರು ಹಾಗೂ ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೂ ನೇಮಕ ಮಾಡುವ ಕುರಿತಂತೆಯೂ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಒಪ್ಪಿಗೆ ದೊರೆತರೂ ಜನವರಿ 9 ರ ನಂತರ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಹೆಚ್ಚಿದ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next