ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಜುಲೈ 31ರವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ.
ಲಾಕ್‌ಡೌನ್‌ನಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಕುರಿತಂತೆ ಎಲ್ಲ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಈ ವಿಷಯ ತಿಳಿಸಿದರು.
ರಾಜ್ಯ ಐಟಿ ವಲಯ ಎದುರಿಸುತ್ತಿರುವ ಸವಾಲುಗಳು, ಕಂಡುಕೊಂಡಿರುವ ಪರಿಹಾರ ಗಳು ಮತ್ತು ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ಸಚಿವರಿಗೆ ವಿವರಿಸಿದ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ| ಸಿ.ಎನ್.ಅಶ್ವತ್ಥನಾರಾಯಣ, ರಾಜ್ಯದ ಐಟಿ ವೃತ್ತಿ ಪರರಿಗೆ ಮುಂದಿನ ವರ್ಷದ ಮಾರ್ಚ್‌ವರೆಗೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಸದ್ಯ ಜುಲೈ 31ರ ವರೆಗೆ ವರ್ಕ್ ಫ್ರಮ್ ಹೋಂ ಸೌಲಭ್ಯ ವಿಸ್ತರಣೆ ಮಾಡಲಾಗುವುದು. ಪರಿಸ್ಥಿತಿ ನೋಡಿಕೊಂಡು ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯತಂತ್ರ ಸಮಿತಿ
ಕೋವಿಡ್-19 ದಂಥ ಪರಿಸ್ಥಿತಿ ಎದುರಾದಾಗ ಐಟಿ ಮತ್ತು ಸಂಬಂಧಿತ ವಲಯಗಳು ಯಾವ ರೀತಿ ಕಾರ್ಯ ನಿರ್ವಹಿಸಬೇಕು, ವಿಪತ್ತಿನ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ, ಪರಿಹಾರ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ರಾಷ್ಟ್ರ ಮಟ್ಟದ ಕಾರ್ಯತಂತ್ರ ಸಮಿತಿ ರಚಿಸಲಾಗುವುದು ಎಂದು ರವಿಶಂಕರ್ ಪ್ರಸಾದ್ ತಿಳಿಸಿದರು.
ಕೋವಿಡ್ ಸಮಸ್ಯೆ ಎದುರಾದಾಗಿನಿಂದ ಶೇ. 80ರಷ್ಟು ಐಟಿ ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಕೆಲಸ ಕಾರ್ಯಗಳು ಆನ್‌ಲೈನ್ ಮೂಲಕವೇ ನಡೆ ಯುತ್ತಿವೆ. “ಭಾರತ್ ನೆಟ್’ ಯೋಜನೆ ಮೂಲಕ ದೇಶದ ಮೂಲೆಮೂಲೆಗೂ ಇಂಟರ್ನೆಟ್ ಸಂಪರ್ಕ ಜಾಲ ಬಲಪಡಿಸಲಾಗುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಗಳ ಕಾರ್ಯರೂಪಕ್ಕೆ ಇದು ಸಕಾಲ ಎಂದು ಹೇಳಿದರು.