ದೇವನಹಳ್ಳಿ: ವೈಯಕ್ತಿಕ ಸಮಸ್ಯೆಗಳ ನಡುವೆಯೂ ಕಚೇರಿ ಕೆಲಸ ಹಾಗೂ ಹಿರಿಯ ಅಧಿಕಾರಿಗಳ ಒತ್ತಡದ ಮಧ್ಯ ಕೆಲಸ ಮಾಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದೇವೆ ರಾಜ್ಯ ಸರ್ಕಾರ ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಯೋಜನೆ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್.ಬೈರಪ್ಪ ಒತ್ತಾಯಿಸಿದರು.
ನಗರದ ನಗರೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ 2ನೇ ವರ್ಷದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಹೊರತುಪಡಿಸಿ ಇನ್ನಿತರೆ ರಾಜ್ಯಗಳಲ್ಲಿ ನಿವೃತ್ತರಿಗೆ ಪ್ರತ್ಯೇಕ ವೈದ್ಯಕೀಯ ವೆಚ್ಚಕ್ಕಾಗಿ 500 ರಿಂದ 1200 ರೂ. ವರೆಗೆ ಪ್ರತಿ ತಿಂಗಳು ನೀಡಲಾಗುತ್ತಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಜ್ಯೋತಿ ಸಂಜೀವಿನಿ ಮತ್ತು ಆಯುಷ್ಮಾನ್ ಯೋಜನೆ ಅಡಿಯಲ್ಲಿ ನಿವೃತ್ತರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಹೋರಾಟ ಎಚ್ಚರಿಕೆ: ವೈದ್ಯಕೀಯ ವೆಚ್ಚದ ಕುರಿತು ಹಲವು ಬಾರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನೌಕರರಿಗೆ ಕರ್ತವ್ಯ ಸಂದರ್ಭದಲ್ಲಿರುವ ಗೌರವ ನಿವೃತ್ತಿಯಾದ ಮೇಲೆ ಇರುವುದಿಲ್ಲ. ಸಕಾಲದಲ್ಲಿ ಪಿಂಚಣಿ ಸಿಗದೆ ಪರಾದಾಡಬೇಕಾಗಿದೆ. ಇನ್ನಿತರೆ ಭತ್ಯೆಗಳು ಸಹ ಸಿಗುತ್ತಿಲ್ಲ. ನಾವು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. ವೈದ್ಯಕೀಯ ಭತ್ಯೆ ನೀಡದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಸರ್ಕಾರದ ನಿರ್ಲಕ್ಷ್ಯ: ರಾಜ್ಯದಲ್ಲಿ 4.2 ಲಕ್ಷ ನಿವೃತ್ತ ಸರ್ಕಾರಿ ನೌಕರರಿದ್ದು, 95 ಸಾವಿರ ಕುಟುಂಬಗಳು ಮರಣೋತ್ತರ ಪಿಂಚಣಿ ಪಡೆಯುತ್ತಿದ್ದಾರೆ. ಒತ್ತಡ, ನೊವು ಸಂಕಷ್ಟ ಗಳನ್ನು ಅನುಭವಿಸಿ 35 ರಿಂದ 37 ವರ್ಷ ಸರ್ಕಾರಿ ಸೇವೆ ಸಲ್ಲಸಿದವರನ್ನು ನಿವೃತ್ತಿ ನಂತರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಿಕಟ ಪೂರ್ವ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಒಪ್ಪಿದರೂ, ಆರ್ಥಿಕ ಇಲಾಖೆ ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸರ್ಕಾರಿ ನಿವೃತ್ತ ನೌಕರರ ಸಂಘ 60 ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬಂದಿದೆ. ಪ್ರತಿ ಹೋಬಳಿ ಗ್ರಾಮ ಮಟ್ಟದಲ್ಲೂ ಸಂಘ ಇದ್ದು, ಸಂಘಟಿತರಾಗಿ ನಮ್ಮ ಹಕ್ಕುಗಳನ್ನು ಪಡೆಯಬೇಕಾಗಿದೆ ಎಂದರು.
ಈ ವೇಳೆ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಹಾ ಲಿಂಗಯ್ಯ, ಗೌರವಾಧ್ಯಕ್ಷ ಕೆಂಪಗಂಗಯ್ಯ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಕೋಶಾಧ್ಯಕ್ಷ ಅಶ್ವಥ್ ನಾರಾಯಣ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರೀ ದೇವಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ್ ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ, ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶ್ರೀರಾಮಯ್ಯ,
ಪ್ರಧಾನ ಕಾರ್ಯದರ್ಶಿ ಗುರು ಸಿದ್ಧಯ್ಯ, ನೆಲಮಂಗಲ ತಾಲೂಕು ಅಧ್ಯಕ್ಷ ಪುಟ್ಟಯ್ಯ, ಹೊಸಕೋಟೆ ತಾಲೂಕು ಅಧ್ಯಕ್ಷ ಕೆ.ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಚಿಕ್ಕಣ್ಣಪ್ಪ, ಸರ್ಕಾರಿ ನಿವೃತ್ತ ನೌಕರರಾದ ಚೆನ್ನಪ್ಪ, ರಾಮಾಂಜನೇಯ, ಎಲ್. ಎಸ್.ಚಂದ್ರಪ್ಪ, ಚನ್ನಕೇಶವ ರೆಡ್ಡಿ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ ಇದ್ದರು.