Advertisement
ಇದು ಹೊಸ ಟೋಲ್ ನಿಯಮ ಜಾರಿಯಾದರೆ ಪ್ರಯಾಣಿಕರು ರಸ್ತೆಯಲ್ಲಿ ಪ್ರಯಾಣಿಸಿದಷ್ಟು ದೂರ ಮಾತ್ರ ಟೋಲ್ ಶುಲ್ಕ ಪಾವತಿಸಬಹುದು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಎನ್ ಎಚ್‌ಎಐ 688 ಕೋಟಿ ರೂ.ನಲ್ಲಿ, ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆದಿದೆ. ಎಂಟ್ರಿ ಎಕ್ಸಿಟ್‌ಗಳನ್ನು ಕ್ಲೋಸ್ಡ್ ಟೋಲ್‌ಗಳಾಗಿ ಪರಿವರ್ತಿಸುವ ಕಾಮಗಾರಿಯೂ ಈ ಟೆಂಡರ್ ನಲ್ಲಿ ಒಳಗೊಂಡಿದೆ ಎಂದು ಎನ್‌ಎಚ್‌ಎಐ ಮೂಲಗಳು ತಿಳಿಸಿವೆ. ಇದು ಜಾರಿಯಾದ್ರೆ ಸ್ವಲ್ಪ ದೂರ ಪ್ರಯಾಣಿಸಿದರೂ ಪೂರ್ಣ ಟೋಲ್ ಪಾವತಿಸುವುದು ತಪ್ಪಲಿದೆ.
Related Articles
Advertisement
ಭೂ ಸ್ವಾಧೀನಕ್ಕೆ 500 ಕೋಟಿ ರೂ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನ ಎಂಟ್ರಿ ಎಕ್ಸಿಟ್‌ಗಳ ಬಳಿಕ ಟೋಲ್‌ಪ್ಲಾಜಾ ನಿರ್ಮಾಣ ಹಾಗೂ ರಸ್ತೆ ಅಗಲೀಕರಣಕ್ಕೆ ಬೇಕಿರುವ ಅಗತ್ಯವಿರುವ ಭೂಮಿ ಗುರುತಿಸಿ ನೀಲನಕ್ಷೆ ಸಿದ್ಧಪಡಿಸಿರುವ ಎನ್‌ಎಚ್‌ಎಐ 500 ಕೋಟಿ ರೂ. ಹಣ ನಿಗದಿಪಡಿಸಿದೆ.
ಹೊಸ ಟೋಲ್ ವ್ಯವಸ್ಥೆ ಹೇಗಿರುತ್ತದೆ? : ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರಿನಿಂದ ಮೈಸೂರು ವರೆಗೆ 118 ಕಿ.ಮೀ. ನಷ್ಟು 6 ಪಥಗಳ ಎಕ್ಸ್‌ಪ್ರೆಸ್ ವೇಗೆ ಟೋಲ್ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಪಂಚಮುಖೀ ಗಣಪತಿ ದೇವಾಲಯದಿಂದ ನಿಡಘಟ್ಟ ವರೆಗೆ ಮೊದಲ ಹಂತದ ಎಕ್ಸ್‌ಪ್ರೆಸ್ ವೇ 56 ಕಿ.ಮೀ. ದೂರ ಇದ್ದು, ಈ ರಸ್ತೆಗೆ ವಾಹನದ ಮಾದರಿಯನ್ನು ಆಧರಿಸಿ 165 ರೂ. ನಿಂದ 1,080 ರೂ. ವರೆಗೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಬೆಂಗಳೂರಿನಿಂದ ಮೈಸೂರು ಕಡೆ ಹೋಗುವವರು ಕಣ್ಮಿಣಕಿ ಬಳಿ, ಬೆಂಗಳೂರಿಗೆ ಹೋಗುವವರು ಬಿಡದಿಯ ಶೇಷಗಿರಿ ಹಳ್ಳಿ ಬಳಿ ಟೋಲ್‌ಶುಲ್ಕ ಪಾವತಿಸಬೇಕು. ಬೆಂಗಳೂರಿನಿಂದ ಹೊರಟವರು, ಬಿಡದಿಗೆ ಹೋಗಲಿ, ನಿಡಘಟ್ಟ ವರೆಗೆ ಪ್ರಯಾಣಿಸಲಿ 165 ರೂ. ನಿಂದ 1,080 ರೂ. ವರೆಗೆ ಶುಲ್ಕವನ್ನು ಪಾವತಿಸಬೇಕು.
ಇನ್ನು ನಿಡಘಟ್ಟದಿಂದ ಮೈಸೂರು ವರೆಗೆ 62 ಕಿ.ಮೀ.ಉದ್ದ ರಸ್ತೆ ಇದ್ದು ಇಲ್ಲಿಗೆ ಶ್ರೀರಂಗಪಟ್ಟಣದ ಗಣಂಗೂರು ಬಳಿ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕವನ್ನು ಪಾವತಿಸಬೇಕಿದೆ. ಇಲ್ಲಿ ಟೋಲ್ ಶುಲ್ಕ 155 ರೂ. ನಿಂದ 1005 ರೂ.ವರೆಗೆ ಇದೆ. ಈಗ ಹೊಸದಾಗಿ ಎಂಟ್ರಿ ಎಕ್ಸಿಟ್‌ಗಳಲ್ಲಿ ಟೋಲ್ ಬೂತ್‌ಗಳನ್ನು ಅಳವಡಿಸುವುದ ರಿಂದ ಪ್ರಯಾಣಿಕರು ಯಾವ ಟೋಲ್‌ನಿಂದ ಯಾವ ಟೋಲ್‌ಗೆ ಸಂಚರಿಸುತ್ತಾರೋ ಅಷ್ಟು ಮಾತ್ರ ಹಣ ಪಾವತಿ ಮಾಡಬೇಕು. ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಬಳಿ ಸ್ಕ್ಯಾನ್ ಆಗಿ, ಸಂಚರಿಸಿದಷ್ಟು ದೂರಕ್ಕೆ ಮಾತ್ರ ಶುಲ್ಕ ಕಡಿತವಾಗುತ್ತದೆ. ಇನ್ನು ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಟೋಲ್ ಪ್ಲಾಜಾದಲ್ಲಿ ಎಂಟ್ರಿ ಪಡೆಯುವಾಗಲೇ ಶುಲ್ಕ ಪಾವತಿ ಮಾಡಿ ಪ್ರವೇಶಿಸಬೇಕಾಗುತ್ತದೆ.
ಮಾರ್ಚ್ ವೇಳೆಗೆ ಕಾಮಗಾರಿ ಆರಂಭ : ಎನ್‌ಎಚ್‌ಎಐ ಹೊಸ ಕಾಮಗಾರಿ ಗಳಿಗೆ ಕರೆದಿರುವ ಟೆಂಡರ್ ಫೆ.19ಕ್ಕೆ ಕೊನೆಗೊಳ್ಳಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ 6 ತಿಂಗಳೊಳಗೆ ಕಾಮಗಾರಿ ಆರಂಭವಾಗಿ ಪೂರ್ಣಗೊಳ್ಳಲಿದೆ ಎಂದು ಎನ್ ಎಚ್‌ಎಐ ಮೂಲಗಳ ತಿಳಿಸಿವೆ.
ಎನ್‌ಎಚ್-275ರಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿವು :
ನೈಸ್ ರಸ್ತೆ ಜಂಕ್ಷನ್ ಸಮೀಪ ಪಂಚಮುಖೀ ಗಣಪತಿ ದೇಗುಲದಿಂದ, ಎಲಿವೇಟೆಡ್ ರಸ್ತೆವರೆಗಿನ ರಸ್ತೆ ಅಗಲೀಕರಣ, ಮೈಸೂರಿನ ಮಣಿಪಾಲ್ ಆಸ್ಪತ್ರೆ ವೃತ್ತದಲ್ಲಿ ರಸ್ತೆ ಅಭಿವೃದ್ಧಿ.
ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ನಗರಗಳ ಎಂಟ್ರಿ ಮತ್ತು ಎಕ್ಸಿಟ್‌ಗಳನ್ನು ಓಪನ್‌ನಿಂದ ಕ್ಲೋಸ್ಡ್ ಟೋಲ್ ಆಗಿ ಪರಿವರ್ತನೆ
ಡಿವೈಡರ್ ಹಾರಿ ಮತ್ತೂಂದು ಬದಿಯ ವಾಹನಕ್ಕೆ ಡಿಕ್ಕಿ ಹೊಡೆಯು ವುದನ್ನು ತಪ್ಪಿಸಲು ಮೆಟಲ್ ಬೀಮ್ ಅಳವಡಿಕೆ, ಅಗತ್ಯವಿರುವ ಕಡೆ ವಿದ್ಯುತ್ ದೀಪ ಅಳವಡಿಕೆ
ಶಿಂಷಾನದಿ ಬಳಿ ನನೆಗುದಿಗೆ ಬಿದ್ದಿರುವ ಸರ್ವೀಸ್ ರಸ್ತೆ ನಿರ್ಮಾಣ, ಬಸ್ ಬೇ ಮತ್ತು ಶೆಲ್ಟರ್‌ಗಳು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಕೆಲವೆಡೆ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ
ತುರ್ತು ನಿರ್ಗಮನಕ್ಕೆ ಅಗತ್ಯವಿರುವ ಕಡೆ ಸ್ಲೈಡಿಂಗ್ ಗೇಟ್‌ಗಳ ನಿರ್ಮಾಣ
ರಸ್ತೆ ಅವ್ಯವಸ್ಥೆ ಬಗ್ಗೆ ಸಾಕಷ್ಟು ದೂರು ಬಂದಿವೆ. ಅಗತ್ಯ ಕಾಮಗಾರಿಗಳಿಗೆ ಸರ್ಕಾರ 688 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಭೂಸ್ವಾಧೀನಕ್ಕೂ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಕಡಿಮೆ ದೂರು ಪ್ರಯಾಣಿಸುವ ಪ್ರಯಾಣಿಕರು ಹೆಚ್ಚು ಶುಲ್ಕ ಪಾವತಿಸುವುದು ತಪ್ಪಲಿದೆ. -ಡಿ.ಕೆ.ಸುರೇಶ್, ಸಂಸದ.
– ಸು.ನಾ.ನಂದಕುಮಾರ್