ಬೆಂಗಳೂರು: ಮುಂದಿನ ಎರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದ್ದಾಗ ಬಸವರಾಜ ಬೊಮ್ಮಾಯಿ ನಿರ್ಗಮನದ ಬಜೆಟ್ ಮಂಡಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ಪೈಕಿ 56 ಅನುಷ್ಠಾನ ಮಾಡಿಲ್ಲ. ಬಿಜೆಪಿ ಪ್ರಣಾಳಿಕೆ ಮೂಲಕ ನೀಡಿದ್ದ 600 ಭರವಸೆಗಳಲ್ಲಿ ಶೇ.90 ರಷ್ಟು ಈಡೇರಿಸಿಲ್ಲ. ಈ ಬಜೆಟ್ ಪುಸ್ತಕದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳ ಮಾಹಿತಿಯೇ ಇಲ್ಲ ಎಂದು ದೂರಿದ್ದಾರೆ. ಆಡಿ ಮಾಡುವವನು ಮಧ್ಯಮನು, ತಾನಾಡಿಯೂ ಮಾಡದವನು ಅಧಮನು ಎಂಬ ವಚನ ಬಿಜೆಪಿ ಸರ್ಕಾರಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ 2 ಲಕ್ಷದ 2 ಸಾವಿರ ಕೋಟಿ ಬಜೆಟ್ ಗಾತ್ರದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಗೆ 30 ಸಾವಿರ ಕೋಟಿ ಹಣ ನೀಡಿದ್ದೆವು, ಆದರೆ ಈಗ ಬಜೆಟ್ ಗಾತ್ರ 3 ಲಕ್ಷದ 9ಸಾವಿರ ಕೋಟಿ ಇದ್ದರೂ ಈ ಯೋಜನೆಗೆ ನೀಡಿರುವ ಅನುದಾನ 30 ಸಾವಿರ ಕೋಟಿಯೇ ಇದೆ. ಇದರ ಪ್ರಮಾಣ 50 ಸಾವಿರ ಕೋಟಿ ರೂ. ಆಗಬೇಕಿತ್ತು. ಇದು ದಲಿತರಿಗೆ, ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಮಾಡಿರುವ ದೊಡ್ಡ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ನೌಕಕರಿಗೆ 7ನೇ ವೇತನ ಆಯೋಗ ರಚನೆ ಮಾಡಿರುವುದರಿಂದ ಸಂಬಳ ಜಾಸ್ತಿಯಾಗುತ್ತದೆ ಎಂಬ ನಿರೀಕ್ಷೆಯಿತ್ತು ನಮ್ಮ ಸರ್ಕಾರ ಇದ್ದಾಗ 6ನೇ ವೇತನ ಆಯೋಗ ಜಾರಿ ಮಾಡಿ 10,600 ಕೋಟಿ ಅನುದಾನ ನೀಡಿದ್ದೆ. ಈ ಬಜೆಟ್ ನಲ್ಲಿ 7ನೇ ವೇತನ ಆಯೋಗದ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.
ಈ ವರ್ಷದ ಅಂತ್ಯಕ್ಕೆ 5,64,896 ಕೋಟಿ ರೂ. ಸಾಲ ಆಗುತ್ತದೆ ಎಂದು ಹೇಳಿದ್ದಾರೆ. ನಾವು ಅಧಿಕಾರದಿಂದ ಇಳಿದಾಗ ರಾಜ್ಯದ ಮೇಲೆ 2 ಲಕ್ಷದ 42 ಸಾವಿರ ಕೋಟಿ ರೂ. ಇತ್ತು, ಅಂದರೆ ಈಗ 3 ಲಕ್ಷದ 22 ಸಾವಿರ ಕೋಟಿ ಸಾಲ ಹೆಚ್ಚಾಗಿದೆ. ಬಿಜೆಪಿ ಸರ್ಕಾರ 2.54 ಲಕ್ಷ ಕೋಟಿ ರೂ. ಸಾಲ ಮಾಡಿದ್ದು ವರ್ಷಕ್ಕೆ ಅಸಲು ಬಡ್ಡಿ 48 ಸಾವಿರ ಕೋಟಿ ರೂ. ಕಟ್ಟಬೇಕಾಗುತ್ತದೆ. ಜನರ ಮೇಲೆ ಹೊರೆ ಹಾಕಿದೆ ಎಂದು ದೂರಿದ್ದಾರೆ.