ದೇಶದಲ್ಲಿ ಏಕ ಚಕ್ರಾಧಿಪತ್ಯ ಸ್ಥಾಪಿಸಿದ್ದ ಕಾಂಗ್ರೆಸ್ ಈಗ ವಾಸ್ತವ ದಲ್ಲಿ ಬೆರಳೆಣಿಕೆಯಷ್ಟೇ ರಾಜ್ಯಗಳಲ್ಲಿ ಸ್ಥಾನ ಉಳಿಸಿಕೊಂಡಿದೆ. ಒಂದೂ ಕಾಲು ಶತಮಾನಕ್ಕಿಂತಲೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದ, ದೇಶದ ಆಧುನಿಕ ಇತಿಹಾಸದ ಪ್ರತಿಯೊಂದು ಪುಟದ ಭಾಗವಾಗಿರುವ ಈ ಪಕ್ಷ ಈಗ ಕುಸಿಯುತ್ತಾ ಸಾಗಿದೆ ಎಂದೇ ವಿಮರ್ಶಕರ ಭಾವನೆ. ಹಾಗೆಂದು ಅಲ್ಲಿ ಇಂದಿಗೂ ದೊಡ್ಡದೊಡ್ಡ ನಾಯಕರಿದ್ದಾರೆ. ದೇಶಾದ್ಯಂತ ಹಳ್ಳಿ ಹಳ್ಳಿಗಳಲ್ಲಿಯೂ ಕಾರ್ಯ ಕರ್ತರಿದ್ದಾರೆ. ಆ ಪಕ್ಷ ನಮ್ಮ ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯೂ ಅಪಾರ. ಹಾಗಾಗಿ ಸಾರ್ವತ್ರಿಕ ಕಲ್ಪನೆಯಿಂದ ಆ ಪಕ್ಷವನ್ನು ಕಿತ್ತು ಹಾಕುವುದು ಬಹಳ ಕಷ್ಟ. 2004ರಲ್ಲಿ ಇನ್ನೇನು ಕಾಂಗ್ರೆಸ್ ಕಥೆ ಮುಗಿದು ಹೋಯಿತು ಎಂದು ಎಲ್ಲರೂ ಭಾವಿಸಿದಾಗ ಫೀನಿಕ್ಸ್ ಪಕ್ಷಿಯಂತೆ ಅದು ಮತ್ತೆ ಮರು ಹುಟ್ಟು ಪಡೆದು ಅಧಿಕಾರಕ್ಕೆ ಬಂದು, ಹತ್ತು ವರ್ಷಗಳ ಕಾಲ ದೇಶವನ್ನು ಆಳಿಬಿಟ್ಟಿತು. ಅದರ ಹಿಂದೆಯೂ ಅದಕ್ಕೆ ಬೃಹತ್ ಸೋಲುಗಳು ಬಂದಿದ್ದವು. ಇನ್ನೇನು ಪಕ್ಷ ಸಂಪೂರ್ಣ ನಾಶವಾಯಿತು ಅಂದು ಕೊಂಡಾಗ ಅದು ಮತ್ತೆ ತಲೆ ಎತ್ತಿ ಎದ್ದು ನಿಂತಿದೆ.
ಆದರೂ ಪ್ರಸ್ತುತ ಆ ಪಕ್ಷ ಸಂಕಷ್ಟದಲ್ಲಿದೆ, ಅದರ ಮತ್ತು ದೇಶದ ಜನತೆಯ ನಡುವೆ ಒಂದು ದೊಡ್ಡ ಬಿರುಕು ಮೂಡಿದ ಹಾಗೆ ಕಾಣಿಸುತ್ತಿದೆ. ಏಕೆ ಹೀಗೆ? ಇಂತಹ ದೊಡ್ಡ ಇತಿಹಾಸವಿರುವ ಪಕ್ಷ ಮತ್ತು ದೇಶದ ಜನತೆಯ ನಡುವೆ ದೊಡ್ಡ ಕಂದರ ಏಕೆ ಸೃಷ್ಟಿಯಾಗಿದೆ ಎನ್ನುವುದೇ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ.
ಔಷಧ ನೀಡುವ ಮೊದಲು ಕಾಯಿಲೆಯನ್ನು ಗುರುತಿಸಬೇಕು. ಬಹುಶಃ ಪಕ್ಷ ಬಳಲುತ್ತಿರುವ ಕಾಯಿಲೆಯೆಂದರೆ ಅದು ತನ್ನ ಅಸ್ಮಿತೆಯ ಕುರಿತಾಗಿ ಅಸ್ತಿತ್ವವಾದಿ ದ್ವಂದ್ವದಲ್ಲಿ ಸಿಲುಕಿಕೊಂಡಿರು ವುದು (Existential Dilemma) ಎಂದೇ ಅನಿಸುತ್ತದೆ. ಅಂದರೆ ಪ್ರಮುಖವಾದ ರಾಷ್ಟ್ರೀಯ ಅಜೆಂಡಾಗಳ ಮತ್ತು ತನ್ನ ಅಸ್ತಿತ್ವವನ್ನು ವ್ಯಾಖ್ಯಾನಿಸುವ ಮೂಲ ಮೌಲ್ಯಗಳ ಕುರಿತು ಅದು ಅಸ್ಪಷ್ಟವಾದ ಅಥವಾ ಪರಸ್ಪರ ದ್ವಂದ್ವದಂತೆ ಕಾಣುವ ನಿಲುವು ಗಳನ್ನು ಹೊಂದಿರುವುದು ಎಂದೇ ಅನಿಸುತ್ತದೆ. ಮುಖ್ಯವಾಗಿ ಎರಡು ಸಮಕಾಲೀನ ಮಹತ್ವದ ರಾಜಕೀಯ ವಾದಗಳ ಕುರಿತು ಸ್ಪಷ್ಟವಾದ ನಿಲುವು ತೆಗೆದುಕೊಳ್ಳಲು ಹಾಗೂ ಆ ನಿಲುವಿಗೆ ಬದ್ಧ ವಾಗಿರಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎನಿಸುತ್ತದೆ. ಅಂದರೆ ಬಹುಶಃ ಆ ಪಕ್ಷಕ್ಕೆ ದೇಶದ ಮುಂದಿರುವ ಎರಡು ಮಹತ್ವದ ಪ್ರಶ್ನೆಗಳು ಬಂದಾಗ ತಾನು ಎಲ್ಲಿ ನಿಂತಿದ್ದೇನೆ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಲಿಕ್ಕೆ ಮತ್ತು ಹೇಳಲಿಕ್ಕೆ ಸಾಧ್ಯವಾಗದೇ ಇರುವುದು. ಅಂತಹ ಮೂಲಭೂತವಾದ ಎರಡು ವಿಷಯಗಳಿವೆ. ಒಂದನೆ ಯದು ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ಪ್ರಶ್ನೆಗಳು. ಹಾಗೆ ನೋಡಿದರೆ ಆರ್ಥಿಕ ಸುಧಾರಣೆಗಳನ್ನು ಆರಂಭಿಸಿದ್ದೇ ಕಾಂಗ್ರೆಸ್. ಆ ಪಕ್ಷದಿಂದ ಬಂದ ಯುವ ಪ್ರಧಾನಿ ದೇಶದಲ್ಲಿ ಆರ್ಥಿಕ ಸುಧಾರಣೆಗಳ ಯುಗದ ರೂವಾರಿಗಳು. ನಂತರ ಅದೇ ಪಕ್ಷದಿಂದ ಬಂದ ಚಾಣಕ್ಯ ಪ್ರಧಾನಿ ಮತ್ತು ಅಂದಿನ ಹಣಕಾಸು ಸಚಿವರುಗಳೇ ನಿಜವಾಗಿ ಭಾರತದ ಉದಾರೀಕರಣದ, ಆರ್ಥಿಕತೆಯ ಶಿಲ್ಪಿಗಳು. ಹೀಗೆ ಜಾಗತೀಕರಣ ಮತು ಉದಾರೀ ಕರಣ ಗಳನ್ನು ಆರಂಭಿಸಿದ್ದು ಆ ಪಕ್ಷವೇ. ಉದಾರೀಕರಣಕ್ಕೆ ದೇಶದ ದೊಡ್ಡ ಮತ್ತು ಬೆಳವಣಿಗೆಯ ಆಸೆ ಹೊಂದಿದ ಮಧ್ಯಮ ವರ್ಗದ ಮತ್ತು ಯುವ ಜನತೆಯ ಭಾರೀ ಬೆಂಬಲ ಇದೆ. ಇಂದೂ ಕೂಡ ಯುವಜನತೆಯ ಮತ್ತು ಮಧ್ಯಮ ವರ್ಗದ ಕಣ್ಮಣಿಯಾಗಿರು ವುದು ಉದಾರೀಕರಣದ ರಾಜಕೀಯವೇ. ಉದಾರೀಕರಣದ ನೀತಿಗಳ ಫಲವಾಗಿಯೇ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಜಾಗತಿಕವಾಗಿ ಬೆಳದು ನಿಂತಿದ್ದು. ಮೇಲ್ಕಾಣಿಸಿದ ತ್ರಿಕರಣದ ನೀತಿಗಳೇ ಮಧ್ಯಮ ವರ್ಗಕ್ಕೆ ಮತ್ತು ಯುವ ಜನತೆಗೆ ದೊಡ್ಡ ಪ್ರಮಾಣದಲ್ಲಿ ಆಧುನಿಕವಾದ ಬದುಕನ್ನು ಕಟ್ಟಿ ಕೊಟ್ಟಿದ್ದು. ಖಾಸಗೀಕರಣ ಹಾಗೂ ಉದಾರೀಕರಣದ ಫಲಗಳ ರುಚಿ
ಯನ್ನು ಮಧ್ಯಮ ವರ್ಗ ನೋಡಿದೆ. ಹಾಗಾಗಿ ಈ ದೊಡ್ಡ ಮತದಾರ ವರ್ಗ ಯಾವ ಪಕ್ಷ ಉದಾರೀಕರಣವನ್ನು, ಜಾಗತೀ ಕರಣವನ್ನು, ಖಾಸಗೀಕರಣವನ್ನು ಎತ್ತಿ ಹಿಡಿಯುತ್ತದೆಯೋ ಆ ಪಕ್ಷವನ್ನು ಬೆಂಬಲಿಸುತ್ತದೆ. ನಗರೀಕರಣಗೊಂಡ ಯುವ ಜನರಿಗಂತೂ ಹೊಸ ಆರ್ಥಿಕ ನೀತಿ ಅವರ ಬದುಕಿನ ಕೇಂದ್ರ ಬಿಂದು. ಹಳೆಯ ರೀತಿಯ ಸಮಾಜವಾದಿ ರಾಜಕೀಯ, ಆರ್ಥಿಕ ನೀತಿ ಎಂದರೆ ಈ ವರ್ಗಕ್ಕೆ ತಿರಸ್ಕಾರವಿದೆ. ಅದು ಇರಲಿ. ಇಂತಹ ಉದಾರೀಕರಣ ಆರಂಭಿಸಿದ ಪಕ್ಷಕ್ಕೇ ಮುಂದೇನಾಯಿತೆಂದರೆ ಮಂಡಲ ರಾಜಕೀಯದ ಫಲಶ್ರುತಿಯಾಗಿ ಬಂದ ಕೆಲವು ಸೋಲುಗಳ ಅನುಭವದ ನಂತರ ಮತ್ತು ಮುಂದೆ ಅಧಿಕಾರಕ್ಕೆ ಬಂದಿದ್ದ ವಿರೋಧ ಪಕ್ಷದ ಸರ್ಕಾರ ಭಾರೀ ಪ್ರಮಾಣದ ಉದಾರೀಕರಣಕ್ಕೆ ಕೈ ಹಾಕಿ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳುತ್ತ ಹೋದಾಗ ಅನುಭವಿಸಿದ ಸೋಲನ್ನು ನೋಡಿದ್ದೇ ತನ್ನ ಉದಾರೀಕರಣ ನೀತಿಗೆ ಬ್ರೇಕ್ ಹಾಕಿ ಸಾವಕಾಶವಾಗಿ ಹೋಗಲು ಆರಂಭಿಸಿತು. ಬಹುಶಃ ಒಂದು ದೃಷ್ಟಿಯಿಂದ ಅದು ಯೋಚಿಸಿದ್ದು ಸರಿಯಾಗಿಯೇ ಇತ್ತು. ಏನೆಂದರೆ ದೇಶದ ಬಡಜನತೆ ಮತ್ತು ಹಿಂದುಳಿದ ವರ್ಗ ಉದಾರೀಕರಣವನ್ನು ಎತ್ತಿ ಹಿಡಿಯುವ ಸರ್ಕಾರವನ್ನು “ಸೂಟ್ ಬೂಟ್ ಕೀ ಸರ್ಕಾರ್’ ಎಂದು ಕಾಣುತ್ತವೆ ಎನ್ನುವುದು ಅದಕ್ಕೆ ತಿಳಿಯಲಾರಂಭಿಸಿತ್ತು. ಹಾಗಾಗಿ ಕಾಂಗ್ರೆಸ್ ಉದಾರೀಕರಣದ ನೀತಿಗಳಿಗೆ ಬ್ರೇಕ್ ಹಾಕಿ ಹೆಚ್ಚು ಹೆಚ್ಚು ಕಲ್ಯಾಣ ಸರಕಾರವಾಗಲು ಪ್ರಯತ್ನಿಸಿತು. ಹೀಗಾಗಿದ್ದರಿಂದ ಏನಾಯಿತು ಎಂದರೆ ಮೇಲೆ ಹೇಳಿದ ತ್ರಿಕರಣಗಳನ್ನು ಭಾರೀ ಪ್ರಮಾಣದಲ್ಲಿ ಬೆಂಬಲಿಸುವ ಮಧ್ಯಮ ವರ್ಗ ಮತ್ತು ಯುವಜನತೆ ಆ ಪಕ್ಷದಿಂದ ಬೆಂಬಲವನ್ನು ಹೆಚ್ಚು ಕಡಿಮೆ ವಾಪಸ್ಸು ಪಡೆದುಕೊಂಡು ಬೇರೆ ಕಡೆ ಹೋಗಲಾರಂಭಿಸಿತು. ಅಲ್ಲದೆ ಅದೇ ಸಮಯದಲ್ಲಿ ಜಾಗತೀಕರಣವನ್ನು ವಿರೋಧಿಸುವ ವರ್ಗಕ್ಕೆ ಕೂಡ ಅದರೆಡೆಗಿನ ಅನುಮಾನ ಹೋಗಲೇ ಇಲ್ಲ. ಇಂತಹ ಅನುಮಾನವನ್ನು ಸರಿಯಾಗಿ ಬಳಸಿಕೊಂಡ ಹಲವು ಪ್ರಾದೇಶಿಕ ಪಕ್ಷಗಳು ಇಂತಹ ವರ್ಗಗಳ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿಬಿಟ್ಟವು. ಹೆಚ್ಚು ಕಡಿಮೆ ಎಲ್ಲ ಪ್ರಾದೇಶಿಕ ಪಕ್ಷಗಳೂ ಜಾಗತೀಕರಣ ವಿರೋಧಿ ಮತಗಳ ಮೇಲೆ ಕಣ್ಣಿಟ್ಟು ಕೂತವು. ಹೀಗೆ ಪ್ರಮುಖವಾದ ರಾಷ್ಟ್ರೀಯ ವಿಷಯವೊಂದಕ್ಕೆ ಸಂಬಂಧಿಸಿ ಆ ಪಕ್ಷ ಜಾಗತೀಕರಣದ ಪರ ಮತ್ತು ವಿರೋಧಿ ಎರಡೂ ಪ್ರಭಾವಶಾಲಿ ವರ್ಗಗಳಿಂದಲೂ ದೂರವಾಗಿ ಹೋಯಿತು ಎಂದೇ ಅನಿಸುತ್ತದೆ. ಇನ್ನೂ ಕೂಡ ಕಾಂಗ್ರೆಸ್ ಈ ಕುರಿತಾದ ದ್ವಂದ್ವಗಳಿಂದ ಹೊರ ಬಂದ ಹಾಗೆ ಕಾಣಿಸುತ್ತಿಲ್ಲ. ಹೊರ ಬರುವುದು ಅಷ್ಟೊಂದು ಸುಲಭವೂ ಅಲ್ಲ. ಏಕೆಂದರೆ ಜಾಗತೀಕರಣ ಮತ್ತು ಜಾಗತೀಕರಣ ವಿರೋಧಿ ಎರಡೂ ಶಕ್ತಿಗಳು ದೇಶದಲ್ಲಿ ಬಲವಾದ ರಾಜಕೀಯ ಶಕ್ತಿಗಳು.
ಎರಡನೆಯ ಅಸ್ತಿತ್ವವಾದಿ ದ್ವಂದ್ವ ಇನ್ನೂ ಸೂಕ್ಷ್ಮವಾದುದು. ಅದು ಸಮಕಾಲೀನ ಸಂದರ್ಭದಲ್ಲಿ ಭಾರೀ ಬಿಸಿ ಏರಿಸಿರುವ ರಾಷ್ಟ್ರೀಯತೆಯ ಕುರಿತಾದ ಚರ್ಚೆಗೆ ಸಂಬಂಧಿಸಿದ್ದು. ಈ ಕುರಿತಾಗಿ ಬಿಜೆಪಿಯ ನಿಲುವು ತುಂಬ ಸ್ಪಷ್ಟವಿದೆ. ಅದರಲ್ಲಿ ದ್ವಂದ್ವಗಳಿಲ್ಲ. ಆದರೆ ಕಾಂಗ್ರೆಸ್ ನಿಲುವು ಈ ವಿಷಯದಲ್ಲಿಯೂ ಕೂಡ ಸ್ಪಷ್ಟವಿದ್ದಂತೆ ಜನರಿಗೆ ಅನಿಸುತ್ತಿಲ್ಲ. ಸಮಸ್ಯೆಯೆಂದರೆ ರಾಷ್ಟ್ರೀಯತೆಯ ಕುರಿತಾಗಿ ಬಿಜೆಪಿಯ ನಿಲುವನ್ನು ಸಾರಾಸಗಟಾಗಿ ತಳ್ಳಿ ಹಾಕಿ ಅದನ್ನು ಸಂಪೂರ್ಣವಾಗಿ ವಿರೋಧಿಸುವ ಸ್ಥಿತಿ ಯಲ್ಲಿಯೂ ಪಕ್ಷ ಇಲ್ಲ. ಹಾಗೆಂದು ವಿರೋಧಿಸದಿದ್ದರೆ ಅಥವಾ ಸುಮ್ಮನಿದ್ದರೆ ಕೂಡ ಅದರ ಅಸ್ತಿತ್ವ ಉಳಿಯುವುದಿಲ್ಲ. ಅದರ ಅಸ್ತಿತ್ವವನ್ನು ಪ್ರಾದೇಶಿಕ ಪಕ್ಷಗಳು ನುಂಗಿ ಹಾಕುತ್ತವೆ. ಹೀಗೆ ರಾಷ್ಟ್ರೀಯತೆಯ ಪ್ರಶ್ನೆ ಮತ್ತು ಅದರ ಜತೆಗಿರುವ ಹಲವು ಸೂಕ್ಷ್ಮ ವಿಚಾರಗಳ ಸರಣಿ ಪಕ್ಷ ಎದುರಿಸುತ್ತಿರುವ ಇನ್ನೊಂದು ಪ್ರಮುಖ ದ್ವಂದ್ವ. ಇದಕ್ಕೆಲ್ಲ ಉತ್ತರ ಕಂಡುಕೊಳ್ಳುವುದು ಕೂಡ ಸುಲಭವೇನೂ ಅಲ್ಲ. ಈ ವಿಚಾರದಲ್ಲಿ ಯಾವ ನಿಲುವು ತಳೆಯಬೇಕು ಎನ್ನುವುದು ನಿಜಕ್ಕೂ ಕಾಂಗ್ರೆಸ್ ಮುಂದಿರುವ ಅತಿ ದೊಡ್ಡ ಸವಾಲು. ಸಮಸ್ಯೆ ಎಂದರೆ ಬಲಕ್ಕೆ ಎದುರಾಗಿ ತಾನು ಎಡ ಎಂದು ಅದು ಹೇಳಿಕೊಳ್ಳುವ ಹಾಗೆಯೇ ಇಲ್ಲ. ಹಾಗೆಂದು ತಾನು ಮಧ್ಯಮ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲೂ ಅದು ಇಲ್ಲ. ಏಕೆಂದರೆ ಇಂದಿನ ದಿನಗಳಲ್ಲಿ ಮಧ್ಯಮ ಎಂದರೆ ಅದು ಬಲ ಪಂಥೀಯ ಎಂದೇ ಎಡ ಪಂಥೀಯ ಶಕ್ತಿಗಳು ಅರ್ಥ ಮಾಡಿಕೊಳ್ಳುತ್ತವೆ.
ಈ ವಿಷಯಗಳಲ್ಲಿ ತನ್ನ ನಿಲುವುಗಳನ್ನು ಮೊದಲು ಪಕ್ಷ ಸ್ಪಷ್ಟವಾಗಿ ನಿರ್ಧರಿಸಿಕೊಂಡರೆ, ಅಲ್ಲದೇ ಆ ನಿಲುವುಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಕೂಡ ಯಶಸ್ವಿಯಾದರೆ ಮತ್ತೆ ಅದು ಶಿಘ್ರವಾಗಿ ಎದ್ದು ನಿಲ್ಲಬಹುದು.
ಡಾ.ಆರ್.ಜಿ.ಹೆಗಡೆ