ಬೀಳಗಿ: ಗ್ರಾಮದಲ್ಲಿ ಕುಡಿವ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಕುಡಿವ ನೀರು ಒದಗಿಸುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ಕುಡಿವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕಿನ ನಾಗರಾಳ ಗ್ರಾಮಸ್ಥರು ಶನಿವಾರ ಸ್ಥಳೀಯ ಗ್ರಾಪಂ ಕಚೇರಿ ಎದುರು ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಗ್ರಾಪಂ ಕಾರ್ಯಾಲಯ ಮುಂದೆ ಜಮಾಯಿಸಿದ ನೂರಾರು ಜನರು ಗ್ರಾಪಂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕುಡಿವ ನೀರು ಸರಬರಾಜಿಗೆ ಗ್ರಾಮದ ಒಂದು ಭಾಗದಲ್ಲಿ 5 ಇಂಚಿನ ಕೊಳವೆಮಾರ್ಗ ಮಾಡಲಾಗಿದೆ.
ಇದೇ ಗ್ರಾಮದ ಇನ್ನೊಂದು ಪ್ರದೇಶದಲ್ಲಿ ಕೇವಲ 2 ಇಂಚಿನ ಕೊಳವೆಮಾರ್ಗ ಅಳವಡಿಸಿದ್ದಾರೆ. ಐದಿಂಚಿನ ಕೊಳವೆ
ಮಾರ್ಗದ ಮೂಲಕ ಸಮರ್ಪಕ ನೀರು ಸರಬರಾಜಾಗುತ್ತಿದೆ. ಆದರೆ, ಎರಡಂಚಿನ ಕೊಳವೆ ಮಾರ್ಗ ಚಿಕ್ಕದಾಗಿದ್ದರಿಂದ ನೀರು ಸರಿಯಾಗಿ ಹರಿದು ಬರುತ್ತಿಲ್ಲ. ಗ್ರಾಮದ ಒಂದು ಪ್ರದೇಶದಲ್ಲಿ ಎರಡು ಇಂಚಿನ ಕೊಳವೆ ಮಾರ್ಗ ಮಾಡಿರುವುದರ ಹಿಂದೆ ದುರುದ್ದೇಶ ಅಡಗಿದೆ. ಗ್ರಾಮದಲ್ಲಿ ಕುಡಿವ ನೀರಲ್ಲಿಯೂ ರಾಜಕೀಯವಿದೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದರು. ಕುಡಿವ ನೀರಲ್ಲೂ ತಾರತಮ್ಯ ಮಾಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಗ್ರಾಮಸ್ಥರು, ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು. ನೀರಿನ ವಿಷಯದಲ್ಲೂ ರಾಜಕಾರಣ ಬೆರೆಸುವುದು ಎಷ್ಟು ಸರಿ? ತಾರತಮ್ಯ ಮಾಡುತ್ತಿರುವ
ಕ್ರಮ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರು ಕೊಡುವುದು ಅದು ಎರಡು ದಿನಕ್ಕೊಮ್ಮೆ. ಸಣ್ಣಕೊಳವೆ ಮಾರ್ಗದಲ್ಲಿ ನೀರು ಬಿಡುತ್ತಿರುವುದರಿಂದ ಸಮರ್ಪಕವಾಗಿ
ಬರುತ್ತಿಲ್ಲ. ಸರಕಾರ ಕುಡಿವ ನೀರಿಗಾಗಿ ಸಾಕಷ್ಟು ಅನುದಾನ ನೀಡುತ್ತದೆ. ಆದರೆ, ಇಲ್ಲಿ ನೀರಿನ ಸಮಸ್ಯೆ ಇನ್ನು ಬಗೆಹರಿದಂತಿಲ್ಲ. ಈ ಕುರಿತು ಈಗಾಗಲೇ ಗ್ರಾಪಂ ಪಿಡಿಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಊರಿನ ಜಾತ್ರೆ, ಉತ್ಸವದಲ್ಲಂತೂ ನೀರಿಗಾಗಿ ಪಡುತ್ತಿರುವ ಗೋಳು ದೇವರಿಗೆ ಪ್ರೀತಿ. ಕುಡಿವ ನೀರಿನ ತಾರತಮ್ಯ ತೊಲಗಬೇಕು. ಗ್ರಾಮದ ಸಮಸ್ತ ಜನರಿಗೂ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಬೇಕು. ಇಲ್ಲದಿದ್ದರೆ
ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಾನಪ್ಪ ಮುಂಡಗನೂರ, ಶ್ರೀಶೈಲ ಸೀಪರಮಟ್ಟಿ, ವೀರಣ್ಣ ಮುಂಡಗನೂರ, ಪಡಿಯಪ್ಪ ಸೀಪರಮಟ್ಟಿ, ಪಡಿಯಪ್ಪ
ಬಾಡಗಂಡಿ, ಪ್ರಶಾಂತ ಕುಂಬಾರ, ನಾಗವ್ವ ಕರಿಗಾರ, ಶ್ರೀದೇವಿ ಮುಂಡಗನೂರ, ಲಕ್ಕವ್ವ ಸೀಪರಮಟ್ಟಿ, ಗೌರವ್ವ ತೆಕ್ಕೆಣ್ಣವರ, ಶಾಂಯವ್ವ ಸೀಪರಮಟ್ಟಿ, ಮಲ್ಲವ್ವ ಕರಬಾಣಿ, ಬಾಳವ್ವ ಕೆಳಗಿನಮನಿ ಸೇರಿದಂತೆ ಅನೇಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೆಲ ಕುಟುಂಬಗಳಿಗೆ ನೀರು ಸರಿಯಾಗಿ ತಲುಪುತ್ತಿಲ್ಲ. ಗ್ರಾಮದ ಎಲ್ಲ ಕಡೆಗೆ ಸ್ಥಗಿತಗೊಳಿಸಿ ಈ ಭಾಗಕ್ಕೆ ನೀರು ಬಿಟ್ಟಾಗ ಮಾತ್ರ ಅವರಿಗೆ ನೀರು ಸಿಗುತ್ತವೆ. ನೂತನ ಕೊಳವೆ ಮಾರ್ಗ ಅಳವಡಿಸುವುದು ಅಗತ್ಯವಿದೆ. ಇದೀಗ ತಾತ್ಕಾಲಿಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ.
ಎಂ.ಎನ್.ಬೋರಡ್ಡಿ, ಪಿಡಿಒ, ಗ್ರಾಪಂ ನಾಗರಾಳ
ಎಂ.ಎನ್.ಬೋರಡ್ಡಿ, ಪಿಡಿಒ, ಗ್ರಾಪಂ ನಾಗರಾಳ