Advertisement

ಬರಿದಾಗುತ್ತಿದೆ ಘಟಪ್ರಭೆಯ ಒಡಲು!

02:43 PM Apr 04, 2022 | Team Udayavani |

ಬಾಗಲಕೋಟೆ: ತ್ರಿವೇಣಿ ನದಿಗಳ ಸಂಗಮ, 236ಕ್ಕೂ ಹೆಚ್ಚು ಕೆರೆಗಳ ಬೀಡು ಬಾಗಲಕೋಟೆ ಬೇಸಿಗೆಯಲ್ಲಿ ಪ್ರತಿವರ್ಷ ವಿಚಿತ್ರ ಸಮಸ್ಯೆ ಎದುರಿಸುತ್ತದೆ.

Advertisement

ಹೌದು, ಜಿಲ್ಲೆಯಲ್ಲಿ ಮಲಪ್ರಭೆ, ಘಟಪ್ರಭೆ ಹಾಗೂ ಕೃಷ್ಣಾ ನದಿಗಳು ಬೃಹದಾಕಾರವಾಗಿ ಹರಿದಿವೆ. ಬೆಳಗಾವಿ ಜಿಲ್ಲೆಯ ಪ್ರತ್ಯೇಕ ಕಡೆ ಹುಟ್ಟಿಕೊಳ್ಳುವ ಮಲಪ್ರಭಾ ಮತ್ತು ಘಟಪ್ರಭಾ ನದಿಗಳು, ಜಿಲ್ಲೆಯಲ್ಲೇ ಕೃಷ್ಣೆಯಲ್ಲಿ ಲೀನವಾಗುತ್ತವೆ. ಘಟಪ್ರಭಾ ನದಿ, ಬೀಳಗಿ ತಾಲೂಕಿನ ಚಿಕ್ಕಸಂಗಮದಲ್ಲಿ ಕೃಷ್ಣೆ ಸೇರಿದರೆ, ಮಲಪ್ರಭಾ ನದಿ, ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೃಷ್ಣೆಯೊಂದಿಗೆ ಸೇರಿದ್ದು, ಈ ಕ್ಷೇತ್ರ ತ್ರಿವೇಣಿ ಸಂಗಮವಾಗಿ ಖ್ಯಾತಿ ಪಡೆದಿದೆ.

ಜಿಲ್ಲೆಯಲ್ಲಿ ಮೂರು ನದಿಗಳು, 236ಕ್ಕೂ ಹೆಚ್ಚು ಕೆರೆಗಳಿವೆ. ಅದರಲ್ಲೂ ಬಾದಾಮಿ ಗಡಿ ಭಾಗದ ರಂಗ ಸಮುದ್ರ ಕೆರೆ, ಮುಚಖಂಡಿ ಕೆರೆ, ಕೆರಕಲಮಟ್ಟಿ ಕೆರೆ, ಮಹಾಲಿಂಗಪುರ ಕೆರೆ, ಕೆರೂರ, ಮುಧೋಳದ ಮಹಾರಾಣಿ ಕೆರೆ, ಮಂಟೂರ ಕೆರೆ ಸಹಿತ ಹಲವಾರು ಕೆರೆಗಳು ಕುಡಿಯುವ ನೀರಿನ ಜೀವ ಸೆಲೆಯಾಗಿವೆ. ಆದರೆ, ಈ ಕೆರೆಗಳಿಗೆ ನದಿಗಳೇ ಜಲಮೂಲವಾಗಿವೆ.

ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ಯಾರೇಜ್‌ ಹಾಗೂ ಆಲಮಟ್ಟಿ ಜಲಾಶಯದ ಹಿನ್ನೀರವನ್ನೇ ಬಳಸಿಕೊಂಡು ಕೆರೆ ತುಂಬಿಸಲಾಗುತ್ತದೆ. ಹೀಗಾಗಿ ಕೆರೆಯ ಜಲಮೂಲ ಬಳಸಿಕೊಂಡು ಹಲವಾರು ನಗರ-ಪಟ್ಟಣ ಬಳಸಿಕೊಂಡು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಈ ಬ್ಯಾರೇಜ್‌ಗಳು ಖಾಲಿಯಾದರೆ ಸಾಕು, ಕೆರೆಗಳೂ ಖಾಲಿಯಾಗುತ್ತವೆ. ಇದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ವಿವಿಧೆಡೆ ತಲೆದೋರುತ್ತದೆ.

Advertisement

ಬೃಹತ್‌ ಬ್ಯಾರೇಜ್‌ ಆದ್ರೂ ಖಾಲಿ: ತಾಲೂಕಿನ ಕಲಾದಗಿ-ಕಾತರಕಿ ಬಳಿ ಕೋಟ್ಯಾಂತರ ರೂ. ಖರ್ಚು ಮಾಡಿ, ಬೃಹತ್‌ ಬ್ಯಾರೇಜ್‌ ನಿರ್ಮಿಸಿದ್ದು, ಪ್ರವಾಹದ ವೇಳೆ ಈ ಬ್ಯಾರೇಜ್‌ನ ಎರಡೂ ಭಾಗದಲ್ಲಿ ಹಲವು ರೀತಿಯ ಹಾನಿ ಅನುಭವಿಸಿದರೂ ಬ್ಯಾರೇಜ್‌ ಮಾತ್ರ ಜಪ್ಪಯ್ಯ ಅಂದಿಲ್ಲ. ಆದರೆ, ಬ್ಯಾರೇಜ್‌ ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯಬೇಕಿದೆ. ಕಾರಣ, ಈ ಬ್ಯಾರೇಜ್‌, 524 ಮೀಟರ್‌ ವರೆಗೂ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದರೂ, ಸದಕ್ಕೆ ಇಲ್ಲಿನ ನೀರೇ ಇಲ್ಲ.

ಬೀಳಗಿ ತಾಲೂಕಿನ ಹೆರಕಲ್‌ ಬ್ಯಾರೇಜ್‌ ಕೂಡ, ಜಿಲ್ಲೆಯಲ್ಲಿಯೇ ವಿಶೇಷ ನಿರ್ಮಾಣದ ಮೂಲಕ ಗಮನ ಸೆಳೆದಿದ್ದು, ಇದರಲ್ಲೂ ಕೂಡ 528 ಮೀಟರ್‌ ವರೆಗೆ ನೀರು ನಿಲ್ಲಿಸಬಹುದು. ಆದರೆ, ಕೃಷ್ಣಾ ಭಾಗ್ಯ ಜಲ ನಿಗಮದಿಂದ ಸಧ್ಯಕ್ಕೆ 517 ಮೀಟರ್‌ವರೆಗೆ ನೀರು ನಿಲ್ಲಿಸಲು ಅನುಮತಿ ಇದ್ದು, ಅದನ್ನು 519.60 ಮೀಟರ್‌ವರೆಗೆ ನೀರು ನಿಲ್ಲಿಸಲು ಅನುಮತಿ ಕೋರಿದ ಪ್ರಸ್ತಾವನೆ ಅನುಮೋದನೆಗೊಳ್ಳಬೇಕಿದೆ. ಆಗ ಹೆರಕಲ್‌ ಬ್ಯಾರೇಜ್‌ನ ನೀರು, ಕಲಾದಗಿ-ಕಾತರಕಿ ಬ್ಯಾರೇಜ್‌ ವರೆಗೆ ವಿಸ್ತಾರವಾಗಿ ನಿಲ್ಲುತ್ತದೆ. ಇದು ಸಾಧ್ಯವಾದರೆ, ನೀರಿನ ಅಭಾವ ನೀಗಲಿದೆ ಎಂಬುದು ಈ ಭಾಗದ ಜನರ ಆಶಯ.

ನೀರು ಬಿಡಿಸಲು ಮತ್ತೆ ಮನವಿ: ಪ್ರತಿವರ್ಷ ಘಟಪ್ರಭಾ ಮತ್ತು ಮಲಪ್ರಭಾ ನದಿ ಪಾತ್ರದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಎರಡೂ ನದಿಗಳಿಗೆ ಹಿಡಕಲ್‌ ಡ್ಯಾಂ ಮತ್ತು ನವಿಲುತೀರ್ಥ ಜಲಾಶಯದಿಂದ ನೀರು ಬಿಡುವಂತೆ ಒತ್ತಾಯ ಕೇಳಿ ಬರುವುದು ಸಾಮಾನ್ಯ. ಈ ಬಾರಿಯೂ ಘಟಪ್ರಭಾ ನದಿ ಒಡಲು ಖಾಲಿಯಾಗಿದ್ದು, ಹಿಡಕಲ್‌ ಡ್ಯಾಂನಿಂದ ನಿಂದ ನೀರು ಬಿಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ಮುಚ್ಚಖಂಡಿ ಕೆರೆಯ ಹೂಳೆತ್ತಿ: ಉತ್ತರ ಕರ್ನಾಟಕದ ಬೃಹತ್‌ ಪ್ರಮಾಣದ ಪ್ರಮುಖ ಮುಚಖಂಡಿ ಕೆರೆ ಸುಮಾರು 750 ಎಕರೆ ವಿಸ್ತಾರವಾದ ಹಾಗೂ ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿರುವ ಈ ಕೆರೆಯಲ್ಲಿ ನೂರಾರು ವರ್ಷಗಳಿಂದ ಬೃಹತ್‌ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಸುಮಾರು 15 ಅಡಿ ಆಳವಾಗಿ ತುಂಬಿರುವ ಹೂಳನ್ನು ತೆಗೆಯಬೇಕು. ಸ್ಥಳೀಯ ಶಾಸಕ ಡಾ|ವೀರಣ್ಣ. ಚರಂತಿಮಮಠ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮುತುವರ್ಜಿ ವಹಿಸಿ, ಬೇಸಿಗೆಯಲ್ಲಿ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಪ್ರಮಾಣದಲ್ಲಿರುವುದರಿಂದ ಹೂಳೆತ್ತುವುದು ಸುಲಭವಾಗಲಿದೆ. ಈ ಕೆರೆಗೆ ಬ್ರಿಟಿಷ್‌ ಆಡಳಿತ ಕಾಲದಲ್ಲಿ 1882ನೇ ಇಸ್ವಿಯಲ್ಲಿಯೇ ಸದೃಢವಾದ ಅಣೆಕಟ್ಟು ನಿರ್ಮಿಸಿದ್ದಾರೆ. ಆದರೆ ಕೆರೆಯಲ್ಲಿ ನೀರಿನ ಪ್ರಮಾಣ ಅತ್ಯಧಿಕ ಕಡಿಮೆಯಾಗಿದೆ. ಈಗ ಹೂಳು ಹೊರತೆಗೆಯಲು ಸಹಾಯವಾಗುತ್ತದೆ. ಮುಂದೆ ಮಳೆಗಾಲದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿದ್ದು, ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಮುಚಖಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ಜತೆಗೆ ಸುಸಜ್ಜಿತವಾದ ಪ್ರವಾಸಿ ತಾಣ ನಿರ್ಮಿಸಿ ನಿರುದ್ಯೋಗಿ ಯುವಕರಿಗೆ ಚಿಕ್ಕ ಪುಟ್ಟ ವ್ಯಾಪಾರ ಮಾಡಿ ಉಪಜೀವನಕ್ಕೆ ಅನುವು ಮಾಡಿಕೊಡಬೇಕು. –ಎ.ಎ.ದಂಡಿಯಾ, ಉಪಾಧ್ಯಕ್ಷ, ಉತ್ತರ ಕರ್ನಾಟಕ ಹೋರಾಟ ಸಮಿತಿ

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next