Advertisement

ಬರಿದಾದ ಡ್ಯಾಂ, ಬೋರ್ವೆಲ್: ಮಿತವಾಗಿ ನೀರು ಬಳಸಿ

07:51 AM May 21, 2019 | Suhan S |

ದೊಡ್ಡಬಳ್ಳಾಪುರ: ನಗರಕ್ಕೆ ನೀರುಣಿಸುವ ಜಕ್ಕಲಮಡಗು ಜಲಾಶಯ ಬರಿದಾಗಿರುವುದರಿಂದ ಹಾಗೂ ಅಂತರ್ಜಲ ಕೊರತೆಯಿಂದಾಗಿ ಕೊಳವೆಬಾವಿಗಳು ವಿಫಲವಾಗಿರುವುದರಿಂದ ನಗರದಲ್ಲಿ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಗರಸಭೆ ನಾಗರಿಕರಿಗೆ ನೀರಿನ ಮಿತ ಬಳಕೆಯ ಎಚ್ಚರಿಕೆ ನೀಡಿದೆ.

Advertisement

ನಗರದ ನೀರಿನ ಸ್ಥಿತಿಗತಿ: ಬೆಳೆಯುತ್ತಿರುವ ದೊಡ್ಡಬಳ್ಳಾಪುರದಲ್ಲಿ ವಾರ್ಷಿಕ ಸರಾಸರಿ 800 ಮಿ.ಮೀ ಮಳೆ ಬೀಳುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೆ ಸರಾಸರಿ 150 ಲೀಟರ್‌ ನೀರು ಅಗತ್ಯವಿದೆ. ನೀರನ್ನು ಎಚ್ಚರದಿಂದ ಬಳಸಿದರೆ 90 ರಿಂದ 100 ಲೀಟರ್‌ ಬೇಕಾಗುತ್ತದೆ. ಆದರೆ, ಈಗ ದೊಡ್ಡಬಳ್ಳಾಪುರದ ಪ್ರತಿ ವ್ಯಕ್ತಿಗೆ ಸಿಗುತ್ತಿರುವುದು 70 ಲೀಟರ್‌ಗಿಂತ ಕಡಿಮೆ.

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಟ್ಟು 31 ವಾರ್ಡ್‌ಗಳಿದ್ದು, ಜನಸಂಖ್ಯೆ 1 ಲಕ್ಷ ದಾಟಿದೆ. ನಗರಕ್ಕೆ 13.50 ಎಂಎಲ್ಡಿ ನೀರಿನ ಅವಶ್ಯಕತೆಯಿದ್ದು, ಹಾಲಿ 5.10 ಎಂಎಲ್ಡಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಬಾಕಿ 8.40 ಎಂಎಲ್ಡಿ ಕೊರತೆಯಿದೆ. ದೊಡ್ಡಬಳ್ಳಾಪುರ ನಗರದಲ್ಲಿ ಸರಾಸರಿ 5 ರಿಂದ 6 ದಿನಗಳಿಗೊಮ್ಮೆ ಕುಡಿಯುವ ನೀರನ್ನು ತಲಾ 51 ಎಲ್ಪಿಸಿಡಿಯಲ್ಲಿ ಪೂರೈಸಲಾಗುತ್ತಿದೆ.ಜಕ್ಕಲಮಡಗು ಜಲಾಶಯದಿಂದ ನಗರಕ್ಕೆ ಪ್ರತಿದಿನ 10 ಲಕ್ಷ ಲೀ. ನೀರು ಸರಬರಾಜು ಆಗುತ್ತಿದ್ದು, ಜಲಾಶಯ ಬರಿದಾಗಿದೆ. 2017-18ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿ ಈಗಾಗಲೇ 14 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಇದರಲ್ಲಿ 4 ವಿಫಲಗೊಂಡಿದ್ದು ಉಳಿದ 10 ಕೊಳವೆಬಾವಿಗಳಲ್ಲಿ ನೀರು ಸರಬರಾಜು ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ನೀರು ಸರಬರಾಜು ವಿಭಾಗದ ಕಿರಿಯ ಅಭಿಯಂತರ ರಾಮೇಗೌಡ.

ಮಳೆ ನೀರು ಸಂಗ್ರಹಣೆ ಕಡ್ಡಾಯ: ಅಂತರ್ಜಲದ ಕುಸಿತ ಮತ್ತು ಜಕ್ಕಲಮಡಗು ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದಿರುವುದರಿಂದ ನೀರಿನ ಸರಬರಾಜುವಿನಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದು, ನೀರನ್ನು ಮಿತವಾಗಿ ಬಳಸಲು ಮತ್ತು ಮಳೆ ನೀರು ಸಂಗ್ರಹಣೆ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕಿದೆ ಎಂದು ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next