Advertisement

ಯುವಕರ ಸದೃಢ ಆರೋಗ್ಯಕ್ಕಾಗಿ ನಿರ್ಮಿಸಿದ್ದ ವ್ಯಾಯಾಮ ಶಾಲೆ ಪಾಳು

05:22 PM Apr 13, 2019 | pallavi |
ಮುಳಬಾಗಿಲು: ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿ ಮಾಡುವ ಯೋಜನೆಗಳು ಅಧಿಕಾರಿಗಳ ಕಾರ್ಯವೈಖರಿಯಿಂದ ಎಷ್ಟರ ಮಟ್ಟಿಗೆ ಜನಕ್ಕೆ ಅನುಕೂಲವಾಗುತ್ತಿವೆ ಎಂಬುದಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸೇರಿದ ವ್ಯಾಯಾಮ ಶಾಲೆಯೇ ಸಾಕ್ಷಿ.
ಸರ್ಕಾರ ಬಡ ಯುವ ಜನತೆಗೆ ಅನುಕೂಲವಾಗಲಿ, ಉತ್ತಮ ಆರೋಗ್ಯ ರೂಪಿಸುವ ನಿಟ್ಟಿನಲ್ಲಿ 2006-2007ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಕ ನಗರದಲ್ಲಿ 8 ಲಕ್ಷ ರೂ. ಅನುದಾನದಲ್ಲಿ ವ್ಯಾಯಮ ಶಾಲೆ ನಿರ್ಮಿಸಲಾಗಿದೆ. ಭೂ ಸೇನಾ ನಿಗಮ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಹಲವು ವರ್ಷಗಳೇ ಕಳೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ವಶಕ್ಕೆ ಪಡೆದು ಉದ್ಘಾಟನೆ ಮಾಡಿಲ್ಲ. ಅಗತ್ಯ ಸಲಕರಣೆಗಳು ಸರ್ಕಾರದಿಂದ ಮಂಜೂರಾಗಿದ್ದರೂ ಹಿಂದಿನ ಜಿಲ್ಲಾ ಯುವಜನ ಸೇವಾ ಕ್ರೀಡಾಧಿಕಾರಿಗಳು ಅವುಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಅನೈತಿಕ ಚಟುವಟಿಕೆ ತಾಣ: ಕಟ್ಟಡ ಬಳಕೆಯಾಗದಿದ್ದರೂ ನಿರ್ವಹಣೆ ಮಾಡದಿರುವ ಕಾರಣ ಪಾಳು ಬಿದ್ದಿದೆ. ಕಟ್ಟಡದ ಸುತ್ತಲು ಗಿಡಗಂಟಿ ಬೆಳೆದು ಅವ್ಯವಸ್ಥೆಗಳ ಆಗರವಾಗಿದೆ. ಕಟ್ಟಡದ ಕಿಟಕಿಗಳ ಗಾಜು ಒಡೆದು, ವಸ್ತುಗಳು ಕಳ್ಳರ ಪಾಲಾಗಿವೆ, ಮಲಮೂತ್ರ ವಿಸರ್ಜನೆಯ ತಾಣವಾಗಿದೆ. ರಾತ್ರಿ ವೇಳೆ ಮದ್ಯ ಸೇವಿಸುವವರಿಗೆ ಸ್ಥಳಾವಕಾಶ ಕಲ್ಪಿಸಿಕೊಟ್ಟಿದೆ. ನೇತಾಜಿ ಕ್ರೀಡಾಂಗಣದ ಹಿಂಭಾಗದಲ್ಲಿ ನಿರ್ಮಿಸಿರುವ ಕೊಠಡಿಗಳು ಸೂಕ್ತವಾಗಿ ನಿರ್ವಹಣೆಯಿಲ್ಲದ ಕಾರಣ ಪಾಳು ಬದ್ದಿವೆ.
ಒಂದು ಕೊಠಡಿಯ ಬಾಗಿಲು ಕಿತ್ತುಹೋಗಿ ಎಷ್ಟೋ ವರ್ಷಗಳಾಗಿವೆ. ಮಲಮೂತ್ರಗಳ ವಿಸರ್ಜನೆ ಬಳಕೆಯಾಗುತ್ತಿದೆ. ಕೊಠಡಿಯ ತುಂಬಾ ನೀರು ನಿಂತಿದೆ. ಈ ಕುರಿತು ಸಾರ್ವಜನಿಕರು ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆಂಬ ಕೂಗು ತಾಲೂಕಾದ್ಯಂತ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಬಡ ಯುವಕರು ಸದೃಢ ದೇಹ ಹೊಂದಲಿ ಎಂಬ ಕಾರಣಕ್ಕೆ ಸರ್ಕಾರ ನಿರ್ಮಿಸಿರುವ ವ್ಯಾಯಾಮ ಶಾಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳುಕೊಂಪೆಯಂತಾಗಿದೆ. ಕೂಡಲೇ ದುರಸ್ತಿಗೊಳಿಸಿ ಸಲಕರಣೆ ನೀಡಿ ಕಟ್ಟಡ ಉದ್ಘಾಟನೆ ಮಾಡಬೇಕು.
 ●ಶಿವಪ್ಪ, ಎಸ್‌ಎಫ್ಐ ಜಿಲ್ಲಾ ಕಾರ್ಯದರ್ಶಿ. 
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಮಾಡಿಸಿ ಅಗತ್ಯ ಸಲಕರಣೆಗಳನ್ನು ಖರೀದಿಸಿ ನಂತರ ಕಟ್ಟಡ ಉದ್ಘಾಟಿನೆ ಮಾಡಿಸಲಾಗುವುದು.
 ●ಗೀತಾ, ಜಿಲ್ಲಾ ಕ್ರೀಡಾ ಇಲಾಖೆ ಅಧಿಕಾರಿ
Advertisement

Udayavani is now on Telegram. Click here to join our channel and stay updated with the latest news.

Next