Advertisement

ವರ್ಗಾವಣೆ ನಿಯಮದಿಂದ ಸಿಸಿಬಿ ಅಧಿಕಾರಿಗಳಿಗೆ ವಿನಾಯಿತಿ

11:47 AM Nov 09, 2018 | Team Udayavani |

ಬೆಂಗಳೂರು: ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಕೇಂದ್ರ ಅಪರಾಧ ಘಟಕಗಳಲ್ಲಿ ( ಸಿಸಿಬಿ) ಕಾರ್ಯನಿರ್ವಹಿಸುತ್ತಿರುವ ಡಿವೈಎಸ್‌ಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ ಐದು ವರ್ಷಗಳ ಅವಧಿ ಪೂರೈಸಿದ ಬಳಿಕ ವರ್ಗಾವಣೆ ನಿಯಮದಿಂದ ವಿನಾಯಿತಿ ನೀಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.

Advertisement

ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಿಸಿಬಿ ಘಟಕಗಳನ್ನು ಮತ್ತಷ್ಟು ಬಲಗೊಳಿಸುವುದು ಹಾಗೂ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಈ ಆದೇಶ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸಿಸಿಬಿಯಲ್ಲಿ ಕಾರ್ಯನಿರ್ವಹಿಸುವ ಡಿವೈಎಸ್‌ಪಿಗಳು ಹಾಗೂ ಇನ್ಸ್‌ಪೆಕ್ಟರ್‌ಗಳಿಗೆ  ತಮ್ಮ ವ್ಯಾಪ್ತಿಯಲ್ಲಿನ ಅಪರಾಧಗಳು ಹಾಗೂ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿರುವ ಕುರಿತು ಹೆಚ್ಚು ಅನುಭವ ಹಾಗೂ ಮಾಹಿತಿ ಇರಲಿದೆ.

ಇದರಿಂದ ಅಪರಾಧ ಕೃತ್ಯಗಳನ್ನು ತಡೆಗಟ್ಟಲು, ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಅವರ ಸೇವಾ ಅವಧಿಯನ್ನು ನಿರ್ದಿಷ್ಟ ಕಾಲಾವಧಿಗೆ ಸೀಮಿತಗೊಳಿಸುವುದು ಸರಿಯಲ್ಲ. 5 ವರ್ಷಗಳಿಗಿಂತ ಹೆಚ್ಚು ಅವಧಿ ಪೂರೈಸಿದವರಿಗೆ ಕಮಿಷನರೇಟ್‌ ವ್ಯಾಪ್ತಿಯಿಂದ  ವರ್ಗಾವಣೆ ಮಾಡುವ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಹಿಂದೆ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಚಾರ, ಕಾನೂನು ಸುವ್ಯವಸ್ಥೆ, ಸಿಸಿಬಿ ಘಟಕಗಳಲ್ಲಿ ಐದುವರ್ಷಕ್ಕಿಂತ ಹೆಚ್ಚಿನ ಅವಧಿ ಕಾರ್ಯನಿರ್ವಹಿಸಿದ್ದ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳನ್ನು ಕಮಿಷನರೇಟ್‌ ವ್ಯಾಪ್ತಿಯಿಂದ ಹೊರಗಡೆ ವರ್ಗಾವಣೆ ಮಾಡುವ ನಿಯಮ ಜಾರಿಗೊಳಿಸಿ ಜೂ. 25, 2015ರಂದು ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಈ ನಿಯಮದಲ್ಲಿ ಸಿಸಿಬಿ ಅಧಿಕಾರಿಗಳಿಗೆ ಮಾತ್ರವೇ ವಿನಾಯಿತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next