Advertisement

ಜಮೀನು ನೀಡಿದವರಿಗೆ “ನಿಯಮ’ವಿನಾಯಿತಿ! ಪಾಲಿಕೆ ಚಿಂತನೆ

12:01 PM Dec 29, 2022 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ರಸ್ತೆ ಅಗಲೀಕರಣ, ಒಳಚರಂಡಿ ಕೊಳವೆ ಅಳವಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ಆವಶ್ಯಕ ಜಮೀನು ಬಿಟ್ಟುಕೊಟ್ಟ ಜಮೀನಿಗೆ ಮಾತ್ರ ಅನ್ವಯಿಸುವಂತೆ ಪಾಲಿಕೆಯಲ್ಲಿ ಖಾತಾ ನೋಂದಣಿ ಮಾಡಲು ಭೂ ಪರಿವರ್ತನೆ, ಏಕನಿವೇಶನ ವಿನ್ಯಾಸ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್‌ಗಳಿಂದ ವಿನಾಯಿತಿ ನೀಡಲು ಪಾಲಿಕೆ ಚಿಂತನೆ ನಡೆಸಿದೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

Advertisement

ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ರಸ್ತೆಗಳ ವಿಸ್ತ ರಣೆ, ಒಳಚರಂಡಿ ಕೊಳವೆ ಅಳವಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆ ವತಿಯಿಂದ ಮಾಡಲಾಗಿದೆ. ಹಲವು ರಸ್ತೆಗಳ ವಿಸ್ತ ರಣೆ, ಒಳಚರಂಡಿ ಕೊಳವೆ ಅಳವಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ವಿಸ್ತ ರಣೆಗೆ ಜಮೀನು ಬಿಟ್ಟುಕೊಡುವ ಭೂಮಾಲಕರಿಗೆ ಟಿಡಿಆರ್‌ (ವರ್ಗಾ ಯಿಸಬಹುದಾದ ಅಭಿವೃದ್ಧಿ ಹಕ್ಕು) ನೀಡಲಾಗುತ್ತದೆ. ಆದರೆ ಆ ಬಳಿಕ ಭೂಮಾಲಕರು ಖಾತಾ ನೋಂದಣಿ ಮಾಡಲು ಭೂ ಪರಿವರ್ತನೆ, ಏಕ ನಿವೇಶನ ವಿನ್ಯಾಸ ನಕ್ಷೆ ಸಹಿತ ವಿವಿಧ ಕಾರಣಗಳಿಗೆ ಅಲೆದಾಡುವ ಪ್ರಮೇಯ ತಪ್ಪಿಲ್ಲ.

ಏನಿದು ಸಮಸ್ಯೆ?
ಅಭಿವೃದ್ಧಿ ಕಾಮಗಾರಿಗೆ ಜಮೀನು ಬಿಟ್ಟುಕೊಟ್ಟಂತಹ ಸಂದರ್ಭ ಭೂಪರಿವರ್ತನೆ ಆಗದ ಖಾಸಗಿ ಜಮೀನಿನ ಮಾಲಕರಿಗೆ “ಡಿಆರ್‌ಸಿ’ ಪ್ರಮಾಣ ಪತ್ರ ನೀಡಲು ತಾಂತ್ರಿಕ ತೊಡಕುಗಳು ಬರುತ್ತಿರುತ್ತದೆ. ಈ ಜಮೀನು ಭೂ-ಪರಿವರ್ತನೆ ಆಗದ ಕಾರಣ ಪಾಲಿಕೆಯಲ್ಲಿ ಖಾತಾ ನೋಂದಣಿಯಾಗಿರುವುದಿಲ್ಲ. ಹೀಗಾಗಿ ಉಪ-ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡುವ ಸಮಯದಲ್ಲಿ ಜಮೀನಿನ ಖಾತಾ/ಪ್ರಾಪರ್ಟಿ ಕಾರ್ಡ್‌ ನೀಡುವಂತೆ ಕೇಳುತ್ತಿದ್ದು, ಈ ದಾಖಲೆಗಳನ್ನು ನೀಡದೆ ಇದ್ದರೆ ನೋಂದಣಿ ಆಗುತ್ತಿಲ್ಲ ಎಂಬುದು ಸಮಸ್ಯೆ.

ಕಾರಣವೇನು?
ಪ್ರಸ್ತುತ “ಕಾವೇರಿ’ ಸಾಫ್ಟ್ ವೇರ್ ವ್ಯವಸ್ಥೆಯಲ್ಲಿ ಆಸ್ತಿಯನ್ನು ನೋಂದಣಿ ಮಾಡಲು ಖಾತಾ ಅಥವಾ ಆಸ್ತಿ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಕೃಷಿ ಜಮೀನನ್ನು ರಸ್ತೆಗಾಗಿ ಹಸ್ತಾಂತರಿ ಸಬಾರ ದೆಂದು, ಅನಿವಾರ್ಯ ಸಂದರ್ಭ ಕೃಷಿ ಜಮೀನನ್ನು ರಸ್ತೆಗಾಗಿ ಹಸ್ತಾಂತರಿಸುವ ಪೂರ್ವದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳು/ ಸಹಾಯಕ ನಿರ್ದೇಶಕರಿಂದ ಪರಿಶೀಲಿಸಿ ತಾಂತ್ರಿಕ ಅಭಿಪ್ರಾಯ ಪಡೆದು ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕಂದಾಯ ಕಾಯ್ದೆಯಡಿ ಹಸ್ತಾಂತರಿಸಿಕೊಳ್ಳಲು ತಿಳಿಸಲಾಗಿದೆ.

ರಸ್ತೆ ವಿಸ್ತರಣೆ, ಅಭಿವೃದ್ಧಿ ಕಾಮಗಾರಿಗೆ ಬಿಟ್ಟಂತಹ ಹಾಗೂ ಮುಂದಿನ ದಿನಗಳಲ್ಲಿ ಬಿಡುವಂತಹ ಜಮೀನನ್ನು ಭೂಪರಿವರ್ತನ ಮಾಡಿಸಿ ಪ್ರಾಧಿಕಾರದಿಂದ ವಿನ್ಯಾಸ ನಕ್ಷೆ ಪಡೆದು ಅನಂತರ ಪಾಲಿಕೆಯಲ್ಲಿ ಖಾತಾ ಮಾಡಿಸಲು ಭೂ ಮಾಲಕರು ನಿರಾಕರಿಸುತ್ತಿದ್ದು, ಇದರಿಂದ ರಸ್ತೆ ವಿಸ್ತರಣೆ, ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಪ್ರಕ್ರಿಯೆ ವಿಳಂಬವಾಗಿದೆ. ಭೂ ಪರಿವರ್ತನೆ ಆಗದ ಜಮೀನುಗಳಿಗೆ ಪ್ರಾಪರ್ಟಿ ಕಾರ್ಡ್‌ ನೀಡಲು ತಾಂತ್ರಿಕ ಸಮಸ್ಯೆಯಿಂದ ಸಾಧ್ಯ ಇಲ್ಲ ಎಂದು
ನಗರ ಭೂಮಾಪನ ಇಲಾಖೆಯೂ ಅಭಿಪ್ರಾಯ ವ್ಯಕ್ತಪಡಿಸಿದೆ.

Advertisement

ಟಿಡಿಆರ್‌ ಪ್ರಮಾಣ ಪತ್ರ ಅಗತ್ಯ
ಸಾರ್ವಜನಿಕ ಉದ್ದೇಶಕ್ಕಾಗಿ ರಸ್ತೆ ಮತ್ತಿತರ ಉಪಯೋಗಕ್ಕಾಗಿ ಖಾಸಗಿ ಆಸ್ತಿಯನ್ನು ಬಳಸಿಕೊಂಡು ನಿಗದಿತ ಸಮಯದೊಳಗೆ ಟಿಡಿಆರ್‌ ಪ್ರಮಾಣ ಪತ್ರ ನೀಡುವುದು ಅಗತ್ಯ. ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಿಟ್ಟ ಜಮೀನಿಗೆ ಮಾತ್ರ ಅನ್ವಯಿಸುವಂತೆ ನಗರ ಮೇಜಣಿದಾರರಿಂದ ನಕ್ಷೆ ಪಡೆದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಮೀನನ್ನು ಪಾಲಿಕೆಯ ಹೆಸರಿಗೆ ನೋಂದಣಿ ಮಾಡಿಕೊಡುವ ಪ್ರಕ್ರಿಯೆಗೆ ಮಾತ್ರ ಉಪಯೋಗಿಸುವಂತೆ ಷರತ್ತು ವಿಧಿಸಿ ಖಾತಾ ನೋಂದಣಿ ಮಾಡುವ ಬಗ್ಗೆ ಹಾಗೂ ಖಾತೆ ತೆರೆದ ಪ್ರದೇಶವನ್ನು ಹೊರತುಪಡಿಸಿ ಆರ್‌ಟಿಸಿಯನ್ನು ಉಳಿಕೆ ವಿಸ್ತೀರ್ಣಕ್ಕೆ ಖಾತೆ (ಆರ್‌ಟಿಸಿ) ದಾಖಲಿಸುವಂತೆ ಕಂದಾಯ ಇಲಾಖೆ ತಹಶೀಲ್ದಾರ್‌ರಿಗೆ ಪ್ರಸ್ತಾವನೆ ಸಲ್ಲಿಸುವ ತೀರ್ಮಾನವನ್ನು ಪಾಲಿಕೆ ಕೈಗೊಂಡಿದೆ.

ಸರಕಾರಕ್ಕೆ ಪ್ರಸ್ತಾವನೆ
ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಬಿಟ್ಟುಕೊಟ್ಟ ಜಮೀನಿಗೆ ಮಾತ್ರ ಅನ್ವಯಿಸುವಂತೆ ಖಾತಾ ನೋಂದಣಿ ಮಾಡಲು ಭೂ ಪರಿವರ್ತನೆ, ಏಕನಿವೇಶನ ವಿನ್ಯಾಸ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಗಳಿಂದ ವಿನಾಯಿತಿ ನೀಡಲು ಪಾಲಿಕೆ ಚಿಂತನೆ ನಡೆಸಿದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಜಯಾನಂದ ಅಂಚನ್‌,ಮೇಯರ್‌, ಪಾಲಿಕೆ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next