Advertisement

ಪ್ರಕೃತಿ ವಿಕೋಪ ಕಾರ್ಯಗಳಿಗೆ ವಿನಾಯಿತಿ

10:15 AM Sep 22, 2019 | Team Udayavani |

ಬೆಳಗಾವಿ: ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಅ. 21ರಂದು ನಡೆಯಲಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಕೆಲ ಕಾರ್ಯಗಳಿಗೆ ಯಾವುದೇ ಅಡಚಣೆ ಇಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಥಣಿ, ಕಾಗವಾಡ ಹಾಗೂ ಗೋಕಾಕ ಮತ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಸೆ.23ರಂದು ಅಧಿಸೂಚನೆ ಹೊರಡಿಸಲಾಗುವುದು. ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂ ಧಿಸಿದಂತೆ ಕೆಲ ಕಾಮಗಾರಿಗಳಿಗೆ ವಿನಾಯಿತಿ ನೀಡಲಾಗುವುದು. ಶಾಲೆಗಳಲ್ಲಿ ಸ್ಥಾಪಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಶಾಲೆಗಳನ್ನು ಮತಗಟ್ಟೆಯಾಗಿ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಾಳೆಯಿಂದ ನಾಮಪತ್ರ ಸ್ವೀಕಾರ: ನಾಮಪತ್ರ ಸ್ವೀಕಾರ ಸೆ.23ರಿಂದ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಸೆ.30 ಕಡೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಅ.1ರಂದು ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್‌ ಪಡೆಯಲು ಅ. 3 ಕಡೆಯ ದಿನವಾಗಿರುತ್ತದೆ. ಅ. 21ರಂದು ಮತದಾನ, ಅ. 24ರಂದು ಮತ ಎಣಿಕೆ ನಡೆಯಲಿದೆ. ಜಿಲ್ಲಾದ್ಯಂತ ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಚುನಾವಣಾ ಪ್ರಕ್ರಿಯೆ ಅ.27ರಂದು ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.

ಆಯೋಗದ ನಿರ್ದೇಶನದ ಪ್ರಕಾರ ಉಪ ಚುನಾವಣೆಯಲ್ಲಿ ಶೇ. 140ರಷ್ಟು ಬ್ಯಾಲೆಟ್‌ ಯುನಿಟ್‌, ಶೇ.130ರಷ್ಟು ಕಂಟ್ರೋಲ್‌ ಯುನಿಟ್‌ ಹಾಗೂ ಶೇ. 130ರಷ್ಟು ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುವುದು ಎಂದರು. 6.45 ಲಕ್ಷ ಮತದಾರರು: ಏಪ್ರಿಲ್‌ 4, 2019ಕ್ಕೆ ಅನ್ವಯಿಸುವಂತೆ ಅಥಣಿ, ಕಾಗವಾಡ ಹಾಗೂ ಗೋಕಾಕ ಮತಕ್ಷೇತ್ರಗಳಲ್ಲಿ ಒಟ್ಟಾರೆ 6,45,541 ಮತದಾರರಿದ್ದಾರೆ. ಅಥಣಿ ಮತಕ್ಷೇತ್ರದಲ್ಲಿ 2,17,974 ಮತದಾರರು, ಕಾಗವಾಡ ಮತಕ್ಷೇತ್ರದಲ್ಲಿ 1,85,443 ಹಾಗೂ ಗೋಕಾಕ ಮತಕ್ಷೇತ್ರದಲ್ಲಿ 2,42,124 ಮತದಾರರಿದ್ದಾರೆ. ಅಥಣಿ- 260, ಕಾಗವಾಡ-231ಹಾಗೂ ಗೋಕಾಕ ಕ್ಷೇತ್ರದಲ್ಲಿ 288 ಸೇರಿದಂತೆ ಮೂರು ಕ್ಷೇತ್ರದಲ್ಲಿ ಒಟ್ಟಾರೆ 779 ಮತಗಟ್ಟೆಗಳನ್ನು ಸ್ಥಾಪಿಸಲಾಗವುದು ಎಂದು ವಿವರಿಸಿದರು.

ನಾಮಪತ್ರ ಸ್ವೀಕಾರದ ಕಡೆಯ ದಿನದವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅವಕಾಶವಿರುತ್ತದೆ. ಮಾದರಿ ನೀತಿ ಸಂಹಿತೆ ಜಾರಿಗೆ ವಿವಿಧ ತಂಡಗಳನ್ನು ರಚಿಸಲಾಗಿದ್ದು, ತಕ್ಷಣದಿಂದಲೇ ಕಾರ್ಯಪ್ರವೃತ್ತಗೊಳ್ಳಲಿವೆ. ಮತದಾನ ಸಾಮಗ್ರಿ, ಸಿಬ್ಬಂದಿ ಸೇರಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಗೆ ನಾಲ್ಕು ಸಿಬ್ಬಂದಿಯಂತೆ ನಿಯೋಜಿಸಲಾಗುವುದು. ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ, ಅಪರ ಜಿಲ್ಲಾ ಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಎಸ್‌ಪಿ ಡಾ| ರಾಮ ಲಕ್ಷ್ಮಣ ಅರಸಿದ್ದಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next