ಬೆಂಗಳೂರು: ಆಹಾರ ಇಲಾಖೆಗೆ ಇದುವರೆಗೆ ಸಲ್ಲಿಕೆಯಾಗಿರುವ 2.95 ಲಕ್ಷ ಪಡಿತರ ಅರ್ಜಿಗಳನ್ನು ಮಾನ್ಯ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಆಹಾರ ಇಲಾಖೆ ಸರಕಾರದ ಅನುಮತಿಗಾಗಿ ಕಾದು ಕುಳಿತಿದೆ.
ಪ್ರಸ್ತುತ ಆಹಾರ ಇಲಾಖೆಯಲ್ಲಿರುವ 1.28 ಕೋಟಿ ಪಡಿತರ ಚೀಟಿಗಳ ಪೈಕಿ 30.90 ಲಕ್ಷ ಪಡಿತರ ಚೀಟಿಗಳು ಅರ್ಹತೆಯ ಮಾನದಂಡಗಳನ್ನು ಪೂರೈಸಿಲ್ಲ. 97.27 ಲಕ್ಷ ಪಡಿತರ ಚೀಟಿಗಳು ಮಾತ್ರ ಅರ್ಹವಾಗಿದ್ದು, ಮನೆ-ಮನೆ ಸಮೀಕ್ಷೆ ಮಾಡಿದ ಬಳಿಕ ಅರ್ಹ ಕಾರ್ಡ್‌ಗಳನ್ನು ಮಾತ್ರ ಉಳಿಸಿಕೊಂಡು ಆಹಾರಧಾನ್ಯಕ್ಕಾಗಿ ಬಳಸುವ ಮತ್ತು ವೈದ್ಯಕೀಯ ಉದ್ದೇಶಕ್ಕೆ ಬಳಸುವ ಕಾರ್ಡ್‌ಗಳನ್ನು ಪ್ರತ್ಯೇಕಗೊಳಿಸುವುದಾಗಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದರು.
ಆದರೆ ಇದುವರೆಗೆ ಮನೆ-ಮನೆ ಸಮೀಕ್ಷೆ ಆರಂಭವಾಗಿಲ್ಲ. ಅನ್ನಭಾಗ್ಯ ಯೋಜನೆಯಡಿ 3.70 ಕೋಟಿಗೂ ಅಧಿಕ ಪಡಿತರ ಚೀಟಿದಾರ ಕುಟುಂಬ ಸದಸ್ಯರಿಗೆ ಅಗತ್ಯವಿರುವ 2.40 ಲಕ್ಷ ಟನ್ ಅಕ್ಕಿಯೂ ಲಭಿಸುತ್ತಿಲ್ಲ. ಹೀಗಾಗಿ ಹೊಸ ಅರ್ಜಿಗಳನ್ನು ಮಾನ್ಯ ಮಾಡಬೇಕೆ, ಬೇಡವೇ ಎಂಬ ಚರ್ಚೆ ಇತ್ತು. ಈಗ ಅವುಗಳನ್ನು ಮಾನ್ಯ ಮಾಡುವ ಸಂಬಂಧ ಹಣಕಾಸು ಇಲಾಖೆಯ ಅನುಮತಿ ಕೇಳಲಾಗಿದೆ.
ಒಂದು ವೇಳೆ 2.95 ಲಕ್ಷ ಅರ್ಜಿಗಳು ಮಾನ್ಯಗೊಂಡರೆ, ಬರೋಬ್ಬರಿ 1.31 ಕೋಟಿ ಪಡಿತರ ಚೀಟಿಗಳಾಗಲಿದ್ದು, ಫಲಾನುಭವಿಗಳ ಸಂಖ್ಯೆಯೂ ಹೆಚ್ಚಲಿದೆ. ಪ್ರಸ್ತುತ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರವು ತಲಾ 5 ಕೆ.ಜಿ. ಅಕ್ಕಿ ಕೊಡುತ್ತಿದ್ದು, ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ಕೊಡುವುದಾಗಿ ರಾಜ್ಯ ಸರಕಾರ ಪ್ರಕಟಿಸಿತ್ತು. ಅಕ್ಕಿ ಸಿಗದ ಕಾರಣ ತಲಾ 170 ರೂ.ಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದ್ದು, ಆಗಸ್ಟ್ ತಿಂಗಳ ಹಣವೇ ಹಲವರ ಖಾತೆಗೆ ತಲುಪಿಲ್ಲ. ಇದರ ನಡುವೆ ಬರಗಾಲ ಘೋಷಣೆಯಾದರೆ, ಅಂತಹ ತಾಲೂಕುಗಳ ಫಲಾನುಭವಿಗಳ ಖಾತೆಗೆ ಹಣದ ಬದಲು ಹೆಚ್ಚುವರಿ ಅಕ್ಕಿಯನ್ನೇ ಕೊಡುವುದಾಗಿ ಪ್ರಕಟಿಸಲಾಗಿತ್ತು. ಇದುವರೆಗೆ ಬರಗಾಲವೂ ಘೋಷಣೆಯಾಗಿಲ್ಲ, ಹೆಚ್ಚುವರಿ ಅಕ್ಕಿ ಖರೀದಿಯೂ ಆಗಿಲ್ಲ. ಹೀಗಿರುವಾಗ ಹೊಸ ಅರ್ಜಿಗಳಿಗೆ ಹಣಕಾಸು ಇಲಾಖೆಯ ಅನುಮತಿ ಸಿಗಲಿದೆಯೇ ಎಂಬುದು ಆಹಾರ ಇಲಾಖೆಗೂ ಸ್ಪಷ್ಟವಿಲ್ಲ.
ವೈದ್ಯಕೀಯ ತುರ್ತು ಇದ್ದರಷ್ಟೇ ಕಾರ್ಡ್
ಆಹಾರ ಧಾನ್ಯಗಳಿಗಿಂತ ವೈದ್ಯಕೀಯ ಬಳಕೆಗಾಗಿ ಬಿಪಿಎಲ್ ಕಾರ್ಡ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅರ್ಜಿಗಳನ್ನು ಪುರಸ್ಕರಿಸಲಾಗುತ್ತಿದೆ. ಸತತ ಮೂರು ತಿಂಗಳಿಂದ ಆಹಾರ ಧಾನ್ಯ ಪಡೆಯದ ಬಿಪಿಎಲ್ ಕಾರ್ಡ್‌ಗಳ ಸರಾಸರಿ ಸಂಖ್ಯೆ 5 ಲಕ್ಷದಷ್ಟಿದ್ದು, ಇಂಥವರು ವೈದ್ಯಕೀಯ ತುರ್ತು ಬಳಕೆಗೆ ಮಾತ್ರ ಬಿಪಿಎಲ್ ಕಾರ್ಡ್ ಬಳಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ವೈದ್ಯಕೀಯ ತುರ್ತು ಇದ್ದವರಿಗೆ ಬಿಪಿಎಲ್ ಕಾರ್ಡ್ ಕೊಡಲು ಸರಕಾರ ಅನುಮತಿಸಿ ನೀಡಿದ್ದು, ಇದಕ್ಕಾಗಿ ಅರ್ಜಿ ಹಾಕಿ ಬಿಪಿಎಲ್ ಕಾರ್ಡ್ ಪಡೆಯಬಹುದಾಗಿದೆ.