ಸಾಗರ: ಕಾಲಕಾಲಕ್ಕೆ ಸಮಾಜ ಬದಲಾವಣೆಗೆ ಒಂದಷ್ಟು ದಾರ್ಶನಿಕರು ಅವತಾರ ತಳೆಯುತ್ತಾರೆ. ಅಂತಹವರು ಆ ಸಂದರ್ಭದಲ್ಲಿ ಹಾಕಿಕೊಟ್ಟ ಮಾರ್ಗದರ್ಶನ ಇಂದಿಗೂ ಅನುಕರಣೀಯವಾಗಿದೆ ಎಂದು ಶಾಸಕ ಎಚ್. ಹಾಲಪ್ಪ ಹೇಳಿದರು.
ನಗರದ ಬ್ರಾಸಂ ಸಭಾ ಭವನದಲ್ಲಿ ಭಾನುವಾರ ಸ್ನೇಹಸಾಗರ ಸ್ವ-ಸಹಾಯ ಮಹಿಳಾ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ರಾಜ್ಯಮಟ್ಟದ ಮಹಿಳಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು 900 ವರ್ಷಗಳ ಹಿಂದೆ ಸಮಾಜ ಸಂಕೀರ್ಣ ಸ್ಥಿತಿಯಲ್ಲಿತ್ತು. ಬೇರೆ ಬೇರೆ ಆಚರಣೆಗಳು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಜೊತೆಗೆ ಸಾಮರಸ್ಯಕ್ಕೆ ಅಡ್ಡಿಯುಂಟು ಮಾಡಿತ್ತು. ಇಂತಹ ಹೊತ್ತಿನಲ್ಲಿ 11ನೇ ಶತಮಾನದಲ್ಲಿ ದಾಸ ಸಾಹಿತ್ಯ ಒಂದು ಹಂತದಲ್ಲಿ ಸಮಾಜ ಪರಿವರ್ತನೆಗೆ ಕೀರ್ತನೆ ಮೂಲಕ ಮುನ್ನುಡಿ ಬರೆದರೆ 12ನೇ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ಸಾಗಲು ಪ್ರೇರಣೆ ನೀಡಿತು ಎಂದರು.
ಕನಕದಾಸರು, ಪುರಂದರ ದಾಸರಂತಹವರು ತಮ್ಮ ಕೀರ್ತನೆ ಮೂಲಕ ಸಮಾಜದಲ್ಲಿರುವ ಅನಿಷ್ಟಗಳನ್ನು ಎತ್ತಿ ತೋರಿಸಿ ಅದರ ಪರಿವರ್ತನೆ ಮಾತ್ರದಿಂದಲೇ ಸುಂದರ ಬದುಕು ಕಟ್ಟಿಕೊಳ್ಳಬಹುದು ಎನ್ನುವುದನ್ನು ಸಾರಿದರೆ 12ನೇ ಶತಮಾನದಲ್ಲಿ ಕ್ರಾಂತಿಯೋಗಿ ಬಸವಣ್ಣ ಅವರು ಅನುಭವ ಮಂಟಪವನ್ನು ಪ್ರಾರಂಭಿಸುವ ಮೂಲಕ 800ಕ್ಕೂ ಹೆಚ್ಚು ಶರಣರು ವಚನ ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆಗೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಅರ್ಥವಾಗದ ಭಾಷೆಯಲ್ಲಿ ಸಾಹಿತ್ಯ ರಚಿಸಿ, ಜನರಿಗೆ ಅರ್ಥವಾಗದ ರೀತಿಯಲ್ಲಿ ಬಿಂಬಿಸುವ ಕೆಲಸ ನಡೆಯುತ್ತಿದೆ. ಆದರೆ ಅಂದು ಜನರಿಗೆ ತೀರ ಹತ್ತಿರವಾದ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚಿಸಿ ಜನರ ಮನಪರಿವರ್ತನೆಗೆ ಪ್ರಯತ್ನ ನಡೆಸಲಾಗಿತ್ತು. ಇಂದು ಸಮಾನ ಪರಿವರ್ತನೆಗೆ ಮಾರ್ಗದರ್ಶನ ಮಾಡುವವರ ಕೊರತೆ ಇದೆ. ಮುಂದಿನ ಪ್ರಜೆಗಳು ಯಾರನ್ನು ಆದರ್ಶವಾಗಿ ಇರಿಸಿಕೊಳ್ಳಬೇಕು ಎನ್ನುವ ಸಂದಿಗ್ದತೆಯಲ್ಲಿದ್ದಾರೆ. ಇಂತಹ ಸಮ್ಮೇಳನಗಳಲ್ಲಿ ದಾರ್ಶನಿಕರ ತತ್ವಾದರ್ಶಗಳನ್ನು ತಿಳಿಸಿಕೊಡುವ ಮೂಲಕ ಯುವಜನರಿಗೆ ಸನ್ಮಾರ್ಗವನ್ನು ಹಾಕಿಕೊಡುವ ಅಗತ್ಯವಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿಪಂ ಸದಸ್ಯೆ ಅನಿತಾಕುಮಾರಿ ಮಾತನಾಡಿ, ಹೆಣ್ಣನ್ನು ನೋಡುವ ಸಮಾಜದ ದೃಷ್ಟಿಕೋನ ಇಂದಿಗೂ ಬದಲಾಗಿಲ್ಲ. ಮಹಿಳೆಯನ್ನು ಎರಡನೇ ದರ್ಜೆಯಲ್ಲಿಟ್ಟು ನೋಡುವ ಸಂಸ್ಕೃತಿ ದೂರವಾಗುವ ತನಕ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಮಹಿಳೆಯರ ಸಾಧನೆಯನ್ನು ಗುರುತಿಸುವ ಕೆಲಸ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕು ಎಂದು ಹೇಳಿದರು.
‘ದಾಸ ಸಾಹಿತ್ಯದ ವಿಶೇಷತೆ’ ವಿಷಯ ಕುರಿತು ಮೈಸೂರಿನ ನಿವೃತ್ತ ಪ್ರಾಧ್ಯಾಪಕಿ ಡಾ|ನಾಗರತ್ನ ಟಿ.ಎಸ್., ‘ವಚನಕಾರರಲ್ಲಿ ಸಾಮಾಜಿಕ ಪ್ರಜ್ಞೆ ವಿಷಯ ಕುರಿತು ಬೆಂಗಳೂರು ಕೆ.ಆರ್. ಪುರಂನ ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸಂಪದ ಕೇರಿಮನಿ ಉಪನ್ಯಾಸ ನೀಡಿದರು. ಸಮ್ಮೇಳನದ ಅಧ್ಯಕ್ಷೆ ಡಾ| ಲೀಲಾದೇವಿ ಆರ್. ಪ್ರಸಾದ್, ಸ್ನೇಹಸಾಗರ ಮಹಿಳಾ ಮಂಡಳಿ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ ಇನ್ನಿತರರು ಇದ್ದರು. ಮಂಡಳಿಯ ಸದಸ್ಯರು ಪ್ರಾರ್ಥಿಸಿದರು. ನಂದಾ ಗೊಜನೂರು ಸ್ವಾಗತಿಸಿದರು. ಪುಷ್ಪಾ ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಂದಾ ಶಶಿಭೂಷಣ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಶಾಂತಲಾ ದಾನಪ್ಪ ವಂದಿಸಿದರು. ಸವಿತಾ ನಿರೂಪಿಸಿದರು.