Advertisement

ಯಕ್ಷಸಂಗಮಕ್ಕೆ ವಿಂಶತಿ ಸಂಭ್ರಮ

06:43 PM Jul 18, 2019 | mahesh |

ಯಕ್ಷಗಾನ ಲಲಿತಕಲೆಗಳ ಅಂಶವನ್ನು ಹೀರಿ ಬೆಳೆದ ಅಭಿಜಾತ ಕಲೆ. ಸಂಗೀತ, ಸಾಹಿತ್ಯ, ನರ್ತನ…ಹೀಗೆ ಹಲವು ಕಲೆಗಳ ಸಂಗಮರಂಗವಾಗಿರುವ ಈ ಸ್ವಯಂಭೂ ಕಲೆಯ ವಾಚಿಕಾಭಿನಯ ಅತ್ಯಂತ ವಿಶಿಷ್ಟವಾದುದು. ಪಾಂಡಿತ್ಯ ಮತ್ತು ಪ್ರತ್ಯುತ್ಪನ್ನಮತಿತ್ವಗಳನ್ನು ಅಪೇಕ್ಷಿಸುವ ಇಲ್ಲಿನ ಆಶುಸಾಹಿತ್ಯ ಒಂದು ಕಲೆಯಾಗಿ ಬೆಳಕಿಗೆ ಬಂದದ್ದು ತಾಳಮದ್ದಳೆಯ ರೂಪದಲ್ಲಿ. ಯಕ್ಷಗಾನದ ಪ್ರೇಕ್ಷಕರಲ್ಲಿ ತಾಳಮದ್ದಳೆಯ ಶ್ರೋತೃಗಳೆಂಬ ಪ್ರತ್ಯೇಕ ವರ್ಗವಿದೆ. ಅವರಿಗಾಗಿಯೇ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವಾರು ಸಂಘಗಳಿವೆ. ಇವುಗಳಲ್ಲಿ ಒಂದು ವಿಶಿಷ್ಟ ಸಂಸ್ಥೆ ಮೂಡಬಿದಿರೆಯ “ಯಕ್ಷಸಂಗಮ. ಈ ಸಂಸ್ಥೆ ಈ ವರ್ಷ ತನ್ನ ವಿಂಶತಿ ಉತ್ಸವವನ್ನು ಆಚರಿಸಲು ಸಜ್ಜಾಗಿದೆ. ಜು.27ರಂದು ರಾತ್ರಿ 9 ಘಂಟೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Advertisement

2000ದ ಜುಲೈಯಲ್ಲಿ “ಯಕ್ಷಸಂಗಮ’ ಸ್ಥಾಪನೆಯಾಯಿತು. ಉದ್ಯಮಿಗಳಾದ ನಿತ್ಯಾನಂದ ಪ್ರಭು, ವಿಶ್ವನಾಥ ಕಾಮತ್‌, ಪಾಂಡುರಂಗ ಡಾಂಗೆ, ಪ್ರಸನ್ನ ಶೆಣೈ, ಅಶೋಕ ಮಲ್ಯ, ನಿತ್ಯಾನಂದ ಪೈ, ವಿಠಲ ಪ್ರಭು ಮೊದಲಾದ ಸಮಾನಮನಸ್ಕ ತಾಳಮದ್ದಳೆಯ ಅಭಿಮಾನಿಗಳ ಜೊತೆ ಈ ಸಂಸ್ಥೆಯನ್ನು ಸ್ಥಾಪಿಸಿದವರು ಮೂಡಬಿದಿರೆಯ ಲೇಖಕ, ಸಂಘಟಕ, ಉದ್ಯಮಿ ಶಾಂತಾರಾಮ ಕುಡ್ವರು.

ಒಂದು ಕಾಲದಲ್ಲಿ ಮೂಡಬಿದಿರೆ ತಾಳಮದ್ದಳೆಯ ವೈಭವಕ್ಕೆ ಹೆಸರಾದ ಊರು. ಕ್ರಮೇಣ ಕ್ಷೀಣಿಸಿದ ವೈಭವವನ್ನು ಮತ್ತೆ ಸ್ಥಾಪಿಸಿದ್ದು ಯಕ್ಷಸಂಗಮ. ಕುಡ್ವರ ಪ್ರಸಂಗ ಜ್ಞಾನ, ಅರ್ಥದಾರಿಗಳ ಜೊತೆಗಿರುವ ಗೆಳೆತನ, ಸಂಘಟನಾ ಚಾತುರ್ಯ ಯಕ್ಷಸಂಗಮ ಸಂಸ್ಥೆಗೆ ಅಪಾರ ಶಕ್ತಿ ನೀಡಿತು. ಮೂಡುಬಿದಿರೆಯ ತಾಳಮದ್ದಳೆಯ ವೈಭವ ಮರುಕಳಿಸಿತು.

ಇಡೀ ರಾತ್ರಿಯ ವಾಚಿಕ ಸಮಾರಾಧನೆ, ಘಟಾನುಘಟಿ ಅರ್ಥಧಾರಿಗಳ ಸಮ್ಮಿಲನ, ವಚನರಚನಾ ನಿಪುಣ ಮಾತುಗಾರರ ಚೇತೋಹಾರಿ ಅರ್ಥ, ವಾದ-ವಿವಾದಗಳ ರಣಾಂಗಣವಾಗುವ ವೇದಿಕೆ, ಅಚ್ಚುಕಟ್ಟಾದ ವ್ಯವಸ್ಥೆ, ಉತ್ತಮ ಸಂಭಾವನೆ…ಇದೆಲ್ಲಾ ಮೂಡಬಿದಿರೆಯ ಯಕ್ಷಸಂಗಮದ ವೈಶಿಷ್ಟ್ಯ.

ಕವಿಭೂಷಣ ವೆಂಕಪ್ಪ ಶೆಟ್ಟರು, ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಶಂಕರನಾರಾಯಣ ಸಾಮಗರು, ನಾರಾಯಣ ಕಿಲ್ಲೆ, ಪೊಲ್ಯ ದೇಜಪ್ಪ ಶೆಟ್ಟಿ ಮೊದಲಾದವರು ಹಳೆಗಾಲದಲ್ಲಿ ಮೂಡಬಿದಿರೆಯ ತಾಳಮದ್ದಳೆಯ ವೈಭವವನ್ನು ಮೆರೆಸಿದ ಅರ್ಥಧಾರಿಗಳು. ಆ ವೈಭವವನ್ನು ಮುಂದುವರಿಸುತ್ತಿರುವ ಯಕ್ಷಸಂಗಮದಲ್ಲಿ ಶೇಣಿ, ಸಾಮಗರು, ಪೆರ್ಲ, ಕುಂಬ್ಳೆ, ಕೊರ್ಗಿ, ಕಾಂತ ರೈಗಳು, ಮಾರೂರು ಮಂಜುನಾಥ ಭಂಡಾರಿ, ತೆಕ್ಕಟ್ಟೆ ಆನಂದ ಮಾಸ್ತರ್‌ ಮೊದಲಾದ ಅರ್ಥದಾರಿಗಳು ವಿಜೃಂಭಿಸಿದ್ದಾರೆ. ಈಗಲೂ ಸುಪ್ರಸಿದ್ಧ ಅರ್ಥಧಾರಿಗಳು ಮಾತಿನ ಮಂಟಪವನ್ನು ರಂಗೇರಿಸುತ್ತಿದ್ದಾರೆ.

Advertisement

ಪ್ರತೀ ವರುಷ ಹಿರಿಯ ಕಲಾವಿದರೋರ್ವರಿಗೆ ಸಮ್ಮಾನ ಹಾಗೂ ಗತಿಸಿದ ಕಲಾವಿದರ ಸಂಸ್ಮರಣೆಯನ್ನೂ ಯಕ್ಷಸಂಗಮ ಮಾಡುತ್ತಿದೆ. ಡಾ| ಶೇಣಿ, ಸಾಮಗ, ಕುಂಬ್ಳೆ, ಮಿಜಾರು, ಡಾ|ಕೋಳ್ಯೂರು, ಪೆರ್ಲ ಹೀಗೆ ಕಳೆದ ಹತ್ತೂಂಭತ್ತು ವರ್ಷಗಳಲ್ಲಿ ಇಪ್ಪತ್ತೂಂದು ಮಂದಿ ಹಿರಿಯ ಕಲಾವಿದರು ಯಕ್ಷಸಂಗಮದ ಸಮ್ಮಾನಕ್ಕೆ ಪಾತ್ರರಾಗಿದ್ದಾರೆ. ಈ ವರುಷದ ಸಮ್ಮಾನಕ್ಕೆ ಕಟೀಲು ಮೇಳದ ಮದ್ಲೆಗಾರ
ಮುಚ್ಚಾರು ಮೋಹನ ಶೆಟ್ಟಿಗಾರರು ಆಯ್ಕೆಯಾಗಿದ್ದಾರೆ.

ಕಾಸರಗೋಡು, ಮಂಗಳೂರು, ಉಡುಪಿ, ಉತ್ತರಕನ್ನಡ ಜಿಲ್ಲೆಗಳಿಂದ ಮಾತ್ರವಲ್ಲ ಮಲೆನಾಡಿನಿಂದಲೂ ಈ ತಾಳಮದ್ದಳೆಗೆ ಬರುವ ಶ್ರೋತೃಗಳಿದ್ದಾರೆ. ಇಡೀ ರಾತ್ರಿ ತುಂಬಿದ ಗೃಹದಲ್ಲಿ ತಾಳಮದ್ದಳೆಯನ್ನು ಅಭಿಮಾನಿಗಳು ಆಸ್ವಾದಿಸುತ್ತಿದ್ದಾರೆಯೆಂದರೆ ಈ ಕಾರ್ಯಕ್ರಮ ಅದೆಷ್ಟು ರಸಸ್ಯಂದಿಯಾಗಿ ನಡೆಯುತ್ತಿದೆಯೆಂಬುವುದನ್ನು ಯಾರೂ ಊಹಿಸಬಹುದು.

ಸುದೀರ್ಘ‌ ಕಾಲಪ್ರವಾಹದಲ್ಲಿ ಇಪ್ಪತ್ತು ವರ್ಷಗಳ ಕಾಲಖಂಡ ತೀರಾ ಸಣ್ಣದಾದರೂ ತಾಳಮದ್ದಳೆಗಾಗಿಯೇ ಸಂಸ್ಥೆಯೊಂದನ್ನು ಹುಟ್ಟುಹಾಕಿ ಇಪ್ಪತ್ತು ವರ್ಷಗಳ ಕಾಲ ಮುನ್ನಡೆಸುವ ಸಾಹಸಯಾತ್ರೆ ಮಾತ್ರ ಸಾಧಾರಣ ಸಂಗತಿಯಲ್ಲ. ಪ್ರಸಿದ್ಧ ಮೇಳಗಳ ಪ್ರದರ್ಶನಗಳೇ ಕಾಲಮಿತಿಗೆ ಶರಣಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಇಡೀ ರಾತ್ರಿಯ ತಾಳಮದ್ದಳೆಯನ್ನು ಆಯೋಜಿಸಿ; ಸೂರ್ಯ ಮೂಡುವ ತನಕ ಶ್ರೋತೃವೃಂದವನ್ನು ಹಿಡಿದು ನಿಲ್ಲಿಸುವ ಸಂಘಟಕರ ಸಾಮರ್ಥ್ಯ ಅಸಾಧಾರಣವಾದುದು.

ಪ್ರತಿವರ್ಷವೂ ಪ್ರಸಿದ್ಧ ಅರ್ಥಧಾರಿಗಳ ಕೂಡುವಿಕೆಯಿಂದ, ಉತ್ತಮ ಪ್ರಸಂಗಗಳ ಆಯೋಜನೆಯಿಂದ ಆರಂಭದ ವರ್ಷದಿಂದ ಇಲ್ಲಿಯ ತನಕ ತಾಳಮದ್ದಳೆಯ ಗುಣಮಟ್ಟವನ್ನು ಕಾಯ್ದುಕೊಂಡು ಯಕ್ಷಗಾನ ಆಶುಸಾಹಿತ್ಯಾಸಕ್ತರನ್ನು ಆಕರ್ಷಿಸುತ್ತಾ ಬಂದ ಸದಾ ಸ್ಮರಣೀಯ ಕಾರ್ಯಕ್ರಮವನ್ನು ನೀಡುವ ಯಕ್ಷಸಂಗಮದ ಸಕಲ ಪದಾಧಿಕಾರಿಗಳು ಮತ್ತು ಸೂತ್ರಧಾರ ಶಾಂತಾರಾಮ ಕುಡ್ವರು ದಿಟಕ್ಕೂ ಅಭಿನಂದನೀಯರು.

ತಾರಾನಾಥ ವರ್ಕಾಡಿ

Advertisement

Udayavani is now on Telegram. Click here to join our channel and stay updated with the latest news.

Next