Advertisement

ಗಣೇಶ ಚತುರ್ಥಿ ಹಬ್ಬಕ್ಕೆ ಸಂಭ್ರಮದ ಚಾಲನೆ

12:49 PM Sep 15, 2018 | |

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಗಣೇಶ ಚತುರ್ಥಿ ಹಬ್ಬಕ್ಕೆ ಸಡಗರ ಸಂಭ್ರಮದ ಚಾಲನೆ ದೊರೆಯಿತು. ಬೆಳಗ್ಗೆ ಮಕ್ಕಳೊಂದಿಗೆ ಮಾರುಕಟ್ಟೆಗೆ ತೆರಳಿದ ಜನರು ನಾಲ್ಕೈದು ಕಡೆ ಚೌಕಾಸಿ ಮಾಡಿ ವಿವಿಧ ಭಂಗಿ ಗಣೇಶ ಮೂರ್ತಿಗಳನ್ನು ಖರೀದಿಸಿದರು. ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಿರುವ ಅಲಂಕಾರಿಕ ವಸ್ತುಗಳು, ವಿವಿಧ ಹಣ್ಣು, ಹೂ ಸೇರಿದಂತೆ ಪಟಾಕಿ ಖರೀದಿ ಜೋರಾಗಿತ್ತು. ಬಸವೇಶ್ವರ ವೃತ್ತದ ಸುತ್ತಲಿನ ಮಾರುಕಟ್ಟೆ ಪ್ರದೇಶ ಜನ ಜಂಗುಳಿಯಿಂದ ಕೂಡಿತ್ತು.

Advertisement

ಇಲ್ಲಿನ ಪುರಸಭೆ ಆಡಳಿತ ಪಿಒಪಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಮಾರಾಟ ಮಾಡಬೇಕು ಎಂದು ಮೂರ್ತಿ ತಯಾರಕರ ಸಭೆಯಲ್ಲಿ ಹೇಳಿದ್ದರಿಂದ ಹೆಚ್ಚಿನ ಪರಿಣಾಮ ಬೀರಿತ್ತು.

ಮಾರುಕಟ್ಟೆಯಲ್ಲಿ ಮಣ್ಣಿನಿಂದ ತಯಾರಿಸಿದ್ದ ಪರಿಸರ ಸ್ನೇಹಿ ಗಣಪತಿ ಖರೀದಿ ಬಲು ಜೋರಾಗಿತ್ತು. ಬಣ್ಣ ರಹಿತವಾದ ಮಣ್ಣಿನ ಗಣೇಶ ಮೂರ್ತಿಗಳು ಬಂದಿದ್ದು ವಿಶೇಷವಾಗಿತ್ತು. ಕೆಲವರು ಬಣ್ಣ ಹಚ್ಚದ ಮಣ್ಣಿನ ಗಣೇಶ ಮೂರ್ತಿ ಖರೀಸಿದರು.
 
ಆಕಾರಕ್ಕೆ ತಕ್ಕಂತೆ ಗಣೇಶ ಮೂರ್ತಿಗಳು ಮನೆಯಲ್ಲಿ ಪ್ರತಿಷ್ಠಾಪಿಸಲು 150ರಿಂದ 800 ರೂ.ವರೆಗೆ ಮಾರಾಟವಾದವು. ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು 2 ಸಾವಿರದಿಂದ 10 ಸಾವಿರ
ರೂ.ವರೆಗೆ ಮಾರಾಟವಾದವು. ಹೂವು, ಹಣ್ಣುಗಳ ದರ ಒಂದಷ್ಟು ಹೆಚ್ಚಿನಿಸದರೂ ಚೌಕಾಸಿ ಮಾಡಿ ಖರೀದಿಸಿದರು.

ಕುಟುಂಬ ಸದಸ್ಯರೊಂದಿಗೆ ತೆರಳಿದ ಜನರು ಗಣೇಶ ಮೂರ್ತಿಯನ್ನು ಖರೀದಿಸಿ ಜಯಘೋಷಣೆಯೊಂದಿಗೆ
ಮನೆಗೆ ತೆಗೆದುಕೊಂಡು ಹೋಗಿ ಅಲಂಕಾರಿಕ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ವಿವಿಧ ಶಾಲೆಗಳ ಮಕ್ಕಳು ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ತಂದು ಶಾಲೆಯಲ್ಲಿ ಪ್ರತಿಷ್ಠಾಪಿಸಿ ಸಂಭ್ರಮಿಸಿದರು. ಕೆಲ ಶಾಲೆಗಳಲ್ಲಿ ಸಂಜೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಿತು. 

ಪಟ್ಟಣದ ಬಸವ ತತ್ವ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಸಂಜೆ ವಿಶೇಷ ಪೂಜೆ
ಸಲ್ಲಿಸಿದ ನಂತರ ಬುಟ್ಟಿಯಲ್ಲಿ ವಿಸರ್ಜನೆ ಮಾಡಿದರು. ಮೂರ್ತಿ ನೀರಿನಲ್ಲಿ ಕರಗಿದ ನಂತರ ನೆಟ್ಟ ಸಸಿಗೆ ನೀರುಣಿಸಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದರು.

Advertisement

ಪಟ್ಟಣದ ಬಸ್‌ ನಿಲ್ದಾಣ ಮುಂಭಾಗ, ರಾಣಿ ಚನ್ನಮ್ಮ ವೃತ್ತ, ಅಗಸಿ ಒಳಗಡೆ, ಬಸವಜನ್ಮ ಸ್ಮಾರಕ ಮುಂಭಾಗ, ಪಡಶೆಟ್ಟಿ ಗಲ್ಲಿ, ಓಂ ನಗರ, ಗಣೇಶ ಗನರ, ವೀರಭದ್ರೇಶ್ವರ ನಗರ ಸೇರಿದಂತೆ ವಿವಿಧ ಬಡಾಚಣೆಯಲ್ಲಿ ಅಲಂಕೃತ ಮಂಟಪದಲ್ಲಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next