ಉಪ್ಪಿನಬೆಟಗೇರಿ: ಸಮೀಪದ ಹನುಮನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಸಂಜೆ ಕಾರ ಹುಣ್ಣಿಮೆ ನಿಮಿತ್ತವಾಗಿ ರೈತರು ಎತ್ತುಗಳನ್ನು ಅಲಂಕರಿಸಿ ಕರಿ ಹರಿಯುವ ಕಾರ್ಯಕ್ರಮ ಜರುಗಿತು. ಗ್ರಾಮದ ರೈತರು ತಮ್ಮ-ತಮ್ಮ ಎತ್ತುಗಳಿಗೆ ವಿವಿಧ ಬಣ್ಣ ಮತ್ತು ಜೂಲುಗಳಿಂದ ಅಲಂಕರಿಸಿ ಕೊಂಬುಗಳಿಗೆ ವಿವಿಧ ಬಗೆಯ ಖಾದ್ಯಗಳಾದ ಕಡುಬು, ಕೋಡಬಳೆ, ವಡೆ, ಕರಚಿಕಾಯಿ, ಶೇಂಗಾ, ಗಾರಿಗೆ, ಕೊಬ್ರಿ ಸೇರಿದಂತೆ ಕರಿದ ಪದಾರ್ಥಗಳನ್ನು ಕಟ್ಟಲಾಗಿತ್ತು.
ಗ್ರಾಮದ ಅಗಸಿಯಲ್ಲಿ ಎರಡು ಎತ್ತುಗಳಿಗೆ ಮುಂಗಾರಿ ಮತ್ತು ಹಿಂಗಾರಿ ಎಂದು ನಾಮಕರಣ ಮಾಡಿ ಮೊದಲು ಆ ಎತ್ತುಗಳನ್ನು ಓಡಲು ಬಿಟ್ಟು ನಂತರ ಉಳಿದವುಗಳನ್ನು ತಂಡೋಪ ತಂಡವಾಗಿ ಓಡಿಸಲಾಯಿತು. ಹೀಗೆ ಮೊದಲು ಓಡುವ ಎರಡು ಎತ್ತುಗಳಲ್ಲಿ ಯಾವ ಎತ್ತು ಮೊದಲು ಹೋಗುತ್ತದೆಯೋ ಅದರ ಮೇಲೆ ಹಿಂಗಾರಿ ಮತ್ತು ಮುಂಗಾರಿ ಮಳೆ ಉತ್ತಮವಾಗಿ ಬೆಳೆ ಚನ್ನಾಗಿ ಬರುತ್ತದೆ ಎಂಬ ನಂಬಿಕೆ ರೈತ ಬಾಂಧವರದ್ದಾಗಿದೆ.
ಓಡುವ ಎತ್ತುಗಳನ್ನು ಹರಿಜನಕೇರಿ ಓಣಿಯ ಜನರು ಬೆನ್ನಟ್ಟಿ ಅವುಗಳಿಗೆ ಕಟ್ಟಿದ ಖಾದ್ಯಗಳನ್ನು ಹರಿದು ತಿನ್ನುವ ಸಂಪ್ರದಾಯ ಇದೆ. ಮೊದಲಿನಿಂದಲೂ ಬಂದ ಪದ್ಧತಿಯಾಗಿದ್ದು, ಈಗಲೂ ಕೂಡ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇದನ್ನು ಮಾಡುವುದರಿಂದ ಉತ್ತಮ ಮಳೆ-ಬೆಳೆ ಚನ್ನಾಗಿ ಆಗುತ್ತದೆ ಎನ್ನುತ್ತಾರೆ ಅಲ್ಲಿನ ರೈತರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯ ಕಲ್ಲಪ್ಪ ಬೊಬ್ಬಿ, ಈಶ್ವರಪ್ಪ ಹಟ್ಟಿ, ಅಶೋಕ ಅಷ್ಟಗಿ, ಮಹೇಶ ಬೂಬ್ಬಿ,ನೇಮಣ್ಣ ಅಷ್ಟಗಿ, ಮಡಿವಾಳಪ್ಪ ದೊಡವಾಡ, ಶಂಕರ ಅರಳಿಕಟ್ಟಿ, ಮಹಾಂತೇಶ ದೊಡವಾಡ, ಬಸವರಾಜ ತಿಗಡಿ, ರುದ್ರಪ್ಪ ದೊಡಮನಿ, ಯಲ್ಲಪ್ಪ ಹೊಸಮನಿ, ಪರಮೇಶ್ವರ ದೊಡವಾಡ, ಹನುಮಂತಪ್ಪ ಜಾಧವ, ನಾಗಪ್ಪ ಹಾರೋಬೆಳವಡಿ, ಚಂದ್ರು ಅಷ್ಟಗಿ, ರಮೇಶ ದೊಡವಾಡ, ಧರೆಪ್ಪ ಬೊಬ್ಬಿ, ನಿಂಗಪ್ಪ ತಿಗಡಿ, ಮಹಾದೇವಪ್ಪ ದೊಡವಾಡ, ಮಂಜುನಾಥ ದೊಡವಾಡ ಇದ್ದರು.