Advertisement
ಕೇರಳ ವಿದ್ಯಾಭ್ಯಾಸದ 6ನೇ ತರಗತಿಯ ಕನ್ನಡ ಪಠ್ಯದಲ್ಲಿ ಹಳೆಯ ಪ್ರಾಚ್ಯವಸ್ತುಗಳ ಪರಿಚಯಾತ್ಮಕ ಪಾಠವಿದ್ದು, ಈ ಮೂಲಕ ಪ್ರಾಚ್ಯವಸ್ತುಗಳ ಬಗೆಗೆ ಅರಿವು ಮೂಡಿಸುವ ಯತ್ನಗಳು ಮಕ್ಕಳಿಗೆ ಉತ್ತಮ ಮೇವು ಒದಗಿಸುತ್ತವೆ. ಈ ಹಿನ್ನೆಲೆಯಲ್ಲಿ ಪಠ್ಯವನ್ನು ಹೆಚ್ಚು ಕ್ರಿಯಾತ್ಮಕಗೊಳಿಸುವ ಪ್ರಯತ್ನ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಮಂಗಳವಾರ ನಡೆಯಿತು.
ಮಕ್ಕಳಿಗೆ ಪರಂಪರೆ ಸಾಗಿಬಂದ ಹೆಜ್ಜೆ ಗುರುತುಗಳನ್ನು ಪರಿಚಯಿಸಲು ಚೆನ್ನೆಮಣೆ, ಮರದ ಮರಿಗೆ, ಹಳೆಯ ಲ್ಯಾಂಪ್, ಲಾಟಾನು, ಮಡಿಕೆ, ಶ್ಯಾವಿಗೆ ಮಣೆ, ನಾಣ್ಯ ಮೊದಲಾದ ಹಲವು ಹತ್ತು ವಸ್ತುಗಳನ್ನು ತೋರಿಸಿ ಪಠ್ಯ ಬೋಧಿಸಲಾಯಿತು. ಮಕ್ಕಳು ಶಿಕ್ಷಕರಿಂದ ಅವುಗಳ ಬಳಕೆ, ವಿಶೇಷತೆಗಳನ್ನು ಕೇಳಿ ಸ್ವತಃ ಕೈಯಿಂದ ಮುಟ್ಟಿ ಖುಷಿಪಟ್ಟರು. ಮಕ್ಕಳ ಕುತೂಹಲಕರವಾದ ಪ್ರಶ್ನೆಗಳಿಗೆ ಉತ್ತರವೊದಗಿಸಿ ಹೊಸ ಅರಿವಿನ ಶಿಕ್ಷಣಕ್ಕೆ ಪ್ರಯತ್ನಿಸಿದವರು ಯುವ ಶಿಕ್ಷಕ, ಕಲಾಪ್ರೇಮಿ ಅವಿನಾಶ್ ಕಾರಂತ್ ಪಾಡಿ. ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಸಹಕರಿಸಿದರು.