ಕಾರವಾರ: ಮೀನು ಸಂತಾನೋತ್ಪತ್ತಿ ಕಾರಣದಿಂದ ಜೂನ್-ಜುಲೈನಲ್ಲಿ ಮೀನು ಬೇಟೆಗೆ ವಿರಾಮದ ನಂತರ ನಿನ್ನೆಯಿಂದ ಸಮುದ್ರ ಮೀನುಗಾರಿಕೆ ಆರಂಭವಾಗಿದೆ. ಉತ್ತರ ಕನ್ನಡದ ಮೀನುಗಾರರು ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ಪ್ರಾರಂಭಮಾಡಿದ್ದಾರೆ.
ಸಮುದ್ರಕ್ಕೆ ಮೀನು ಬೇಟೆಗೆ ಇಳಿಯಲು ಹವಣಿಸುತ್ತಿರುವ ಮೀನುಗಾರರ ಉತ್ಸಾಹ ಇದೀಗ ಹೆಚ್ಚಿದೆ. ಟ್ರಾಲರ್‌ಗಳು ಸಮುದ್ರಕ್ಕೆ ನಿನ್ನೆಯಿಂದ ತೆರಳಿವೆ. ನಿರಾಶಾದಾಯಕವಲ್ಲದ ಮೀನು ಬೇಟೆಯೂ ಆಗಿದೆ. ಆದರೆ ಇಪ್ಪತ್ತು ನಾಟಿಕಲ್ ಮೈಲಿಗಿಂತ ದೂರ ಸಮುದ್ರತನಕ ಮಾತ್ರ ಮತ್ಸ್ಯ ಬೇಟೆ ಸಾಧ್ಯವಾಗಿದೆ.
ಆಳ ಸಮುದ್ರಕ್ಕೆ ತೆರಳುವ ಪರ್ಷಿಯನ್ ದೋಣಿಗಳು ಆಗಸ್ಟ್ 6ರ ನಂತರ ಕಡಲಿಗೆ ಇಳಿಯಲಿವೆ. ನಾವು ನಮ್ಮ ದೋಣಿಗಳನ್ನು ನಿರ್ವಹಣೆ ಮತ್ತು ದುರಸ್ತಿ ಮಾಡಲು ಜೂನ್-ಜುಲೈ ಅವಧಿಯನ್ನು ಬಳಸಿದೆವು. ಕಡಲ ಮಡಿಲ ಆಶೀರ್ವಾದವಿರಲೆಂದು ಹಲವಾರು ವಿಶೇಷ ಪೂಜೆಗಳನ್ನು ಮಾಡಿ, ಕಡಲಿಗೆ ಇಳಿಯುವ ಸಂಪ್ರದಾಯವಿದೆ. ಅದನ್ನು ಆ. 1ರಂದು ಪೂರೈಸಿದೆವು. ಮೀನುಗಾರಿಕೆಯ ಈ ಪುನರಾರಂಭವನ್ನು ನಾವು ಮೀನುಗಾರಿಕೆಯ ಹೊಸ ವರ್ಷವೆಂದು ಪರಿಗಣಿಸುತ್ತೇವೆ. ಏಕೆಂದರೆ ಈ ನಿಷೇಧವು ಮೀನುಗಳ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತದೆ. ಪ್ರತಿ ವರ್ಷದಂತೆ ಒಡಿಶಾ ಮತ್ತು ಇತರ ರಾಜ್ಯಗಳಿಂದ ನೂರಾರು ಕಾರ್ಮಿಕರು ಬಂದು ನಮ್ಮ ದೋಣಿಗಳಲ್ಲಿ ಕೆಲಸ ಮಾಡುತ್ತಾರೆ ಎಂದು ಗಣೇಶ್ ತಾಂಡೇಲ್ ವಿವರಿಸಿದರು.
ಜಿಲ್ಲೆಯಲ್ಲಿ 500 ಪರ್ಷಿಯನ್ ದೋಣಿಗಳು ಸೇರಿದಂತೆ, 1139 ಯಾಂತ್ರೀಕೃತ ದೋಣಿಗಳಿವೆ. ಮಳೆ ಇಳಿಮುಖವಾಗಿದ್ದು, ಸಮುದ್ರ ಶಾಂತ ಸ್ಥಿತಿಗೆ ಬರುತ್ತಿದೆ. ಸಮುದ್ರಕ್ಕೆ ಇಳಿಯುತ್ತಿರುವ ಮೀನುಗಾರರಲ್ಲಿ ಸಂಭ್ರಮ ಮನೆ ಮಾಡಿದೆ. 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 7.3 ಲಕ್ಷ ಟನ್ ಗಳಷ್ಟು ಮೀನಿನ ಉತ್ಪಾದನೆ ಆಗಿತ್ತು. ಈ ಒಟ್ಟು ಫಿಶ್ ಕ್ಯಾಚಿಂಗ್‌ನಲ್ಲಿ 1.31 ಲಕ್ಷ ಟನ್ ಉತ್ಪಾದನೆ ಉತ್ತರ ಕನ್ನಡದ ಕೊಡುಗೆಯಾಗಿದೆ ಎಂದು ಮೀನುಗಾರಿಕಾ ಉಪ ನಿರ್ದೇಶಕ ಪ್ರತೀಕ್ ಹೇಳಿದರು.
ಆಗಸ್ಟ್ ಮೊದಲ ವಾರದಲ್ಲಿ ಚಂಡಮಾರುತ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದು ಇತ್ತೀಚೆಗೆ ಪ್ರಾರಂಭವಾಗಿರುವ ಮೀನುಗಾರಿಕೆಯನ್ನು ಇನ್ನೂ ಸ್ವಲ್ಪ ಸಮಯದವರೆಗೆ ಮುಂದೂಡುವಂತೆ ಮಾಡಬಹುದು. ಆದಾಗ್ಯೂ, ಮೀನುಗಾರರು ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ.
ಅಂಥ ಚಂಡಮಾರುತವು ದೊಡ್ಡ ಪ್ರಮಾಣದಲ್ಲಿ ಮೀನು ಹಿಡಿಯಲು (ಫಿಶ್ ಕ್ಯಾಚಿಂಗ್‌ಗೆ ) ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಕಳೆದ ವರ್ಷ ಚಂಡಮಾರುತ ಬಂದಿತ್ತು. ಇದರ ಪರಿಣಾಮವಾಗಿ 2.5 ಲಕ್ಷ ಟನ್ ಮೀನು ಹೆಚ್ಚುವರಿಯಾಗಿ ಬಲೆಗೆ ಬಿದ್ದವು. ಈ ವರ್ಷವೂ ಅಂತಹ ಬೆಳವಣಿಗೆಗೆ ಕಾರಣವಾಗಬಹುದು ಎಂದು ಮಾರುತಿ ತಾಂಡೇಲ್ ಹೇಳಿದರು. ಮೀನುಗಾರಿಕೆ ಉತ್ತರ ಕನ್ನಡದಲ್ಲಿ ಆರಂಭವಾಗಿದ್ದು, ನಿಧಾನಕ್ಕೆ ಮೀನು ಉದ್ಯಮ ಚೇತರಿಸಿಕೊಳ್ಳತೊಡಗಿದೆ.
ಮೀನುಗಾರಿಕೆಯ ಎರಡನೇ ದಿನ ನಿರಾಶೆಯಂತೂ ಆಗಿಲ್ಲ.
2022-23ನೇ ಸಾಲಿನಲ್ಲಿ ರಾಜ್ಯದಲ್ಲಿ 7.3 ಲಕ್ಷ ಟನ್‌ಗಳಷ್ಟು ಮೀನಿನ ಉತ್ಪಾದನೆ ಆಗಿತ್ತು. ಈ ಒಟ್ಟು ಫಿಶ್ ಕ್ಯಾಚಿಂಗ್‌ನಲ್ಲಿ
1.31 ಲಕ್ಷ ಟನ್ ಉತ್ಪಾದನೆ ಉತ್ತರ ಕನ್ನಡದ ಕೊಡುಗೆಯಾಗಿದೆ.
ಪ್ರತೀಕ್, ಮೀನುಗಾರಿಕಾ ಉಪ ನಿರ್ದೇಶಕ, ಕಾರವಾರ