Advertisement
ಕೇಂದ್ರದ ಅಬಕಾರಿ ಸುಂಕ, ರಾಜ್ಯಗಳ ವ್ಯಾಟ್ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ವಿಧಿಸಿದರೆ, ರಾಜ್ಯ ಸರಕಾರಗಳು ವ್ಯಾಟ್ ವಿಧಿಸುತ್ತವೆ. ಇವೆರಡು ಸರಕಾರಗಳಿಗೆ ಆದಾಯವನ್ನು ತಂದುಕೊಡುವ ಕ್ಷೇತ್ರಗಳಾಗಿವೆ. ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗುತ್ತಿರುವ ಸಂದರ್ಭದಲ್ಲೇ ಅವುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ತಜ್ಞರು ಸರಕಾರಕ್ಕೆ ಸಲಹೆ ನೀಡಿದ್ದರು. ಕೆಲವು ದಿನಗಳ ಹಿಂದೆ ಬಿಜೆಪಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ ಅವರು ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ 93 ರೂ., ರಾವಣನ ಲಂಕಾದಲ್ಲಿ 51 ರೂ. ಮತ್ತು ಸೀತೆಯ ತವರು ನೇಪಾಲದಲ್ಲಿ 53ರೂ. ಎಂದು ಹೇಳಿ ಸರಕಾರದ ಕಾಲೆಳೆದಿದ್ದರು.
ಪೆಟ್ರೋಲಿಯಂ ಉತ್ಪನ್ನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಹ್ಮಣ್ಯಂ ಹಾಗೂ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಎರಡು ಪಟ್ಟು ತೆರಿಗೆ ವಿಧಿಸಲಾಗಿದೆ. ಕೇಂದ್ರ ಸರಕಾರ ಕಳೆದ 12 ತಿಂಗಳಲ್ಲಿ ಎರಡು ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಕೋವಿಡ್ ಸೋಂಕು ದೇಶದಲ್ಲಿ ವ್ಯಾಪಿಸುತ್ತಿರುವಾಗಲೇ ಸರಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಕುಸಿದ ಬೇಡಿಕೆಯನ್ನು ಹೊಂದಿಸಲು ಈ ನಡೆ ಎಂದು ಸಮಜಾಯಿಷಿ ನೀಡಿತ್ತು. ಆದರೆ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾ ದಾಗ ಸರಕಾರ ಸುಂಕ ಕಡಿತ ಮಾಡಿರಲಿಲ್ಲ. ಯಾವಾಗ ಜಾರಿ?
ಮಾರ್ಚ್ 15ರೊಳಗೆ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಸರಕಾರದ ಮೂಲಗಳ ಪ್ರಕಾರ, ಶೀಘ್ರದಲ್ಲೇ ಇದನ್ನು ನಿರ್ಧರಿಸಲಾಗುತ್ತದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರಸ್ತುತ ಸರಾಸರಿ 92 ಮತ್ತು 86 ರೂ. ಇದೆ. ಇನ್ನೂ ಕೆಲವು ನಗರಗಳಲ್ಲಿ ಪೆಟ್ರೋಲ್ 100 ರೂಪಾಯಿಗಳನ್ನು ಮೀರಿದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರದ ಮೇಲೆ ಒತ್ತಡಗಳೂ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಬಕಾರಿ ಸುಂಕವನ್ನು ಕಡಿಮೆ ಮಾಡಲು ಸರಕಾರ ಮುಂದಾಗಿದೆ.
Related Articles
ದೇಶದಲ್ಲಿ ಮಾರಾಟವಾಗುವ ಒಟ್ಟು ಇಂಧನ ದಲ್ಲಿ ಶೇ. 90ರಷ್ಟು ಪ್ರಮಾಣ ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ನದ್ದಾಗಿದೆ. ವಿಶ್ವದ ಮೂರನೇ ಅತೀ ದೊಡ್ಡ ತೈಲ ಆಮದು ದೇಶವಾಗಿರುವ ಭಾರತದಲ್ಲಿ ತೈಲ ನಿಗಮಗಳ ಸೇವಾ ಕೇಂದ್ರಗಳ ಸಂಖ್ಯೆ ಜನವರಿಯಲ್ಲಿ ಶೇ. 26.8ರಷ್ಟು ಹೆಚ್ಚಳವಾಗಿದೆ.
Advertisement
ನಗರದಿಂದ ನಗರಕ್ಕೆ ಬೆಲೆ ಏಕೆ ಬದಲಾಗುತ್ತದೆ?ಪೆಟ್ರೋಲ…-ಡೀಸೆಲ್ ಪೆಟ್ರೋಲ್ ಪಂಪ್ ಅನ್ನು ತಲುಪಿದಾಗ, ತೈಲ ಡಿಪೋದಿಂದ ಪೆಟ್ರೋಲ್ ಪಂಪ್ ಎಷ್ಟು ದೂರದಲ್ಲಿದೆ ಎಂಬುದನ್ನು ಆಧರಿಸಿ ಬೆಲೆಯನ್ನು ನಿಗದಿಗೊಳಿಸಲಾಗುತ್ತದೆ. ಈ ಕಾರಣದಿಂದಾಗಿ ತೈಲ ಸಾಗಣೆ ವೆಚ್ಚ ಹೆಚ್ಚಿದಂತೆ ತೈಲ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಡೀಸೆಲ್ ಬಳಕೆ ಹೆಚ್ಚು
ಡೀಸೆಲ್ ಭಾರತದಲ್ಲಿ ಹೆಚ್ಚು ಬಳಸುವ ಪೆಟ್ರೋಲಿಯಂ ಉತ್ಪನ್ನವಾಗಿದೆ. ಇದರ ಪ್ರಮಾಣ ಒಟ್ಟು ಇಂಧನ ಬಳಕೆಯ ಸುಮಾರು ಶೇ. 40ರಷ್ಟಿದೆ. ಸಾರಿಗೆಯ ಅನಂತರ ಡೀಸೆಲ್ ಅನ್ನು ಕೃಷಿ ಕ್ಷೇತ್ರದಲ್ಲಿ ಹೆಚ್ಚು ಬಳಸಲಾಗುತ್ತದೆ. ಕಳೆದ ಒಂದು ವರ್ಷದಲ್ಲಿ ಭಾರತ್ ಪೆಟ್ರೋಲಿಯಂ 2,212 ಮಳಿಗೆಗಳನ್ನು ತೆರೆದಿದ್ದು ಇವುಗಳಲ್ಲಿ ಮೂರನೇ ಎರಡರಷ್ಟು ಮಳಿಗೆಗಳು ಹಳ್ಳಿಯಲ್ಲಿವೆ. ತೆರಿಗೆ ಇಳಿಸಿದ 5 ರಾಜ್ಯಗಳು
ಇಲ್ಲಿಯ ವರೆಗೆ 5 ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿ ಸಿವೆ. ರಾಜಸ್ಥಾನ, ಪಶ್ಚಿಮ ಬಂಗಾಲ, ಅಸ್ಸಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್ ಸರಕಾರಗಳು ವ್ಯಾಟ್‌ನ್ನು ಕಡಿತಗೊಳಿಸುವ ಮೂಲಕ ತೈಲ ಗ್ರಾಹಕರ ಮೇಲಣ ಹೊರೆಯನ್ನು ಕೊಂಚ ಕಡಿಮೆ ಮಾಡಿವೆ. ತೈಲ ಕಂಪೆನಿಗಳ ಹಳ್ಳಿ ನಡಿಗೆ
ತೈಲ ಕಂಪೆನಿಗಳು ಪ್ರಸ್ತುತ ಹಳ್ಳಿಗಳತ್ತ ಹೆಚ್ಚು ಗಮನ ಹರಿಸುತ್ತಿವೆ. ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು ಕೋವಿಡ್‌ನಿಂದ ಕಡಿಮೆ ತೊಂದರೆ ಅನುಭವಿಸಿದ್ದವು. ವರ್ಕ್ ಫ್ರಮ್ ಹೋಂ ಸಹಿತ ಇತರ ಕಾರಣಗಳಿಂದ ಗ್ರಾಮೀಣ ಭಾಗದಲ್ಲಿ ಚಟುವಟಿಕೆಗಳು ಹೆಚ್ಚಾಗಿ, ಇಂಧನ ಬೇಡಿಕೆಯೂ ಹೆಚ್ಚಿದೆ. ಈ ನಿಟ್ಟಿನಲ್ಲಿ ತೈಲ ಕಂಪೆನಿಗಳು ಅಲ್ಲಿ ತೈಲ ಕೇಂದ್ರಗಳನ್ನು ತೆರೆಯುವ ಯೋಜನೆಗಳತ್ತ ಹೆಚ್ಚು ಗಮನ ಹರಿಸುತ್ತಿವೆ. ಭಾರತೀಯ ತೈಲ ನಿಗಮ ನಿಯಮಿತ(ಐಒಸಿಎಲ್)ಭಾರತ್ ಪೆಟ್ರೋಲಿಯಂ ನಿಗಮ ನಿಯಮಿತ (ಬಿಪಿಸಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ನಿಗಮ ನಿಯಮಿತ (ಎಚ್‌ಪಿಸಿಎಲ್) ಈ ವರ್ಷ ಗ್ರಾಮೀಣ ಪ್ರದೇಶಗಳಲ್ಲಿನ ಮಳಿಗೆಗಳನ್ನು ಹೆಚ್ಚಿಸಲು ಯೋಜಿಸಿದೆ. ಇವು ದೇಶದ ಮೂರು ದೊಡ್ಡ ತೈಲ ಕಂಪೆನಿಗಳಾಗಿವೆ. ಹಳ್ಳಿಗಳಿಂದ ಬೇಡಿಕೆ ಹೆಚ್ಚು!
ಮೊದಲ ಹಂತದ ನಗರಗಳಲ್ಲಿ ತೈಲೋತ್ಪನ್ನಗಳಿಗೆ ಬೇಡಿಕೆ ಸ್ಥಿರವಾಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬೇಡಿಕೆ ಹೆಚ್ಚಿದೆ. 1950ರಿಂದೀಚೆಗೆ ಉಂಟಾದ ಭೀಕರ ಆರ್ಥಿಕ ಹಿಂಜರಿತವನ್ನು ನಿವಾರಿಸುವ ಭರವಸೆಯೊಂದಿಗೆ ಭಾರತವು ಕೃಷಿ ಕ್ಷೇತ್ರವನ್ನು ಎದುರು ನೋಡುತ್ತಿದೆ. ಹೀಗಾಗಿ ಗ್ರಾಮಿಣ ಭಾಗಗಳಲ್ಲಿ ಹೆಚ್ಚು ಚಟುವಟಿಕೆಗಳು ನಡೆಯುತ್ತಲಿವೆ. ಗ್ರಾಮೀಣ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಟ್ರ್ಯಾಕ್ಟರ್‌ಗಳು ಮಾರಾಟವಾಗಿವೆ. ಈ ಎಲ್ಲ ಕಾರಣಗಳಿಂದಾಗಿ ಹಳ್ಳಿಗಳಲ್ಲಿ ತೈಲೋತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ.