Advertisement

Kejriwal ಮಧ್ಯಾಂತರ ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

02:46 PM Aug 14, 2024 | Team Udayavani |

ಹೊಸದಿಲ್ಲಿ: ಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಾಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಬುಧವಾರ(ಆಗಸ್ಟ್ 14) ನಿರಾಕರಿಸಿದೆ.

Advertisement

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ಸಿಬಿಐ ನಡೆಸಿದ ಬಂಧನವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಅವರು ಸಲ್ಲಿಸಿದ ಮನವಿಯ ಮೇರೆಗೆ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.

“ನಾವು ಯಾವುದೇ ಮಧ್ಯಾಂತರ ಜಾಮೀನು ನೀಡುತ್ತಿಲ್ಲ. ನಾವು ಸಿಬಿಐಗೆ ನೋಟಿಸ್ ಜಾರಿ ಮಾಡುತ್ತೇವೆ” ಎಂದು ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರಿಗೆ ಪೀಠ ಹೇಳಿ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿದೆ. ಕೇಜ್ರಿವಾಲ್ ಅವರ ಮನವಿಗೆ ಪ್ರತಿಕ್ರಿಯಿಸಲು ಕೇಂದ್ರಿಯ ತನಿಖಾ ಸಂಸ್ಥೆಗೆ(CBI) ಆಗಸ್ಟ್ 23 ರವರೆಗೆ ಸಮಯ ನೀಡಿದೆ.

ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 17 ತಿಂಗಳ ಜೈಲುವಾಸದ ನಂತರ ಜಾಮೀನು ಪಡೆದ ಕೆಲವು ದಿನಗಳ ನಂತರ ಸುಪ್ರೀಂ ಕೋರ್ಟ್‌ ನಿಂದ ಈ ಆದೇಶ ಹೊರಬಿದ್ದಿದೆ.

 ಸಿಸೋಡಿಯಾ ಪಾದಯಾತ್ರೆ ಮುಂದೂಡಿಕೆ

Advertisement

ಭದ್ರತಾ ಕಾರಣಗಳಿಂದಾಗಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಪೊಲೀಸರ ಸಲಹೆಯ ಮೇರೆಗೆ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರ ದೆಹಲಿಯ ವಿವಿಧ ಪ್ರದೇಶಗಳನ್ನು ಒಳಗೊಂಡ ‘ಪಾದಯಾತ್ರೆ’ಯನ್ನು ಆಮ್ ಆದ್ಮಿ ಪಕ್ಷ ಬುಧವಾರ ಆಗಸ್ಟ್ 16 ಕ್ಕೆ ಮುಂದೂಡಿದೆ.

ಎಎಪಿ ನಾಯಕ ಮತ್ತು ದೆಹಲಿ ಕ್ಯಾಬಿನೆಟ್ ಸಚಿವ ಸೌರಭ್ ಭಾರದ್ವಾಜ್ ಪತ್ರಿಕಾಗೋಷ್ಠಿಯಲ್ಲಿ ‘ಇಂದು(ಬುಧವಾರ) ಸಂಜೆ 5 ಗಂಟೆಗೆ ಆರಂಭವಾಗಬೇಕಿದ್ದ ಸಿಸೋಡಿಯಾ ಅವರ ಪಾದಯಾತ್ರೆ ದೆಹಲಿ ಪೊಲೀಸರ ಸಲಹೆ ಯ ಮೇರೆಗೆ ಆಗಸ್ಟ್ 16 ಕ್ಕೆ ಮುಂದೂಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಅವರ ಜನ್ಮದಿನವಾದ ಆಗಸ್ಟ್ 16 ರಿಂದ ಪಾದಯಾತ್ರೆ ಪ್ರಾರಂಭವಾಗುವುದು ಬಹುಶಃ “ಪ್ರಕೃತಿಯ” ಯೋಜನೆಯಾಗಿದೆ. ಏನು ನಡೆದರೂ ಒಳ್ಳೆಯದಕ್ಕಾಗಿ ನಡೆಯುತ್ತದೆ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next