Advertisement

Excise: ಕೇಜ್ರಿಯೇ ಸೂತ್ರಧಾರಿ, 100 ಕೋ.ರೂ.ಗೆ ಬೇಡಿಕೆ: ಇ.ಡಿ.

12:18 AM Mar 23, 2024 | Vishnudas Patil |

ಹೊಸದಿಲ್ಲಿ: “ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರೇ ಅಬಕಾರಿ ನೀತಿ ಹಗರಣದ ಪ್ರಮುಖ ಸಂಚುಕೋರ ಹಾಗೂ ಕಿಂಗ್‌ಪಿನ್‌. ಅವರು ಬರೋಬ್ಬರಿ 100 ಕೋಟಿ ರೂ.ಗಳಿಗೆ ಬೇಡಿಕೆ ಮಂಡಿಸಿದ್ದರು’.
ಇದು ದಿಲ್ಲಿಯ ನ್ಯಾಯಾಲಯದಲ್ಲಿ ಶುಕ್ರ ವಾರ ಸಿಎಂ ಅರವಿಂದ ಕೇಜ್ರಿವಾಲ್‌ ವಿರುದ್ಧ ಜಾರಿ ನಿರ್ದೇಶ ನಾಲಯ (ಇ.ಡಿ.) ಮಾಡಿರುವ ಗಂಭೀರ ಆರೋಪ.

Advertisement

ಗುರುವಾರ ರಾತ್ರಿ ಕೇಜ್ರಿವಾಲ್‌ ಅವರನ್ನು ಬಂಧಿಸಿದ್ದ ಇ.ಡಿ.ಶುಕ್ರವಾರ ಅವರನ್ನು ದಿಲ್ಲಿಯ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ, 10 ದಿನಗಳ ಕಾಲ ತನ್ನ ವಶಕ್ಕೆ ನೀಡುವಂತೆ ಮನವಿ ಮಾಡಿತು. ಈ ವೇಳೆ ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು, 2021-22ರ ದಿಲ್ಲಿ ಅಬಕಾರಿ ನೀತಿ ಜಾರಿಗಾಗಿ ಕೇಜ್ರಿವಾಲ್‌ ಅವರು “ದಕ್ಷಿಣ ಸಮೂಹ’ದಿಂದ (ಸೌತ್‌ ಗ್ರೂಪ್‌) ನೂರಾರು ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಈ ಸಮೂಹದ ಆರೋಪಿಯಿಂದ 100 ಕೋಟಿ ರೂ.ಗಳಿಗೆ ಅವರು ಬೇಡಿಕೆ ಮಂಡಿಸಿದ್ದರು. ಅಷ್ಟೇ ಅಲ್ಲ, ಲಂಚ ನೀಡಿದವರು 600 ಕೋಟಿ ರೂ.ಗೂ ಹೆಚ್ಚು ಲಾಭ ಮಾಡಿಕೊಂಡಿದ್ದಾರೆ. ಕೇಜ್ರಿವಾಲ್‌ ಅವರು ಸೌತ್‌ ಗ್ರೂಪ್‌ ಮತ್ತು ಈ ಪ್ರಕರಣದ ಇತರ ಆರೋಪಿಗಳಾದ ಮನೀಶ್‌ ಸಿಸೋಡಿಯಾ, ಆಪ್‌ ಪದಾಧಿಕಾರಿ ವಿಜಯ್‌ ನಾಯರ್‌ ನಡುವೆ ದಲ್ಲಾಳಿ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಕಿಕ್‌ಬ್ಯಾಕ್‌ ಆಗಿ ಪಡೆದ 45 ಕೋಟಿ ರೂ.ಗಳನ್ನು ಆಮ್‌ ಆದ್ಮಿ ಪಕ್ಷವು ಗೋವಾ ಮತ್ತು ಪಂಜಾಬ್‌ ವಿಧಾನಸಭೆ ಚುನಾವಣೆಗೆ ಬಳಸಿಕೊಂಡಿದೆ. ಹವಾಲಾ ಮೂಲಕ ಈ ಹಣ ರವಾನೆಯಾಗಿತ್ತು ಎಂದು ಇ.ಡಿ. ಪರ ವಕೀಲರು ಹೇಳಿದರು.

ಕೇಜ್ರಿ ಬಂಧನದ ಅಗತ್ಯ ಇರಲಿಲ್ಲ: ಸಿಂಘ್ವಿ
ಕೇಜ್ರಿವಾಲ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ , ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ದಲ್ಲಿರುವ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸ ಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಇ.ಡಿ.ಗೆ ಬಂಧಿಸುವ ಅಧಿಕಾರ ಇದೆ ಎನ್ನುವುದು ಬಂಧಿಸಲೇ ಬೇಕಾದ ಅಗತ್ಯ ಆಗಬಾರದು. ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನು ಬಂಧಿಸುವ ಅಗತ್ಯವೇ ಇರಲಿಲ್ಲ. ಹಣ ದೊರಕಿದ್ದೇ ಬಂಧನಕ್ಕೆ ಆಧಾರವಾಗಬಾರದು. ಅದು ವಿಚಾರಣೆಗೆ ಕಾರಣವಾಗಬಹುದು ಅಷ್ಟೆ ಎಂದರು.

ಈ ಪ್ರಕರಣದಲ್ಲಿ ಹೊಸ ಮಾದರಿ ಕಂಡುಬಂದಿದೆ. ಮೊದಲ ಅಥವಾ ಎರಡನೇ ಹೇಳಿಕೆಯಲ್ಲಿ ಸಾಕ್ಷಿಗಳು ಅರವಿಂದ್‌ ಕೇಜ್ರಿವಾಲ್‌ ಹೆಸರು ಹೇಳುವುದಿಲ್ಲ. ನೀವು (ಇ.ಡಿ.) ಆ ಸಾಕ್ಷಿಯನ್ನು ಬಂಧಿಸುತ್ತೀರಿ. ಜಾಮೀನು ನಿರಾಕರಿಸುತ್ತೀರಿ. ಕೂಡಲೇ ಸಾಕ್ಷಿಗಳು ಮಾಫಿ ಸಾಕ್ಷಿ ಆಗಿ ಬದಲಾಗುತ್ತಾರೆ. ಬಳಿಕ ಕೇಜ್ರಿವಾಲ್‌ ವಿರುದ್ಧ ಹೇಳಿಕೆ ನೀಡುತ್ತಾರೆ ಎಂದು ವಾದಿಸಿದ ಸಿಂಘ್ವಿ , ಕೇಜ್ರಿವಾಲ್‌ ಈ ಪ್ರಕರಣದಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂಬುದನ್ನು ಇ.ಡಿ. ನಿರೂಪಿಸಲಿ. ಕೇಜ್ರಿವಾಲ್‌ ವಿರುದ್ಧ ಹೇಳಿಕೆಗಳನ್ನು ಹೊರತುಪಡಿಸಿ ನೇರವಾದ ಯಾವುದೇ ಸಾಕ್ಷ್ಯಗಳಿಲ್ಲ ಎಂದರು.

Advertisement

ಕೇಜ್ರಿವಾಲ್‌ ಅವರನ್ನು ತನ್ನ ವಶಕ್ಕೆ ನೀಡುವ ಇ.ಡಿ.ಯ ಬೇಡಿಕೆಯನ್ನು ಎಂದಿನ ಪ್ರಕ್ರಿಯೆ ಎಂಬಂತೆ ನೋಡಬೇಡಿ. ಈ ಪ್ರಕರಣದಲ್ಲಿ ಪ್ರಜಾಪ್ರಭುತ್ವದ ಮುಖ್ಯ ವಿಷಯಗಳು ಅಡಗಿವೆ ಎಂದು ನ್ಯಾಯಾಲಯವನ್ನು ಕೇಳಿಕೊಂಡರು. ಇ.ಡಿ.ಯೇ ನ್ಯಾಯಮೂರ್ತಿ, ಜ್ಯೂರಿ ಮತ್ತು ಶಿಕ್ಷೆ ನೀಡುವ ಅಧಿಕಾರಿಯಂತೆ ವರ್ತಿಸುತ್ತಿದೆ ಎಂದು ಕೇಜ್ರಿವಾಲ್‌ ಪರವಾಗಿ ವಾದ ಮಂಡಿಸಿದ ಮತ್ತೂಬ್ಬ ವಕೀಲ ವಿಕ್ರಮ್‌ ಚೌಧರಿ ಆರೋಪಿಸಿದರು.

ಯಾವುದಿದು ಸೌತ್‌ ಗ್ರೂಪ್‌? 
ಅಬಕಾರಿ ನೀತಿ ಹಗರಣ ವಿಚಾರಣೆ ವೇಳೆ ಇ.ಡಿ.ಯು ಸೌತ್‌ ಗ್ರೂಪ್‌ (ದಕ್ಷಿಣ ಸಮೂಹ) ಎಂದು ಉಲ್ಲೇಖೀಸಿದೆ. ವೈಎಸ್‌ಆರ್‌ಸಿಪಿ ಸಂಸದ ಮಗುಂತಾ ಶ್ರೀನಿವಾಸಲು ರೆಡ್ಡಿ, ಅವರ ಪುತ್ರ ಮಗುಂತಾ ರಾಘವ್‌ ರೆಡ್ಡಿ, ಬಿಆರ್‌ಎಸ್‌ ಎಂಎಲ್‌ಸಿ ಕೆ. ಕವಿತಾ, ಉದ್ಯಮಿ ರಾಮಚಂದ್ರ ಪಿಳ್ಳೆ„, ಹೈದರಾಬಾದಿನ ಉದ್ಯಮಿ ಅಭಿಷೇಕ್‌ ಬೋಯಿನಪಳ್ಳಿ, ಲೆಕ್ಕ ಪರಿಶೋಧಕ ಬುಚ್ಚಿಬಾಬು ಗೋರಂಟ್ಲಾ, ಪ್ರಮುಖ ಫಾರ್ಮಾ ಕಂಪೆನಿಯ ನಿರ್ದೇಶಕ ಪಿ. ಶರತ್‌ ಚಂದ್ರ ರೆಡ್ಡಿ ಅವರನ್ನು ಇ.ಡಿ. “ಸೌತ್‌ ಗ್ರೂಪ್‌’ ಎಂದು ಉಲ್ಲೇಖೀಸಿದೆ.

ಇ.ಡಿ. ಆರೋಪವೇನು?
ಕೇಜ್ರಿವಾಲ್‌ ಅವರೇ ದಿಲ್ಲಿ ಅಬಕಾರಿ ನೀತಿ ಹಗರಣದ ಪ್ರಮುಖ ಸೂತ್ರಧಾರ.
ಅಬಕಾರಿ ನೀತಿ ಜಾರಿ ಮಾಡಲು ಕೇಜ್ರಿ 100 ಕೋ.ರೂ. ಲಂಚ ಪಡೆದಿದ್ದಾರೆ.
ಲಂಚ ಕೊಟ್ಟ “ಸೌತ್‌ ಗ್ರೂಪ್‌’ 600 ಕೋ.ರೂ.ಗೂ ಹೆಚ್ಚು ಲಾಭ ಮಾಡಿಕೊಂಡಿದೆ.
ಕಿಕ್‌ಬ್ಯಾಕ್‌ ಪೈಕಿ 45 ಕೋಟಿ ರೂ.ಗಳನ್ನು ಆಪ್‌ ಪಂಜಾಬ್‌, ಗೋವಾ ಚುನಾವಣೆಗೆ ವೆಚ್ಚ ಮಾಡಿದೆ.
ಈ ಹಣವು 4 ಹವಾಲಾ ಮಾರ್ಗಗಳ ಮೂಲಕ ರವಾನೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next