ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು ತುಂಗಭದ್ರಾ ಡ್ಯಾಂಗೆ 60 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಈಗಾಗಲೇ ಡ್ಯಾಂ ಭರ್ತಿ ಆಗಿರುವುದರಿಂದ ಹರಿದು ಬರುತ್ತಿರುವ ನೀರಿನಲ್ಲಿ ಐವತ್ತು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ .ಇದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸಂಬಂಧಪಟ್ಟ ಗ್ರಾಪಂ ಗಳ ಮೂಲಕ ಡಂಗುರ ಸಾರಿಸಿ ಮುನ್ನೆಚ್ಚರಿಕೆ ನೀಡಿದೆ. ತಾಲ್ಲೂಕಿನ ಸಣಾಪುರ ವಿರುಪಾಪುರಗಡ್ಡೆ ಹನುಮನಹಳ್ಳಿ ಋಷಿಮುಖ ಪರ್ವತ, ನವವೃಂದಾವನ ಗಡ್ಡೆ ಸಂಪೂರ್ಣ ಜಲಾವೃತಗೊಂಡು ಸಂಪರ್ಕ ಕಡಿತವಾಗಿದೆ.
ನದಿಯಲ್ಲಿ ಹೆಚ್ಚುವರಿ ನೀರು ಹರಿಯುತ್ತಿರುವುದರಿಂದ ನದಿಯಲ್ಲಿ ಬೋಟಿಂಗ್ ಸೇರಿದಂತೆ ಹರಿಗೋಲು ಹಾಕುವುದನ್ನು ಜಿಲ್ಲಾಡಳಿತ ನಿಷೇಧ ಮಾಡಿದ್ದರೂ ಆನೆಗುಂದಿಯ ನವವೃಂದಾವನ ಗಡ್ಡೆಗೆ ಶನಿವಾರ ಬೆಳಿಗ್ಗೆ ಭಕ್ತರು ಮತ್ತು ಕೆಲವು ಅರ್ಚಕರನ್ನ ಸಾಗಿಸಲು ಬೋಟನ್ನು ಹರಿಯುವ ನದಿಯಲ್ಲಿಯೇ ಬಳಸಲಾಗಿದೆ .ಇದರಿಂದ ಬೋಟ್ ನಲ್ಲಿ ತೆರಳುವ ಪ್ರಯಾಣಿಕರಿಗೆ ಜೀವ ಅಪಾಯವಾಗುವ ಕುರಿತು ಗ್ರಾಮ ಪಂಚಾಯತ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಶುಕ್ರವಾರವೇ ಬೋಟ್ ಹಾಕುವ ಗುತ್ತಿಗೆದಾರರಿಗೆ ಮುನ್ನೆಚ್ಚರಿಕೆ ನೀಡಿ ಬೋಟನ್ನು ಹಾಕದಂತೆ ಎಚ್ಚರಿಕೆ ನೀಡಿದ್ದರೂ ಶನಿವಾರ ಬೆಳಿಗ್ಗೆ ಕೆಲವರ ಒತ್ತಡದಿಂದ ಸುಮಾರು ಇಪ್ಪತ್ತು ಜನರನ್ನು ಬೋಟ್ ನಲ್ಲಿ ಕುಳ್ಳಿರಿಸಿಕೊಂಡು ಹರಿಯುತ್ತಿರುವ ನದಿಯಲ್ಲಿಯೇ ನವವೃಂದಾವನ ಗಡ್ಡೆಗೆ ಹೋಗಿದ್ದಾರೆ .
ಈ ಮಧ್ಯೆ ಆನೆಗೊಂದಿ ಗ್ರಾ ಪಂ ಪಿಡಿಒ ಕೃಷ್ಣಪ್ಪ ಉದಯವಾಣಿ ಜತೆ ಮಾತನಾಡಿ ಮುನ್ನೆಚ್ಚರಿಕೆ ನೀಡಿದ್ದರೂ ಸಹ ಬೋಟ್ ನಡೆಸುವ ಗುತ್ತಿಗೆದಾರ ಸೂಚನೆ ಮೀರಿ ಭಕ್ತರು ಹಾಗೂ ಅರ್ಚಕರನ್ನ ನವವೃಂದಾವನ ಗೆ ಕರೆದುಕೊಂಡು ಹೋಗಿದ್ದಾರೆ ಇದರಿಂದ ಅಪಾಯವಾಗುವ ಸಾಧ್ಯತೆ ಇರುವುದರಿಂದ ಗುತ್ತಿಗೆದಾರನಿಗೆ ಎಚ್ಚರಿಕೆ ನೋಟಿಸ್ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ .
ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್
ಈ ಮಧ್ಯೆ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಬೋಟಿಂಗ್ ಮೂಲಕ ನವವೃಂದಾವನ ಗಡ್ಡಿ ಗೆ ತೆರಳಿ ಅಲ್ಲಿ ಯತಿಗಳ ವೃಂದಾವನಕ್ಕೆ ಪೂಜೆ ಮತ್ತು ಭಜನೆ ಮಾಡುವ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಇದರಿಂದ ಹೆಚ್ಚಿನ ಭಕ್ತರು ನದಿ ಪಾತ್ರಕ್ಕೆ ಆಗಮಿಸಿ ತಮ್ಮನ್ನು ಸಹ ನವವೃಂದಾವನ ಗಡ್ಡೆಗೆ ಕರೆದುಕೊಂಡು ಹೋಗುವಂತೆ ಬೋಟ್ ಗುತ್ತಿಗೆದಾರ ಮತ್ತು ಗ್ರಾ.ಪಂ. ಅಧಿಕಾರಿಗಳಿಗೆ ಒತ್ತಡ ಹಾಕಿದ ಘಟನೆಯೂ ಜರುಗಿದೆ.