Advertisement

ಶಿಕ್ಷಣದಲ್ಲಿ ಶ್ರೇಷ್ಠ; ಸೌಲಭ್ಯಗಳು ಕನಿಷ್ಟ; ಐಟಿ-ಬಿಟಿ ತವರು ರುಕ್ಮಾಪುರ

05:15 PM Feb 18, 2021 | Team Udayavani |

ಯಾದಗಿರಿ: ಐಟಿ ಬಿಟಿ ಉದ್ಯೋಗಿಗಳ ತವರು, ಎ ಮತ್ತು ಬಿ ದರ್ಜೆಯ ಸಾಕಷ್ಟು ನೌಕರರನ್ನು ಸಮಾಜಕ್ಕೆ ನೀಡಿದ ಸುರಪುರ ತಾಲೂಕಿನ ಖಾನಾಪುರ ಎಸ್‌.ಎಚ್‌(ರುಕ್ಮಾಪುರ) ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಫೆ.20ಕ್ಕೆ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ನಿಗದಿಯಾಗಿದೆ. ಸಾಕಷ್ಟು ವಿದ್ಯಾವಂತರ ನೀಡಿ ರಾಜ್ಯಕ್ಕೆ ಹೆಸರುವಾಸಿಯಾಗಿರುವ ರುಕ್ಮಾಪುರ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಲ್ಲಿ ತೀರಾ ಹಿಂದುಳಿದಿದೆ.

Advertisement

ಇದು,ರುಕ್ಮಾಪುರದ ಸ್ಥಿತಿಗತಿ. ಇಲ್ಲಿ ಗ್ರಾಮಸ್ಥರು ತೀರಿಕೊಂಡರೆ ಹೆಣ ಹೂಳುವುದಕ್ಕೆ ಸಮರ್ಪಕ ಸ್ಮಶಾನ ವ್ಯವಸ್ಥೆಯಿಲ್ಲದೇ ರಸ್ತೆ ಬದಿಯೇ ಮಣ್ಣು ಮಾಡುವ ಅನಿವಾರ್ಯತೆ ಇದೆ. ಗ್ರಾಮದಲ್ಲಿ 1969ರಲ್ಲಿ ಹಾಕಿರುವ ವಿದ್ಯುತ್‌ ಕಂಬ ಮತ್ತು ತಂತಿ ಈವರೆಗೂ ಬದಲಾಗದಿರುವುದು ಇಲ್ಲಿನ ದುರಂತವೇ ಸರಿ. ಹಳೆಯ ತಂತಿಗಳಿರುವುದರಿಂದ ವಿದ್ಯುತ್‌ ಅವಘಡದಿಂದ ಪ್ರಾಣ ಹಾನಿಯಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.

ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪಡುವ ತೊಂದರೆಯೂ ತಪ್ಪುತ್ತಿಲ್ಲ. ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ಗ್ರಾಮೀಣ ವಿದ್ಯುತ್‌ ಸರಬರಾಜು ಸಂಪರ್ಕವಿದ್ದು, ನಗರದ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಇಲ್ಲಿನ ಜನರ ಸುಮಾರು ವರ್ಷಗಳ ಬೇಡಿಕೆ. ಇದರಿಂದಾಗಿ ಗ್ರಾಮಗಳಲ್ಲಿ ಅಸಮರ್ಪಕ ನೀರು ಪೂರೈಕೆಯಾಗುತ್ತಿದ್ದು ಇದಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯ.ಇನ್ನು ಶೌಚಾಲಯ ಅವ್ಯವಸ್ಥೆಯೂ ಸಾಕಷ್ಟಿದ್ದು ಈ ಗ್ರಾಮದಲ್ಲಿ ಚಿಕ್ಕ ಚಿಕ್ಕ ಮನೆಗಳಿರುವುದರಿಂದ ವೈಯಕ್ತಿಯ ಶೌಚಾಲಯಗಳ ನಿರ್ಮಾಣ ಕುಂಠಿತವಾಗಿದ್ದು, ಮಹಿಳೆಯ ಸಾಮೂಹಿಕ ಶೌಚಾಲಯದ ಬೇಡಿಕೆ ಹಲವು ವರ್ಷಗಳಿಂದಲೂ ಇದೆ.

ಅನಿವಾರ್ಯವಾಗಿ ಬಯಲಿಗೆ ತೆರಳಬೇಕಿದೆ. ಚಲ್ಲಾಪೂರ-ತಿಮ್ಮಾಪುರ ಪೆಟ್ರೋಲ್‌ ಪಂಪ್‌ ಮಾರ್ಗ ರಸ್ತೆ ಹದಗೆಟ್ಟು ಬೈಕ್‌ ಸವಾರರು ಸಂಚರಿಸಲು ತೊಂದರೆಯಾಗಿದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದೇ ಆರೋಗ್ಯ ಸೇವೆ ದೊರೆಯದಂತಾಗಿದೆ. ಯಮನೋರ (ಕೆ) ಗಿಂತ ಮುಂಚಿತವಾಗಿಯೇ ಆರೋಗ್ಯ ಕೇಂದ್ರ ಮಂಜೂರಾಗಿತ್ತು. ಆದರೆ ಏನಾಯಿತೋ ತಿಳಿದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಐಟಿ ಬಿಟಿ ಉದ್ಯೋಗಿಗಳ ತವರು: ರುಕ್ಮಾಪುರ ಗ್ರಾಮ ಐಟಿ ಬಿಟಿ ಉದ್ಯೋಗಿಗಳ ತವರು ಎಂದೇ ಕರೆಸಿಕೊಂಡಿದೆ. ಇಲ್ಲಿನ ಸುಮಾರು 200ರಷ್ಟು ಜನರು ಹಲವು ಎಂಎನ್‌ಸಿ, ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 50 ಜನ ವಿದೇಶಗಳಲ್ಲಿ ಉದ್ಯೋಗದಲ್ಲಿರುವುದು ಗ್ರಾಮದ ಕೀರ್ತಿ ಹೆಚ್ಚಿಸಿದೆ.
ಸುರಪುರ ತಾಲೂಕಿನಿಂದ 15 ಕಿ.ಮೀ ದೂರದಲ್ಲಿರುವ ಖಾನಾಪೂರ ಎಸ್‌.ಎಚ್‌. ಗ್ರಾಮ ಪಂಚಾಯತಿ ವ್ಯಾಪ್ತಿಗೆ ಖಾನಾಪೂರ ಎಸ್‌.ಎಚ್‌, ಕವಡಿಮಟ್ಟಿ, ಗುಡಿಹಾಳ (ಜೆ) ಹಾಗೂ ಶಬರಿಬಂಡಿ ಹಳ್ಳಿಗಳು ಗ್ರಾಪಂ ವ್ಯಾಪ್ತಿಗೆ ಬರುತ್ತವೆ. ಪ್ರಮುಖವಾಗಿ ನೇಕಾರಿಕೆ, ಕೃಷಿ, ಕುಂಬಾರರಿಗೆ ಇಲ್ಲಿನ ಜನರ ಕಸುಬಾಗಿದೆ.ಅಂದಾಜು 5 ಸಾವಿರದಷ್ಟು ಜನಸಂಖ್ಯೆ ಹೊಂದಿದೆ.

Advertisement

ಗ್ರಾಮದ ಒಳಿತಿಗಾಗಿ ಶ್ರಮಿಸುವ ಸಂಘ:
ಅತಿ ಹೆಚ್ಚು ವಿದ್ಯಾವಂತರನ್ನು ಹೊಂದಿರುವ ರುಕ್ಮಾಪುರ ಗ್ರಾಮದ ಸುಮಾರು 50 ಕುಟುಂಬಗಳು ಬೆಂಗಳೂರಿನಲ್ಲಿ ನೆಲೆಸಿದ್ದು, ಸದಾ ತಮ್ಮ ಗ್ರಾಮದ ಒಳಿತಿಗಾಗಿ ರುಕ್ಮಾಪುರ ಗ್ರಾಮ ನಿವಾಸಿಗಳ ಸಂಘವನ್ನು ಸ್ಥಾಪಿಸಿ ಶ್ರಮಿಸುತ್ತಿದ್ದಾರೆ. ನಿವೃತ್ತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಭಂಡಾರೆ ಸಂಘದ ಕಾರ್ಯಾಧ್ಯಕ್ಷರಾಗಿದ್ದು, ತಮ್ಮ ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಕಾಳಜಿ ವಹಿಸಿದ್ದಾರೆ.

ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಕಾಲುವೆ ನೀರು ಸಮರ್ಪಕವಾಗಿ ಹರಿಯದಿರುವುದು ರೈತರ ಕೃಷಿಗೆ ತೊಂದರೆಯಾಗಿದೆ. ಸ್ಮಶಾನಕ್ಕಾಗಿ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಸರಿಯಾದ ಸಂಪರ್ಕ ರಸ್ತೆಯಿಲ್ಲದೇ ರಸ್ತೆಗಳು ಹಾಳಾಗಿದೆ.ಸ್ವತ್ಛತೆಗೆ ಆದ್ಯತೆ ನೀಡಬೇಕು. ಈ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಧಿಕಾರಿಗಳು ಕ್ರಮ ವಹಿಸಬೇಕು.
ಚಂದ್ರಕಾಂತ ಭಂಡಾರೆ, ನಿವೃತ್ತ ಎಸ್‌ಪಿ.

ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಲವು ಬೇಡಿಕೆಗಳನ್ನು ಈಡೇರಿಸಲಾಗಿದೆ. ಸ್ಮಶಾನ ನಮ್ಮ ವ್ಯಾಪ್ತಿಗೆ ಬರಲ್ಲ. ಕಂದಾಯ ಇಲಾಖೆಯಿಂದ 2 ಎಕರೆ ಜಮೀನು ನೀಡಲಾಗಿದೆ ಎನ್ನುವ ಮಾಹಿತಿಯಿದೆ.
ದುರ್ಗಾಶ್ರೀ ಮಕಾಶಿ, ಪಿಡಿಒ,
ರುಕ್ಮಾಪುರ

Advertisement

Udayavani is now on Telegram. Click here to join our channel and stay updated with the latest news.

Next