ಚಿಂಚೋಳಿ: ರಾಜ್ಯದಲ್ಲಿ ಈಗಾಗಲೇ ಪರಿಶಿಷ್ಟ ಜಾತಿಯಲ್ಲಿ ಇರುವ ಬಂಜಾರಾ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಶ್ರೀ ರಾಮರಾವ್ ಮಹಾರಾಜರು ಹಾಗೂ ಆಲ್ ಇಂಡಿಯಾ ಬಂಜಾರಾ ಸಮಾಜದ ಅಧ್ಯಕ್ಷ ಮಹಾರಾಷ್ಟ್ರದ ಶಂಕರ ಪವಾರ ತಮ್ಮ ಕೈಯಿಂದಲೇ ಪ್ರಧಾನ ಮಂತ್ರಿಗಳಿಗೆ 2020ರ ಮೇ 3ರಂದು ಬರೆದಿರುವ ಪತ್ರಗಳನ್ನು ಕಾಂಗ್ರೆಸ್ ಮುಖಂಡ ಸುಭಾಷ ರಾಠೊಡ ಬಹಿರಂಗ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಸಂಸದ ಡಾ| ಉಮೇಶ ಜಾಧವ ಮಿತಿ ಮೀರಿ ಸುಳ್ಳು ಹೇಳುತ್ತಿದ್ದಾರೆ. ಸಮಾಜವನ್ನು ಎಸ್ ಟಿಗೆ ಸೇರಿಸಬೇಕು ಎನ್ನುವ ನಿಲುವು ಸಮಾಜ ವಿರೋಧಿಯಾಗಿದೆ ಎಂದರು. “ದೇಶಕೆ ಸಬೀ ಬಂಜಾರೆ (ಲಮಾಣಿ) ಸಮಾಜ ಕೋ ಏಕ್ ಸೂಚಿ ಆದಿವಾಸಿ(ಎಸ್‌ಟಿ) ದರ್ಜಾ ಪ್ರಾಪ್ತ ಹೋನಾ’ ಎನ್ನುವ ಬೇಡಿಕೆ ಈ ಪತ್ರಗಳಲ್ಲಿದೆ. ಈ ಕುರಿತು ಬಹಿರಂಗ ಪಡಿಸಿದರೂ ಅರ್ಥವಾಗದ ಹಾಗೆ ನಾಟಕ ಆಡುತ್ತಿದ್ದಾರೆ. ಈಗಾಗಲೇ ರಾಜ್ಯದ ಬಂಜಾರಾ ಸಮಾಜದವರು ತಮ್ಮನ್ನು ಎಸ್‌ಟಿಗೆ ಸೇರಿಸಬಾರದು ಎಂದು 7.50 ಲಕ್ಷ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದಾರೆ. ಕುಡಚಿ ಶಾಸಕ ಪಿ.ರಾಜೀವ ಅವರು ಸಂಸದ ಡಾ| ಉಮೇಶ ಜಾಧವ ಅವರು ಬಂಜಾರಾ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದರೆ ಅವರ ವಿರುದ್ಧ ಸಮಾಜದ ವತಿಯಿಂದ ನೋಟಿಸ್ ಜಾರಿ ಮಾಡಲಾಗುವುದು ಎಂದು ಈಗಾಗಲೇ ಎಚ್ಚರಿಸಿರುವುದನ್ನು ತಿಳಿಸಿದರು.
ಕಲಬುರಗಿ ಸಂಸದ ಡಾ| ಉಮೇಶ ಜಾಧವ ಕೇವಲ ಪ್ರಿಯಾಂಕ್ ಖರ್ಗೆ ಕುರಿತು ಸುಳ್ಳು ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಚಿಂಚೋಳಿ ಮತಕ್ಷೇತ್ರದ ಶಾಸಕರಾಗಿದ್ದಾಗ ಅವರು ತಾಲೂಕಿಗೆ ಮಾಡಿದ ಅಭಿವೃದ್ಧಿ ಸಾಧನೆ ಏನು ಎಂಬುದೇ ಗೊತ್ತಿಲ್ಲ. ಹಿರಿಯರಿಗೆ ಕಾಲು ಬಿದ್ದು ಆಶೀರ್ವಾದ ಪಡೆದುಕೊಳ್ಳುವುದು ಗೌರವದ ಲಕ್ಷಣ. ಅದು ಗುಲಾಮತನ ಲಕ್ಷಣ ಅಲ್ಲ. ಹಿರಿಯರಿಗೆ ಗೌರವ ನೀಡುವುದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದರು. ಕೇಂದ್ರ ಸರ್ಕಾರಿ ನೌಕರನಾಗಿ ಉತ್ತಮ ಸಾಧನೆ ಮಾಡಿದ್ದರಿಂದ ತಮ್ಮನ್ನು ಕಾಂಗ್ರೆಸ್ ಪಕ್ಷ ರಾಜಕೀಯಕ್ಕೆ ಕರೆತಂದಿದೆ. ತಾವು ಯಾರ ಕಾಲು ಬಿದ್ದಿಲ್ಲವೆಂದು ಹೇಳಿದ್ದಾರೆ. ಆತ್ಮ ಮುಟ್ಟಿಕೊಂಡು ಕೇಳಿಕೊಳ್ಳಿ. ನಂತರ ವ್ಯಕ್ತಿತ್ವ ತಿದ್ದುಪಡಿ ಮಾಡಿಕೊಂಡು ಇತರಿಗೆ ಮಾದರಿಯಾಗಿ ಎಂದು ಹೇಳಿದರು. ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಡಿಯಲ್ಲಿ ಕಲಬುರಗಿ ಸಂಸದರು ಚಿಂಚೋಳಿ ಶಾಸಕರಾಗಿದ್ದಾಗ ಕಳಪೆದರ್ಜೆ ಕಾಮಗಾರಿ ನಡೆದಿದೆ ಎಂದು ತನಿಖೆ ನಡೆಸಬೇಕೆಂದು ಪ್ರಿಯಾಂಕ್ ಖರ್ಗೆ ವಿಧಾನಸಭೆ ಅ ಧಿವೇಶನದಲ್ಲಿ ಚರ್ಚಿಸಿದ್ದಾರೆ.
ಶಾಸಕ ಡಾ| ಅವಿನಾಶ ಜಾಧವ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಆದರೆ ಇನ್ನುವರೆಗೆ ಯಾಕೆ ತನಿಖೆಯಾಗಿಲ್ಲ ಎಂದು ಪ್ರಶ್ನಿಸಿದರು. ಕಲಬುರಗಿ ಸಂಸದರು ತಮ್ಮ ಕ್ಷೇತ್ರದ ವ್ಯಾಪ್ತಿ ಬಿಟ್ಟು ಚಿಂಚೋಳಿ ಮತಕ್ಷೇತ್ರಕ್ಕೆ ಹೆಚ್ಚು ಭೇಟಿ ನೀಡುತ್ತಾರೆ ಯಾಕೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿಲ್ಲ. ಉಳಿದ ಮತಕ್ಷೇತ್ರಗಳಿಗೆ ಎಷ್ಟು ಸಲ ಸಂಸದರು ಭೇಟಿ ನೀಡಿದ್ದಾರೆ ಎಂದು ಅವರೇ ಉತ್ತರಿಸಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಪರವಾಗಿ ಗ್ರಾಪಂ ಸದಸ್ಯರು ಬೆಂಬಲ ನೀಡುತ್ತಿರುವುದರಿಂದ ಶಿವಾನಂದ ಪಾಟೀಲ ಮರತೂರ ಗೆಲುವು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭೀಮರಾವ್ ಟಿ.ಟಿ, ಬಸವರಾಜ ಮಲಿ, ಶರಣು ಪಾಟೀಲ ಮೋತಕಪಳ್ಳಿ, ಪುರಸಭೆ ಉಪಾಧ್ಯಕ್ಷ ಶಬ್ಬೀರ್ ಅಹೆಮದ್, ಗೋಪಾಲರಾವ್ ಕಟ್ಟಿಮನಿ, ಗಣಪತರಾವ್, ಖಲೀಲ ಪಟೇಲ್, ಬಸವರಾಜ ಕಡಬೂರ ಇದ್ದರು.