ಕಲಬುರಗಿ: ಉದ್ಯಾನ್ ಎಕ್ಸ್‌ಪ್ರೆಸ್ ಮತ್ತು ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲು ವಿಳಂಬ ದಿಂದಾಗಿ ಮಂಗಳವಾರ (ಡಿ.14) ಜಿಲ್ಲೆಯಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ನೇಮಕಾತಿ ಪರೀಕ್ಷೆ ತಪ್ಪಿಸಿಕೊಂಡಿದ್ದ ಅಭ್ಯರ್ಥಿಗಳಿಗೆ ಡಿ.29ರಂದು ಬೆಂಗಳೂರಿನಲ್ಲಿ ಮರು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ತಿಳಿಸಿದೆ.
ಜಿಲ್ಲೆಯಲ್ಲಿ 36 ಪರೀಕ್ಷಾ ಕೇಂದ್ರಗಳಲ್ಲಿ ಸಹಾಯಕ ಎಂಜಿನಿಯರ್ ನೇಮಕಾತಿ ಪರೀಕ್ಷೆ ನಡೆದಿತ್ತು. ಪರೀಕ್ಷೆಗಾಗಿ ಬೆಂಗಳೂರು ಮತ್ತು ಮೈಸೂರು ಭಾಗದ ಅಭ್ಯರ್ಥಿಗಳು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬರುತ್ತಿದ್ದರು.
ಆದರೆ, ರೈಲ್ವೆ ಮಾರ್ಗದ ಕಾಮಗಾರಿಯಿಂದಾಗಿ ಎರಡೂ ರೈಲುಗಳು ಕಲಬುರಗಿಗೆತಡವಾಗಿತಲುಪಿದ್ದವು.ಇದರಿಂದಾಗಿ ಬೆಳಗಿನ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಸಾಧ್ಯವಾಗಿರಲಿಲ್ಲ.
ಕೇವಲ ಮಧ್ಯಾಹ್ನದ ಪರೀಕ್ಷೆ ಮಾತ್ರ ಬರೆದಿದ್ದರು. ಹೀಗಾಗಿ ಎರಡೂ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಬಂದ ಅಭ್ಯರ್ಥಿಗಳಿಗೆ ಮಾತ್ರ ಡಿ.29ರಂದು ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಮುಂದಾಗಿದೆ. ಇದಕ್ಕಾಗಿ ಅಭ್ಯರ್ಥಿಗಳು ಮನವಿಪತ್ರ, ರೈಲ್ವೆ ಟಿಕೆಟ್ ಪ್ರತಿ ಹಾಗೂ ಪರೀಕೆಯ ಪ್ರವೇಶ ಪತ್ರ ಪ್ರತಿಯನ್ನು ಡಿ.22ರೊಳಗೆ ಆಯೋಗಕ್ಕೆ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸಬೇಕು ಅಥವಾ ಖುದ್ದಾಗಿ ನೀಡಬಹುದು, ಇಲ್ಲವೇ kpsc-ka@nic.in ಇ-ಮೇಲ್ ಮಾಡಬಹುದು ಎಂದು ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.