ದೇವನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರ ಬದಲಾವಣೆ ಮಾಡಿದ್ದಕ್ಕೆ ಜಿಲ್ಲಾ ಸಂಕೀರ್ಣ ಆವರಣದಲ್ಲಿ ವಿಶ್ವನಾಥಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಸಂಘ ಸಂಸ್ಥೆ ಗಳು, ಸ್ತ್ರೀಶಕ್ತಿ ಸಂಘಗಳು ಪ್ರತಿಭಟಿಸಿದವು.
ಗ್ರಾಮದಲ್ಲಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 18 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಯಾರ ಗಮನಕ್ಕೂ ತರದೇ ಖಾಸಗಿ ಶಾಲೆಗೆ ಬದಲಾಯಿಸಲಾಗಿದೆ. ಇದ ರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಕೂಡಲೇ ವಿಶ್ವನಾಥಪುರದಲ್ಲಿಯೇ ಪರೀಕ್ಷಾ ಕೇಂದ್ರ ಇರಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಗ್ರಾಮಸ್ಥ ವಸಂತ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿದ್ದಕ್ಕೆ ಸಾಕಷ್ಟು ಪ್ರತಿಭಟನೆ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ವಿಶ್ವನಾಥಪುರ ಹೊರವಲಯ ದಲ್ಲಿರುವ ಸರ್ಕಾರಿ ಶಾಲೆಯ ಸುತ್ತ ಮುತ್ತಲಿನ ನೂರಾರು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಅನುಕೂಲವಾಗಿತ್ತು ಎಂದು ಹೇಳಿದರು.
ಪೋಷಕ ಶಿವಕುಮಾರ್ ಮಾತನಾಡಿ, ಪರೀಕ್ಷಾ ಕೇಂದ್ರವನ್ನು ಎಲ್ಲಿಯೋ ಇರುವ ಆಲೂರು-ದುದ್ದನಹಳ್ಳಿಯ ಎಂವಿಎಂ ಖಾಸಗಿ ಶಾಲೆಗೆ ಸ್ಥಳಾಂತರ ಮಾಡಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಬಸ್ ಸೇರಿದಂತೆ ಮೂಲ ಸೌಲಭ್ಯಗಳಿಲ್ಲದ ಶಾಲೆಗೆ ಅಧಿಕಾರಿಗಳು ಆಸೆ ಆಕಾಂಕ್ಷೆಗಳಿಗೆ ಒಳಗಾಗಿ ಸರ್ಕಾರಿ ಶಾಲೆಯಲ್ಲಿದ್ದ ಪರೀಕ್ಷಾ ಕೇಂದ್ರವನ್ನು ಸ್ಥಳಾಂತರ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಗ್ರಾಪಂ ಅಧ್ಯಕ್ಷ ರಾಮೂರ್ತಿ, ವಿಎಸ್‌ಎಸ್‌ಎನ್ ಉಪಾಧ್ಯಕ್ಷ ನರಸಿಂಹರಾಜು, ವಿಶ್ವನಾಥಪುರ ಗ್ರಾಪಂ ಸದಸ್ಯ ನಾರಾಯಣಸ್ವಾಮಿ, ಎಸ್‌ಡಿಎಂಸಿ ಸದಸ್ಯರಾದ ರಾಮಮೂರ್ತಿ, ಎಸ್.ಬಿ.ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಪಿ.ಶಿವಣ್ಣ, ಹಾಲಿನ ಡೆ„ರಿ ಅಧ್ಯಕ್ಷ ಸುಬ್ರಮಣಿ, ಗ್ರಾಪಂ ಮಾಜಿ ಸದಸ್ಯ ರಾಮಾಂಜಿನಪ್ಪ, ಮೆಡಿಕಲ್ ಸ್ಟೋರ್ ವಸಂತ್‌ಕುಮಾರ್, ಹರೀಶ್ ಗೌಡ, ಮತ್ತಿತರರು ಇದ್ದರು.
ಮುಂದಿನ ಬಾರಿ ಬದಲಾವಣೆ: ಈ ಬಾರಿ ಪರೀಕ್ಷೆ ಆಲೂರು – ದುದ್ದನಹಳ್ಳಿ ಮಾರುತಿ ಶಾಲೆಯಲ್ಲಿಯೇ ನಡೆಯಲಿದೆ. ಕಾರಣ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗಳು ಮುದ್ರಣಗೊಂಡಿರುವುದರಿಂದ ಬದಲಾಯಿಸಲು ಆಗುವುದಿಲ್ಲ, ಮುಂದಿನ ವರ್ಷ ವಿಶ್ವನಾಥಪುರ ದಲ್ಲಿಯೇ ಪರೀಕ್ಷಾ ಕೇಂದ್ರ ಮುಂದುವರಿಸಲಾಗುವುದು.
ಶಿಕ್ಷಣ ಇಲಾಖೆಯ ಆಯುಕ್ತ ಜಾಫರ್ ಅವರೊಂದಿಗೆ ಮಾತನಾಡಿದ್ದೇನೆ. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಬಸ್ ಸೌಲಭ್ಯ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು.