ಬೆಂಗಳೂರು: ಯುಪಿಎಸ್‌ಸಿ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಸಂಪೂರ್ಣ ಕನ್ನಡ ಭಾಷೆ ಬಳಕೆಗೆ ಅವಕಾಶವಿದ್ದು, ಕನ್ನಡಿಗರು ಭಾಷೆಯ ಭಯ ಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳನ್ನು ಬರೆಯಲು ಮುಂದಾಗಬೇಕು ಎಂದು ಐಎಎಸ್ ಅಧಿಕಾರಿ ಕೆಂಪಹೊನ್ನಯ್ಯ ಹೇಳಿದ್ದಾರೆ.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪಣ್ಣೀದೊಡ್ಡಿ ಸಂಸ್ಕೃತಿ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ ಸಾಧನೆಯ ಸಂಭ್ರಮ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಸಂಪೂರ್ಣ ಕನ್ನಡದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡು 340ನೇ ರ್‍ಯಾಂಕ್ ಪಡೆದೆ. ನಂತರ ಸಂದರ್ಶನವನ್ನೂ ಕನ್ನಡದಲ್ಲಿಯೇ ನೀಡಿ ಇಂದು ಪಶ್ಚಿಮ ಬಂಗಾಳ ಕೇಡರ್‌ಗೆ ಐಎಎಸ್ ಅಧಿಕಾರಿಯಾಗಿ ಹೋಗುತ್ತಿದ್ದೇನೆ. ಹಾಗಾಗಿ ಭಾಷೆಯ ಭಯಬಿಟ್ಟು ಪರೀಕ್ಷೆ ತೆಗೆದುಕೊಳ್ಳಿ ಎಂದರು.
ಅಂಧತ್ವದಂತಹ ಸವಾಲನ್ನೇ ಮೆಟ್ಟಿನಿಂತ ಮೇಲೆ ಇತರೆ ಯಾವ ಸಮಸ್ಯೆಗಳೂ ನನ್ನ ಸಾಧನೆಗೆ ತೊಡಕಾಗಲಿಲ್ಲ. ಪತ್ನಿ ಅಚಿತ್ಯ, ಪ್ರತಿನಿತ್ಯ ವಿವಿಧ ಪುಸ್ತಕಗಳನ್ನು ಓದಿ ಧ್ವನಿ ಮುದ್ರಿಕೆ ಮಾಡಿಡುತ್ತಿದ್ದಳು. ಅದನ್ನು ಆಲಿಸಿ ಮನನ ಮಾಡಿಕೊಳ್ಳುತ್ತಿದ್ದೆ. ಜತೆಗೆ ಅಂತರ್ಜಾಲ ಹಾಗೂ ಟಿ.ವಿಗಳಿಂದ ಒಂದಿಷ್ಟು ಅಧ್ಯಯನ ನಡೆಸಿದೆ. ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗದೆ ಮನೆಯಲ್ಲಿಯೇ ಪ್ರತಿನಿತ್ಯ 12 ತಾಸು ಅಧ್ಯಯನ ಮಾಡಿದ್ದೆ ಎಂದು ಹೇಳಿದರು.
ಕಣ್ಣಿನ ದೃಷ್ಟಿಗಿಂತ ಸಾಮಾಜಿಕ ದೃಷ್ಟಿಕೋನ ಮುಖ್ಯ ಎಂದು ಸಮಾಜ ಸೇವೆಗೆ ಮುಂದಾಗಲು ಎರಡು ಬಾರಿ ಕೆಪಿಎಸ್‌ಸಿ ಪರೀಕ್ಷೆ ಬರೆದೆ. ಆದರೆ, ಇಲ್ಲಿನ ಅವ್ಯವಸ್ಥೆಯಿಂದ ಬೇಸರವಾಗಿ ವ್ಯಾಪ್ತಿ ವಿಸ್ತರಿಸಿಕೊಂಡು ಯುಪಿಎಸ್‌ಸಿ ಆಯ್ಕೆ ಮಾಡಿಕೊಂಡು ಯಶಸ್ಸು ಪಡೆದಿದ್ದೇನೆ. ಈಗಾಗಲೇ ಮಸೂರಿಯಲ್ಲಿ ತರಬೇತಿ ಮುಗಿದಿದ್ದು, ಮುಂದಿನ ವಾರ ಪಶ್ಚಿಮ ಬಂಗಾಳಕ್ಕೆದಲ್ಲಿ ಸೇವೆ ಸಲ್ಲಿಸಲು ತೆರೆಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಅನನ್ಯತೆ ಹಾಗೂ ಅಸ್ಮಿತೆ ಅಂಶಗಳೊಂದಿಗೆ ಸೇವೆ ಸಲ್ಲಿಸುತ್ತೇನೆ ಎಂದರು.
ಸಾಹಿತಿ ತಿಮ್ಮೇಶ್ ಮಾತನಾಡಿ, ಯಶಸ್ಸು ಹಾಗೂ ಸಾಧನೆ ಯಾರ ಮನೆಯ ಸ್ವತ್ತಲ್ಲ. ಕೆಂಪಹೊನ್ನಯ್ಯ ದೃಷ್ಟಿಹೀನರಾದರೂ ಐಎಎಸ್ ಉತ್ತಿರ್ಣರಾಗಿದ್ದು, ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಎದೆ ಗಾರಿಕೆ ಇದ್ದವನಿಗೆ ಗಧೆಯಾಕೆ ಎಂಬ ಮಾತಿನಂತೆ ಆತ್ಮವಿಶ್ವಾಸವಿದ್ದರೆ ಯಾವ ಸಾಧನೆಯೂ ಕಷ್ಟವಲ್ಲ ಎಂದರು.
ಕಾರ್ಯಕ್ರಮದಲ್ಲಿ ಅಂಧತ್ವ ಮೆಟ್ಟಿನಿಂತು ಐಎಎಸ್ ಮಾಡಿದ ಕೆಂಪಹೊನ್ನಯ್ಯ ಹಾಗೂ ಚಿಕ್ಕ ವಯಸ್ಸಿನಲ್ಲಿ ಐಪಿಎಸ್ ಪರೀಕ್ಷೆ ಉತ್ತೀರ್ಣರಾದ ಮಂಡ್ಯದ ಪೃಥ್ವಿ ಶಂಕರ್ ಅವರಿಗೆ ಸನ್ಮಾನಿಸಲಾಯಿತು. ಜಯನಗರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವಾಸುದೇವ್ ಬಿ.ಆರ್, ಪಣ್ಣೇದೊಡ್ಡಿ ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷ ಸಿಂಗ್ರೀಗೌಡ ಪಿ.ಕೆ, ಕಾರ್ಯದರ್ಶಿ ಪಣ್ಣೇದೊಡ್ಡಿ ಆನಂದ ಉಪಸ್ಥಿತರಿದ್ದರು.