Advertisement

ಗುಣಮಟ್ಟಕ್ಕೆ ಶಿಕ್ಷಕರಿಗೇ ಪರೀಕ್ಷೆ 

01:49 PM Jul 18, 2018 | Team Udayavani |

ಬೆಂಗಳೂರು: ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿನ ಶಿಕ್ಷಣದ ಗುಣಮಟ್ಟ ವೃದ್ಧಿಗಾಗಿ ಪಾಠ ಮಾಡುವ ಶಿಕ್ಷಕರನ್ನೇ ಪರೀಕ್ಷೆಗೊಳಪಡಿಸಲು ಪಾಲಿಕೆ ಚಿಂತನೆ ನಡೆಸಿದೆ. ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಒತ್ತು ನೀಡಿ, ಮೂಲಸೌಕರ್ಯ, ಮಾನವ ಸಂಪನ್ಮೂಲ ಕಲ್ಪಿಸಿದರೂ ಪಾಲಿಕೆ ಶಾಲಾ-ಕಾಲೇಜುಗಳು ಪ್ರತಿವರ್ಷ ಉತ್ತಮ ಫ‌ಲಿತಾಂಶ ಪಡೆಯುವಲ್ಲಿ ಹಿಂದೆ ಬಿದ್ದಿವೆ. ಆ ಹಿನ್ನೆಲೆಯಲ್ಲಿ ಪಠ್ಯಕ್ರಮದ ಕುರಿತು ಶಿಕ್ಷಕರು ಹೊಂದಿರುವ ಜ್ಞಾನದ ಕುರಿತು ತಿಳಿಯಲು ಪಠ್ಯಕ್ರಮ ಪರೀಕ್ಷೆ ನಡೆಸಲು ಮುಂದಾಗಿದೆ. 

Advertisement

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಪರಿಷತ್ತು (ಎನ್‌ ಸಿಇಆರ್‌ಟಿ) 2 ವರ್ಷಗಳ ಹಿಂದೆ ಪ್ರೌಢ ಹಾಗೂ ಕಾಲೇಜು ಶಿಕ್ಷಣದ ಪಠ್ಯಕ್ರಮ ಬದಲಿಸಿದೆ. ಆದರೆ, ಪಠ್ಯಕ್ರಮದ ಕುರಿತು ಶಿಕ್ಷಕರಿಗೆ ಮಾಹಿತಿ ನೀಡುವ ಅಥವಾ ತರಬೇತಿ ನೀಡುವ ಕೆಲಸವಾಗಿಲ್ಲ. ಹೀಗಾಗಿ ಪಠ್ಯಕ್ರಮ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗದ ಶಿಕ್ಷಕರು ತಮಗೆ ತಿಳಿದಷ್ಟು ವಿಷಯವನ್ನು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದಾರೆ. ಹೀಗಾಗಿಯೇ ಪಾಲಿಕೆಯ ಶಾಲೆಗಳಲ್ಲಿ ಫ‌ಲಿತಾಂಶ ಕಡಿಮೆಯಾಗುತ್ತಿದೆ ಎಂಬ ಅಂಶಗಳು ಬೆಳಕಿಗೆ ಬಂದಿವೆ.

ಶಿಕ್ಷಕರು ಎಡವುತ್ತಿರುವುದೆಲ್ಲಿ?: ಶಿಕ್ಷಣ ಸ್ಥಾಯಿ ಸಮಿತಿ ಹಾಗೂ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಗಳು ಪಾಲಿಕೆಯ ಶಾಲಾ-ಕಾಲೇಜುಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದಾಗ, ಆಂಗ್ಲ ಭಾಷಾ ಶಿಕ್ಷಕರಿಗೆ ಸಮರ್ಪಕವಾಗಿ ಆಂಗ್ಲ ಭಾಷೆ ಮಾತನಾಡಲಾಗದಿರುವುದು. ವ್ಯಾಕರಣ ಗೊತ್ತಿಲ್ಲದಿರುವುದು, ಗಣಿತ ಶಿಕ್ಷಕರಿಗೆ ನೂತನ ಪಠ್ಯಕ್ರಮ ಅರ್ಥವಾಗದಿರುವುದು, ಹೆಚ್ಚಿನ ಶಿಕ್ಷಕರು ಗೈಡ್‌ಗಳನ್ನು ಬಳಸಿ ಪಾಠ ಮಾಡುವುದು ತಿಳಿದುಬಂದಿತ್ತು. ಹೀಗಾಗಿ ಪಾಲಿಕೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಪಾಲಿಕೆಗೆ ಹಾಸನ ಮಾದರಿ: ನೂತನ ಪಠ್ಯಕ್ರಮ ಶಿಕ್ಷಕರಿಗೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಪಠ್ಯಕ್ರಮದ ಕುರಿತು ಶಿಕ್ಷಕರಿಗೆ ಪರೀಕ್ಷೆ ನಡೆಸುವುದಾಗಿ ಹಾಸನ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆಯ ಅಧಿಕಾರಿಗಳು ಅದೇ ಮಾದರಿಯಲ್ಲಿ ಪಾಲಿಕೆಯ ವ್ಯಾಪ್ತಿಯ ಶಿಕ್ಷಕರಿಗೂ ಪರೀಕ್ಷೆ ನಡೆಸಿ, ಆ ಮೂಲಕ ಶಾಲಾ-ಕಾಲೇಜುಗಳಲ್ಲಿ ಗುಣಮಟ್ಟ ಹೆಚ್ಚಿಸಲು ನಿರ್ಧರಿಸಿದ್ದಾರೆ.

ಶಿಕ್ಷಕರಿಗೆ ತಜ್ಞರಿಂದ ತರಬೇತಿ: ಪಾಲಿಕೆಯ ಕಾಯಂ ಹಾಗೂ ಗುತ್ತಿಗೆ ಶಿಕ್ಷಕರಿಗೆ ಪಠ್ಯಕ್ರಮದ ಕುರಿತಂತೆ ಪರೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದ ಶಿಕ್ಷಕರ ಹೆಸರನ್ನು ಎಲ್ಲಿಯೂ ಪ್ರಕಟಿಸುವುದಿಲ್ಲ. ಬದಲಿಗೆ ಅಂತಹ ಶಿಕ್ಷಕರಿಗೆ ತರಬೇತಿ ನೀಡಿ ಪಠ್ಯಕ್ರಮ ಅರ್ಥಮಾಡಿಸಲಾಗುತ್ತದೆ. ಇದರಿಂದ ಶಿಕ್ಷಕರೂ ಮಕ್ಕಳಿಗೆ ಉತ್ತಮವಾಗಿ ಬೋಧಿಸಲು ಸಾಧ್ಯವಾಗುತ್ತದೆ ಎಂಬುದು ಪಾಲಿಕೆಯ ಅಧಿಕಾರಿಗಳ ಅಭಿಪ್ರಾಯ. 

Advertisement

ನೂತನ ಪಠ್ಯಕ್ರಮ ಶಿಕ್ಷಕರಿಗೆ ಸಮರ್ಪಕವಾಗಿ ಅರ್ಥವಾಗಿದೆಯೇ ಎಂಬುದನ್ನು ತಿಳಿಯುವ ಉದ್ದೇಶದಿಂದ ಶಿಕ್ಷಕರಿಗೆ ಪಠ್ಯಕ್ರಮದ ಪರೀಕ್ಷೆ ನಡೆಸಲು ಉದ್ದೇಶಿಸಿದ್ದು, ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. 
 ●ಕೆ.ಆರ್‌.ಪಲ್ಲವಿ, ಪಾಲಿಕೆಯ ಹೆಚ್ಚುವರಿ
ಉಪ ಸಹಾಯಕ ಆಯುಕ್ತರು

●ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next