ಮಂಗಳೂರು: ದಕ್ಷಿಣ ರೈಲ್ವೇ ಮಹಾ ಪ್ರಬಂಧಕ ಕುಲ್‌ಶ್ರೇಷ್ಠ ಅವರು ಮಂಗಳವಾರ ಕಣ್ಣೂರಿನಿಂದ ಮಂಗಳೂರು ಸೆಂಟ್ರಲ್ ವರೆಗಿನ ಹಲವು ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಣ್ಣೂರಿನಲ್ಲಿ ನವೀಕರಿಸಲಾದ ನಿಲ್ದಾಣ ಕಟ್ಟಡ, ಹೊಸದಾಗಿ ಅಭಿವೃದ್ಧಿಗೊಂಡ ಪಾರ್ಕಿಂಗ್ ಸ್ಥಳ ಮೊದಲಾದವುಗಳನ್ನು ವೀಕ್ಷಿಸಿದರೆ, ಕಣ್ಣಪುರಂನಲ್ಲಿ ಲೆವೆಲ್ ಕ್ರಾಸಿಂಗ್, ರೈಲ್ವೇ ಯಾರ್ಡ್, ಪ್ಯಾನೆಲ್ ಮತ್ತು ರಿಲೇ
ರೂಮ್ ಹಾಗೂ ನೂತನ ಐಪಿ ಆಧಾರಿತ ಕೆಮರಾವನ್ನು ವೀಕ್ಷಿಸಿದರು. ಕಾಸರಗೋಡಿನಲ್ಲಿ ಟ್ರಾಕ್ ಮೆಷಿನ್ ಸ್ಟಾಫ್ ವಿಶ್ರಾಂತಿ ಗೃಹ ಹಾಗೂ ಉಪ್ಪಳದಲ್ಲಿ ಇಲೆಕ್ಟ್ರಿಕಲ್ ಸಬ್‌ಸ್ಟೇಷನ್ ಉದ್ಘಾಟಿಸಿದರು.
ಮಂಗಳೂರು ಸೆಂಟ್ರಲ್‌ನಲ್ಲಿ ಸ್ಟೇಷನ್‌ನ ನೈರ್ಮಲ್ಯ, ಪಾದಚಾರಿ ಮೇಲ್ಸೇತುವೆ ಕೆಲಸ, ಆರ್‌ಪಿಎಫ್ ಪೋಸ್ಟ್, ರನ್ನಿಂಗ್ ರೂಂ, ಸಿಬಂದಿ ನೋಂದಣಿ ಲಾಬಿಗಳನ್ನು ಪರಿಶೀಲಿಸಿದರು. ಅಧಿಕಾರಿಗಳ ನವೀಕೃತ ವಿಶ್ರಾಂತಿ ಗೃಹ ಮತ್ತು ಮಕ್ಕಳ ಉದ್ಯಾನವನ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಾಲಕ್ಕಾಡ್ ವಿಭಾಗೀಯ ಪ್ರಬಂಧಕ ಪ್ರತಾಪ್ ಸಿಂಗ್ ಶಮಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.