ನವದೆಹಲಿ: ಸ್ಥಳೀಯ ಗ್ರಾಮೀಣ ಬ್ಯಾಂಕ್ ಗಳ ನೇಮಕಾತಿ ಪರೀಕ್ಷೆಯನ್ನು ಇನ್ಮುಂದೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಕೇಂದ್ರ ಸರ್ಕಾರ ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಈ ಬಗ್ಗೆ ಲೋಕಸಭೆಗೆ ತಿಳಿಸಿದ್ದು, ಇದರಿಂದಾಗಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯಲು ಹೆಚ್ಚಿನ ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.
ಗ್ರಾಮೀಣ ಬ್ಯಾಂಕ್ ಗಳ ನೇಮಕಾತಿ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ಬರೆಯಲು ಅನುವು ಮಾಡಿಕೊಟ್ಟಿದ್ದಕ್ಕೆ, ನಮ್ಮ ಮನವಿಯಂತೆ ಬ್ಯಾಂಕ್ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟ ಕೇಂದ್ರದ ವಾಣಿಜ್ಯ ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದರಿಂದ ನಮ್ಮ ಗ್ರಾಮೀಣ ಪ್ರದೇಶದ ಯುವ ಸಮುದಾಯಕ್ಕೆ ಅತ್ಯಂತ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದ್ದಾರೆ.
ಬ್ಯಾಂಕ್ ಸಿಬ್ಬಂದಿ ನೇಮಕಾತಿ ನಡೆಸುವ ಪರೀಕ್ಷೆಯನ್ನು ಕನ್ನಡ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ಒಡಿಯ, ಉರ್ದು, ತೆಲುಗು, ಪಂಜಾಬಿ ಅಸ್ಸಾಮಿ, ಬೆಂಗಾಲಿ ಭಾಷೆಗಳಲ್ಲಿ ಬರೆಯಬಹುದಾಗಿದೆ.