ನವದೆಹಲಿ: ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್ ನ ಮಾಜಿ ಸಚಿವ ರಾಜೇಂದ್ರ ಬಹುಗುಣ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮೂರು ದಿನಗಳ ನಂತರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ (ಮೇ 27) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನದಿಯಲ್ಲಿ ಬಿಎಂಡಬ್ಲ್ಯೂ ಕಾರು ಮುಳುಗಿಸಿದ ಮಾಲೀಕ: ವಿಚಾರಣೆಯಲ್ಲಿ ಅಚ್ಚರಿ ಮಾಹಿತಿ ಬಯಲು
ಬಹುಗುಣ(59ವರ್ಷ) ಅವರು ತಮ್ಮ ಹಲ್ ಡ್ವಾನಿ ಪೊಲೀಸ್ ಠಾಣೆಯ ತುರ್ತು (112) ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ನಂತರ ಪೊಲೀಸರು ಮತ್ತು ನೆರೆಹೊರೆಯವರ ಸಮ್ಮುಖದಲ್ಲಿಯೇ ತನಗೆ ತಾನೇ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಸೊಸೆಯ ಆರೋಪದಿಂದ ಬಹುಗುಣ ಅವರು ತುಂಬಾ ಆಘಾತಕ್ಕೊಳಗಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ಭಟ್ ಎನ್ ಡಿಟಿವಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗುಂಡು ಹೊಡೆದುಕೊಳ್ಳದಂತೆ ಧ್ವನಿವರ್ಧಕದ ಮೂಲಕ ವಿನಂತಿಸಿಕೊಂಡಿದ್ದರು. ಆದರೆ ಟ್ಯಾಂಕ್ ಮೇಲೆ ನಿಂತಿದ್ದ ಬಹುಗುಣ ತಮ್ಮ ಎದೆಗೆ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಸೊಸೆ ನೀಡಿರುವ ದೂರಿನ ಆಧಾರದ ಮೇಲೆ ಬಹುಗುಣ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಕ್ರಮ ಸಂಬಂಧದ ವಿಚಾರದಲ್ಲಿ ಸೊಸೆ ಮತ್ತು ಪುತ್ರ ಅಜಯ್ ಬಹುಗುಣ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ವರದಿ ತಿಳಿಸಿದೆ.
ರಾಜೇಂದ್ರ ಬಹುಗುಣ 2004ರಲ್ಲಿ ಉತ್ತರಾಖಂಡ್ ನ ಎನ್ ಡಿ ತಿವಾರಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು ಎಂದು ವರದಿ ಹೇಳಿದೆ.