ಲಕ್ನೋ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರ್ಯಾಜುಯೇಟ್ ಇನ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:ಸೇನೆಯಿಂದ ನಿವೃತ್ತನಾಗಿ ಬಂದ ಯೋಧನಿಗೆ ಹುಟ್ಟೂರಲ್ಲಿ ಸನ್ಮಾನ
ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಸಿಂಗ್ ಅವರ ರಕ್ತದೊತ್ತಡ ಮತ್ತು ಹೃದಯ ಬಡಿತ ಸಹಜ ಸ್ಥಿತಿಯಲ್ಲಿತ್ತು. ಆದರೆ ಅವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಅವರ ಹಿಂದಿನ ಕಾಯಿಲೆಗಳನ್ನು ಗಮನದಲ್ಲಿಟ್ಟುಕೊಂಡು ಐಸಿಯುಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ರಾಜಸ್ಥಾನದ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸಿರುವ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಪರಿಶೀಲನೆಗಾಗಿ ನೆಫ್ರಾಲಜಿ, ಕಾರ್ಡಿಯಾಲಜಿ, ನ್ಯೂರಾಲಜಿ, ಎಂಡೋಕ್ರೈನಾಲಜಿ ವಿಭಾಗದ ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ವರದಿ ವಿವರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಲ್ಯಾಣ್ ಸಿಂಗ್ ಅವರ ಪುತ್ರ ರಾಜ್ ವೀರ್ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ತಂದೆಯವರ ಆರೋಗ್ಯದ ಬಗ್ಗೆ ವಿಚಾರಿಸಿರುವುದಾಗಿ ವರದಿ ಹೇಳಿದೆ. ಅಲ್ಲದೇ ಕಲ್ಯಾಣ್ ಸಿಂಗ್ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ ತಿಳಿಸಿರುವುದಾಗಿ ವರದಿ ತಿಳಿಸಿದೆ.