ತಿರುಪತಿ: ವೈಕುಂಠ ಏಕಾದಶಿ ಆಚರಣೆಯ ಟಿಕೆಟ್ ವಿತರಣೆ ಸಂದರ್ಭದಲ್ಲಿ ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿ ಭಕ್ತರು ಪ್ರಾಣ ಕಳೆದುಕೊಂಡಿರುವ ಬಗ್ಗೆ ,ಟಿಟಿಡಿ ಮಾಜಿ ಅಧ್ಯಕ್ಷರಾದ ಭೂಮನ ಕರುಣಾಕರ್ ರೆಡ್ಡಿ ಮತ್ತು ವಿ.ವೈ.ಸುಬ್ಬಾ ರೆಡ್ಡಿ ತೀವ್ರ ಆಕ್ರೋಶ ಹೊರ ಹಾಕಿದ್ದು, ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ತತ್ ಕ್ಷಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಟಿಟಿಡಿ ಆಡಳಿತವು ಈಗ ವೆಂಕಟೇಶ್ವರ ದೇವರ ಸೇವೆಗಿಂತ ರಾಜಕೀಯ ಅಜೆಂಡಾಗಳಿಗೆ ಆದ್ಯತೆ ನೀಡುತ್ತಿದೆ ಎಂದು ಭೂಮನ ಕರುಣಾಕರ್ ರೆಡ್ಡಿ ಆರೋಪಿಸಿದ್ದಾರೆ.
”ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ (ಎಇಒ) ವೆಂಕಯ್ಯ ಚೌಧರಿ, ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಅವರ ಅಧೀನ ಅಧಿಕಾರಿಗಳು ಮತ್ತು ಟಿಟಿಡಿಯ ವಿಜಿಲೆನ್ಸ್ ವಿಭಾಗ ಆರು ಜೀವಗಳ ನಷ್ಟಕ್ಕೆ, ಅವ್ಯವಸ್ಥೆಗೆ ಹೊಣೆಗಾರರು” ಎಂದು ಕಿಡಿ ಕಾರಿದ್ದಾರೆ.
“ಇದು ಸಮನ್ವಯದ ಕೊರತೆಯಲ್ಲ, ಆದರೆ ವ್ಯವಸ್ಥೆಯ ವೈಫಲ್ಯ ಈ ಘಟನೆಗೆ ಕಾರಣವಾಯಿತು. ಆಡಳಿತದಲ್ಲಿ ಸಾಕಷ್ಟು ಅಕ್ರಮಗಳಿವೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಟಿಟಿಡಿ ಮಾಜಿ ಅಧ್ಯಕ್ಷ ವಿ.ವೈ. ಸುಬ್ಬಾ ರೆಡ್ಡಿ ಪ್ರತಿಕ್ರಿಯಿಸಿ ” ಈ ದುರಂತವು ಆಡಳಿತದಲ್ಲಿ ಗೋಚರಿಸುವ ಲೋಪಗಳನ್ನು ಎತ್ತಿ ತೋರಿಸುತ್ತದೆ ಮತ್ತು ಇಂತಹ ನಿರ್ಲಕ್ಷ್ಯವು ಎಂದಿಗೂ ಪುನರಾವರ್ತನೆಯಾಗದಂತೆ ನಾವು ಖಚಿತಪಡಿಸಿಕೊಳ್ಳಬೇಕು” ಎಂದರು.
“ತಿರುಪತಿಗೆ ನಾಲ್ಕು ನೆರೆಯ ರಾಜ್ಯಗಳ ಭಕ್ತರು ಹೆಚ್ಚಾಗಿ ಆಗಮಿಸುತ್ತಾರೆ. ಕೌಂಟರ್ಗಳ ಸ್ಥಿತಿಯ ಬಗ್ಗೆ ಅವರಿಗೆ ಸ್ಪಷ್ಟವಾಗಿ ತಿಳಿಸಬೇಕು. ಹೀಗಾಗಿ ಯಾವ ಕೌಂಟರ್ ಬಂದ್ ಆಗಿದೆ, ಯಾವ ಕೌಂಟರ್ ತೆರೆದಿದೆ, ಯಾವ ಕೌಂಟರ್ ನಲ್ಲಿ ಜನ ಕಿಕ್ಕಿರಿದು ತುಂಬಿದ್ದಾರೆ ಎಂಬುದನ್ನು ಸರಿಯಾಗಿ ಪ್ರದರ್ಶಿಸಬೇಕು. ಹಿಂದೆ ಅಂತಹ ಮಾಹಿತಿಯನ್ನು ಪ್ರದರ್ಶಿಸಲಾಗಿತ್ತು. ಇದು ಭಕ್ತ ಸಂದಣಿಯನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯ ಮಾಡಿತ್ತು. ಇಂತಹ ಘಟನೆಗಳನ್ನು ತಡೆಯುತ್ತದೆ. ಈ ವರ್ಷ ಅವ್ಯವಸ್ಥೆ ಮತ್ತು ದುರುಪಯೋಗವನ್ನು ಹೆಚ್ಚಾಗಿರುವುದು ಕಾಲ್ತುಳಿತಕ್ಕೆ ಕಾರಣವಾಯಿತು” ಎಂದು ಹೇಳಿದ್ದಾರೆ.
ಇಬ್ಬರೂ ದುರಂತದ ನೈತಿಕ ಹೊಣೆಯನ್ನು ಚಂದ್ರಬಾಬು ನಾಯ್ಡು ಹೊರಬೇಕು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.