ಮುಂಬಯಿ: ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸ ಆ್ಯಂಟಿಲಿಯಾ ಸಮೀಪ ಸ್ಫೋಟಕ ತುಂಬಿದ ವಾಹನ ಪತ್ತೆಯಾದ ಪ್ರಕರಣ ಹಾಗೂ ಉದ್ಯಮಿ ಮನ್ ಸುಖ್ ಹಿರಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್ ಐಎ) ಗುರುವಾರ(ಜೂನ್ 17) ಮುಂಬಯಿಯ ಮಾಜಿ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅವರನ್ನು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಜೈಲಿನಲ್ಲಿರುವ ವಂಚಕ ಯುವರಾಜ ಸ್ವಾಮಿಯಿಂದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಗೆ ದೂರವಾಣಿ ಕರೆ?
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಇಂದು ಮುಂಜಾನೆ ಪ್ರದೀಪ್ ಶರ್ಮಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಸುಮಾರು ಆರು ಗಂಟೆಗಳ ಕಾಲ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿತ್ತು. ಈ ಬೆಳವಣಿಗೆ ನಂತರ ಶರ್ಮಾ ಅವರನ್ನು ಬಂಧಿಸಲಾಗಿದೆ ಎಂದು ವರದಿ ವಿವರಿಸಿದೆ.
ಮುಂಬಯಿಯ ಅಂಧೇರಿಯಲ್ಲಿರುವ ಪ್ರದೀಪ್ ಶರ್ಮಾ ಅವರ ನಿವಾಸಕ್ಕೆ ಇಂದು ಬೆಳಗ್ಗೆ ಎನ್ ಐಎ ತಂಡ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದು. ಮೂಲಗಳ ಪ್ರಕಾರ, ಈ ಸಂದರ್ಭದಲ್ಲಿ ಪ್ರದೀಪ್ ಶರ್ಮಾ ಅವರು ನಿವಾಸದಲ್ಲಿ ಇದ್ದಿರುವುದಾಗಿ ವರದಿ ತಿಳಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎನ್ ಐಎ ಅಧಿಕಾರಿಗಳು ಎರಡು ಬಾರಿ ಪ್ರದೀಪ್ ಶರ್ಮಾ ಅವರನ್ನು ವಿಚಾರಣೆಗೊಳಪಡಿಸಿತ್ತು. ಪ್ರದೀಪ್ ಶರ್ಮಾ ಮುಂಬಯಿನ ಮತ್ತೊಬ್ಬ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆಯ ಆಪ್ತ ಎಂದು ವರದಿಯಾಗಿತ್ತು.
ಎರಡು ಪ್ರಕರಣಗಳ ಮುಖ್ಯ ರೂವಾರಿ ಎನ್ನಲಾದ ಸಚಿನ್ ವಾಝೆಯನ್ನು ಎನ್ ಐಎ ಬಂಧಿಸಿತ್ತು. 1983ರಲ್ಲಿ ಪ್ರದೀಪ್ ಶರ್ಮಾ ಮುಂಬಯಿಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಮುಂಬಯಿ ಭೂಗತ ಜಗತ್ತಿನ ಸುಮಾರು 300 ಮಂದಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡುವ ಮೂಲಕ ಶರ್ಮಾ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದರು.