Advertisement

R. Ashok: ನೇರಾನೇರಾ ಪ್ರಶ್ನೆಗಳಿಗೆ ಮಾಜಿ ಸಚಿವ ಆರ್‌.ಅಶೋಕ್‌ ನೇರಾನೇರ ಉತ್ತರ

11:43 PM Oct 18, 2023 | Team Udayavani |

ಲೋಕ ಚುನಾವಣೆ ಬಳಿಕ ಸರಕಾರ ಉಳಿಯಲ್ಲನಮ್ಮ ವಿರುದ್ಧ ಶೇ.40 ರ ಭ್ರಷ್ಟಾಚಾರ ಆರೋಪ ಮಾಡಿ, ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌, ನಮ್ಮ ವಿರುದ್ಧದ ಆರೋಪಗಳಿಗೆ ಕೊನೆಗೂ ದಾಖಲೆ ಕೊಡಲಿಲ್ಲ. ಇವರ ಸರಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾಗಿಲ್ಲ. ಆರಂಭದಿಂದಲೂ ಭ್ರಷ್ಟಾಚಾರ, ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಇವರ ಬೋಗಸ್‌ ಗ್ಯಾರಂಟಿಗಳ ಬಂಡವಾಳ ಬಯಲಾಗಿದೆ. ಅಭಿವೃದ್ಧಿ ಸ್ಥಗಿತವಾಗಿದ್ದು, ದ್ವೇಷದ ರಾಜಕಾರಣ ಹೆಚ್ಚಾಗಿದೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ- ಜೆಡಿಎಸ್‌ ಅಭ್ಯರ್ಥಿಗಳು 28 ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ನರೇಂದ್ರ ಮೋದಿಯವರೇ ಪ್ರಧಾನಿಯಾಗಲಿದ್ದಾರೆ.  ಇವಿಷ್ಟೂ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಆರ್‌.ಅಶೋಕ್‌ ಅವರ ನುಡಿಗಳು. ಸರಕಾರದ ವಿರುದ್ಧ ವಾಗ್ಧಾಳಿ ನಡೆದಿದ್ದಾರಲ್ಲದೆ, ರಾಜ್ಯ ರಾಜಕಾರಣದಿಂದ ಹಿಡಿದು ರಾಷ್ಟ್ರ ರಾಜಕಾರಣದವರೆಗೆ ಮುಕ್ತವಾಗಿ ಮಾತನಾಡಿದ್ದಾರೆ.

Advertisement

 ಜೆಡಿಎಸ್‌ ಜತೆಗೆ ಮೈತ್ರಿ ಬಗ್ಗೆ  ಪಕ್ಷದೊಳಗೆ ಸಮಾಧಾನ ಇದ್ದ ಹಾಗಿಲ್ಲ ಅಲ್ಲವೇ?

ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು, ಮೋದಿ ಪ್ರಧಾನಿ ಆಗಬೇಕೆಂದು ಮೈತ್ರಿ ಮಾಡಿಕೊಂಡಿದ್ದೇವೆ. ಬೆರಳೆಣಿಕೆಯಷ್ಟು ವಿರೋಧವಿದೆ. ಅದು ಸಹಜ ಕೂಡ. ಕೇಂದ್ರದ ತೀರ್ಮಾನಕ್ಕೆ ನಮ್ಮೆಲ್ಲರ ಸಹಮತ ಇದೆ. ಒಕ್ಕಲಿಗ ನಾಯಕರಿಗೆ ಪೈಪೋಟಿ ಪ್ರಶ್ನೆಯೇ ಇಲ್ಲ. ಮೋದಿ ಪ್ರಧಾನಿ ಆಗಬೇಕು ಎನ್ನುವ ಸದುದ್ದೇಶವೊಂದೇ ಎರಡೂ ಪಕ್ಷಕ್ಕೆ ಮುಖ್ಯವಾಗಿದೆ. ಉಳಿದದ್ದೆಲ್ಲ ಗೌಣ.

 ಮೈತ್ರಿಯಿಂದ  ಬಿಜೆಪಿಯಲ್ಲಿನ ಒಕ್ಕಲಿಗ ನಾಯಕರಿಗೆ ಹಿನ್ನಡೆ ಆಗುತ್ತದೆ ಎಂಬ ಭಯ ಇದೆಯೇ ಕೆಲವರಿಗೆ?

ಬಿಜೆಪಿ ಒಕ್ಕಲಿಗ ನಾಯಕರಿಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಹಾಗೆ ನೋಡಿದರೆ ಈ ಮೈತ್ರಿಯಿಂದ ಒಕ್ಕಲಿಗ ಮತಗಳ ಧ್ರುವೀಕರಣ ಆಗಲಿದೆ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಮತ ಕೊಟ್ಟ ಅಲ್ಪಸಂಖ್ಯಾಕರಿಗೂ ಬೇಸರ ಬಂದಿದೆ. ಜೆಡಿಎಸ್‌ನಲ್ಲಿ ಇಬ್ರಾಹಿಂ ಯಾವ ಲೆಕ್ಕ. ಆಟಕ್ಕುಂಟು ಲೆಕ್ಕಕ್ಕಿಲ್ಲ. ಜೆಡಿಎಸ್‌ ಎಂದರೆ ದೇವೇಗೌಡರು. ದೇವೇಗೌಡರು ಎಂದರೆ ಜೆಡಿಎಸ್‌. ಯಾವ ಶಾಸಕರೂ ಇಬ್ರಾಹಿಂ ಮಾತು ಕೇಳಲ್ಲ. ಅವರು ಕಾಂಗ್ರೆಸ್‌ ಆಡಿಸುವ ಬೊಂಬೆ. ಅವರಿಂದ ಮೈತ್ರಿಗೆ ಯಾವುದೇ ಹಾನಿ ಇಲ್ಲ.

Advertisement

ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಬಿಜೆಪಿ ವರಿಷ್ಠರು ಏಕೆ ಒಪ್ಪಿಲ್ಲ?

ಯಡಿಯೂರಪ್ಪ ಅವರ ಪ್ರವಾಸಕ್ಕೆ ಯಾರೂ ತಡೆ ಕೊಟ್ಟಿಲ್ಲ. ಎಲ್ಲರ ಸಹಮತವಿದೆ. ಎಲ್ಲರ ಸಮಯಾವಕಾಶ ಹೊಂದಿಸಿಕೊಳ್ಳಬೇಕಷ್ಟೇ. ಪಕ್ಷದ ತೀರ್ಮಾನವನ್ನು ಸರ್ವಸಮ್ಮತದಿಂದ ಒಪ್ಪುವುದು ನಮ್ಮ ಸಂಸ್ಕೃತಿ. ಯಾವ ಗೊಂದಲಗಳೂ ಇಲ್ಲ. ನಾಯಕರ ಆಯ್ಕೆ ಪ್ರಕ್ರಿಯೆ ಬೇಗ ಮಾಡಬೇಕಿತ್ತು. ತಪ್ಪಾಗಿದೆ. ಮಾಡುವ ವಿಶ್ವಾಸವಿದೆ. ಹಾಗೆಂದು ಹೊರಾಟ ಕಡಿಮೆ ಮಾಡಿಲ್ಲ.

 ನಿಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ವಿರುದ್ಧವೂ ಸಾಕಷ್ಟು ಆಪಾದನೆಗಳು ಕೇಳಿಬರುತ್ತಿವೆಯಲ್ಲ?

ಯಾವುದೇ ಸರಕಾರಕ್ಕೆ ಕನಿಷ್ಠ 6 ತಿಂಗಳಿಂದ 1 ವರ್ಷದವರೆಗೆ ಹನಿಮೂನ್‌ ಅವಧಿ ಇರುತ್ತದೆ. ಈ ಸರಕಾರ ಬಂದು ನಾಲ್ಕೈದು ತಿಂಗಳಾಗಿದೆ. ಹಲವಾರು ಆಪಾದನೆ ಎದುರಿಸುತ್ತಿದೆ. ಅಧಿಕಾರಕ್ಕೆ ಬಂದಾಗಿ ನಿಂದಲೂ ಕರ್ನಾಟಕವನ್ನು ಎಟಿಎಂ ಮಾಡಿಕೊಂಡು ಲೂಟಿಗಿಳಿದಿದ್ದಾರೆ. ವರ್ಗಾವಣೆ ದಂಧೆ ಜಗಜ್ಜಾಹೀರಾ ಗಿದೆ. ಐಎನ್‌ಡಿಐಎ ಸಂತೈಸಲು ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿದೆ. ಬರಗಾಲ ನಿರ್ವಹಣೆಯಲ್ಲಿ ವಿಫ‌ಲವಾಗಿದ್ದು, ರೈತರ ಪಂಪ್‌ಸೆಟ್‌ಗಳಿಗೂ ವಿದ್ಯುತ್‌ ಕೊಡುತ್ತಿಲ್ಲ. ಕಾಮಗಾರಿಗೆ ಸಂಬಂಧಿಸಿದ ಬಾಕಿ ಬಿಲ್‌ಗ‌ಳನ್ನೂ ಗುತ್ತಿಗೆದಾರರಿಗೆ ಬಿಡುಗಡೆ ಮಾಡುತ್ತಿಲ್ಲ. ಇವರಿಗೆ ಜನರ ಮೇಲೆ ಯಾವ ಕಾಳಜಿಯೂ ಇಲ್ಲ. ನಮ್ಮ ವಿರುದ್ಧ ಆರೋಪಿಸಿದ್ದ ಗುತ್ತಿಗೆದಾರರ ಸಂಘವೇ ಈ ಸರಕಾರದಲ್ಲಿ ಭ್ರಷ್ಟಾಚಾರ ಇದೆ ಎಂದು ಆರೋ ಪಿಸುತ್ತಿದೆ. ಈ ಸರ್ಕಾರದಲ್ಲಿ ಶೇ.60 ರಷ್ಟು ಭ್ರಷ್ಟಾಚಾರ ವಿದೆ. ಈ ಬಗ್ಗೆ ಸಾಕ್ಷಿ, ದಾಖಲೆಯೂ ಇದೆ. ಗುತ್ತಿಗೆದಾ ರರು, ಬಿಲ್ಡರ್‌ ಮೇಲೆ ನಡೆದಿರುವ ಐಟಿ ದಾಳಿಯಲ್ಲಿ ಸಿಕ್ಕಿರುವ ಹಣವೇ ಇದಕ್ಕೆ ಸಾಕ್ಷಿ. ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಸರಕಾರ, ಇದನ್ನು ಸಿಬಿಐ ತನಿಖೆಗೆ ವಹಿಸಲೇಬೇಕು. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ.

 ನೀವೆಷ್ಟೇ ಆರೋಪ ಮಾಡಿದರೂ, ಸರಕಾರ ಮಾತ್ರ 4 ಗ್ಯಾರಂಟಿ  ಜಾರಿ ಮಾಡಿದೆಯಲ್ಲ?

ಎಲ್ಲವೂ ಬೋಗಸ್‌ ಗ್ಯಾರಂಟಿಗಳು. ಎಲ್ಲ ಮಹಿಳೆಯರಿಗೂ ಗೃಹಲಕ್ಷ್ಮಿ ಎಂದಿದ್ದ ಸರಕಾರ ಆಯ್ದ ಮಹಿಳೆಯರಿಗೆ ಮೊದಲ ತಿಂಗಳು ಮಾತ್ರ 2 ಸಾವಿರ ರೂ. ಕೊಟ್ಟಿದೆ. ಸರ್ವರ್‌ ಸಮಸ್ಯೆ, ದಾಖಲೆ ಸರಿಯಿಲ್ಲ ಎಂಬ ನೆಪ ನೀಡಿ ಗೃಹಲಕ್ಷ್ಮಿ ನಿಲ್ಲಿಸಿದೆ. ಶಕ್ತಿ ಯೋಜನೆ ಘೋಷಿಸಿದ ಸರಕಾರ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ ಎಂಬುದನ್ನು ಅಂದಾಜು ಮಾಡಬೇಕಿತ್ತು. ಅದಕ್ಕೆ ತಕ್ಕಷ್ಟು ಬಸ್‌ ಮತ್ತು ಮಾರ್ಗಗಳನ್ನು ವ್ಯವಸ್ಥೆ ಮಾಡಬೇಕಿತ್ತು. ಇದ್ದ ಮಾರ್ಗಗಳನ್ನೂ ಕಡಿತ ಮಾಡಿದೆ. ಮಹಿಳೆಯರಷ್ಟೇ ಅಲ್ಲದೆ, ಪುರುಷ ಪ್ರಯಾಣಿಕರೂ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಶಾಲಾ ಮಕ್ಕಳು ಕಾಲ್ನಡಿಗೆಯಲ್ಲಿ ಸಾಗುವ ಸ್ಥಿತಿ ಇದೆ. ಈ ಕಾರಣದಿಂದ ಮಕ್ಕಳು ಶಾಲೆ ಬಿಟ್ಟರೆ ಸರಕಾರವೇ ಹೊಣೆ. ಚುನಾವಣೆ ಮೊದಲು ಯಾರನ್ನೂ ಕೇಳದೆ ಅನ್ನಭಾಗ್ಯ ಘೋಷಿಸಿದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರಕಾರದ ಕಡೆಗೆ ಬೆಟ್ಟು ಮಾಡಿದೆ. ಯಾವ ಭರವಸೆ ಮೇಲೆ ಅನ್ನಭಾಗ್ಯದಡಿ ಹೆಚ್ಚುವರಿ ಅಕ್ಕಿ ಕೊಡುವ ಘೋಷಣೆ ಮಾಡಿತ್ತು? ಕೇಂದ್ರ ಸರಕಾರ, ನೆರೆಯ ರಾಜ್ಯ ಸರಕಾರಗಳು, ವಿಶ್ವ ಬ್ಯಾಂಕ್‌ ಅಥವಾ ವಿದೇಶಿ ಬ್ಯಾಂಕ್‌ಗಳ ಜತೆಗೆ ಏನಾದರೂ ಮಾತನಾಡಿತ್ತೇ? ಅದಕ್ಕೊಂದು ಪ್ರಕ್ರಿಯೆ ಇದೆ ಎಂಬುದು ಗೊತ್ತಿಲ್ಲವೇ? ಅಷ್ಟೂ ಸಾಮಾನ್ಯ ಜ್ಞಾನ ಇಲ್ಲದ ಸರಕಾರ ನಡೆಸಲು ಯೋಗ್ಯರಾ? ರೈತರ ಪಂಪ್‌ಸೆಟ್‌, ಗೃಹಬಳಕೆಗೆ ವಿದ್ಯುತ್‌ ಪೂರೈಕೆಯನ್ನೇ ಮಾಡದೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ ಕೊಡುತ್ತಿದ್ದೇವೆ ಎನ್ನುವುದು ಹಾಸ್ಯಾಸ್ಪದ ಎನಿಸುತ್ತದೆ.

 ಲೋಕಸಭಾ ಚುನಾವಣೆಗೆ ಬಿಜೆಪಿಯ ತಯಾರಿ ಹೇಗಿದೆ?

ಸದ್ಯಕ್ಕೆ ಪಂಚರಾಜ್ಯಗಳ ಚುನಾವಣೆಗಳತ್ತ ವರಿಷ್ಠರು ಮಗ್ನರಾಗಿದ್ದಾರೆ. ಅದರ ನಡುವೆ ಸಂಘಟನಾತ್ಮಕ ಪ್ರಕ್ರಿಯೆಗಳು ಸದಾ ನಡೆಯುತ್ತಲೇ ಇರುತ್ತವೆ. ಬೂತ್‌ ಮಟ್ಟದ ಕಾರ್ಯಕರ್ತರ ತಂಡಗಳು ರಚನೆಯಾಗುತ್ತಿವೆ, ಸಭೆಗಳು ನಡೆಯುತ್ತಿವೆ. ಕಾರ್ಯಕರ್ತರನ್ನು ಆಧರಿಸಿರುವ ಪಕ್ಷ ನಮ್ಮದು. ನಾಯಕರ ಮೇಲೆ ಚುನಾವಣೆ ನಡೆಸುವವರಲ್ಲ. ಮೋದಿ ಪ್ರಧಾನಿ ಅಭ್ಯರ್ಥಿಯಾಗಿರುವುದರಿಂದ ಕಾರ್ಯಕರ್ತರಿಗೆ ಶಕ್ತಿ ಇರಲಿದೆ. ಮತ್ತೂಮ್ಮೆ ಮೋದಿಯನ್ನು ಪ್ರಧಾನಿ ಮಾಡುವ ಹುರುಪು ಕಾರ್ಯಕರ್ತರಲ್ಲಿ ಇದೆ.

ಐಎನ್‌ಡಿಐಎ ಮೈತ್ರಿಕೂಟದವರು ಪ್ರಧಾನಿ ಅಭ್ಯರ್ಥಿ ಘೋಷಿಸಿಯೇ ಇಲ್ಲ. ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆ ಇದ್ದಾಗಲೇ ನಾವು 25 ಸ್ಥಾನ ಗೆದ್ದಿದ್ದೆವು. ಈಗಂತೂ ಬಲ ಬಂದಿದೆ. ಆರಾಮವಾಗಿ 28 ಸ್ಥಾನವನ್ನೂ ಗೆಲ್ಲುತ್ತೇವೆ. ಈ ಬಾರಿ ಗೆಲ್ಲುವುದೊಂದೇ ಮಾನದಂಡ. ಹೀಗಾಗಿ ಹಾಲಿ ಶಾಸಕರಿಗೆ ಟಿಕೆಟ್‌ ಕೊಟ್ಟರೂ ಅಚ್ಚರಿಯಿಲ್ಲ. ಪ್ರಧಾನಿ ಮೋದಿ ಅವರು 9 ವರ್ಷದಲ್ಲಿ ಮಾಡಿರುವ ಸಾಧನೆಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತವೆ. ಜತೆಗೆ ರಾಜ್ಯ ಸರಕಾರದ ವೈಫ‌ಲ್ಯಗಳನ್ನೂ ಜನರ ಮುಂದಿಡುತ್ತೇವೆ.

ಈ ಸರಕಾರಕ್ಕೆ ಟಿಪ್ಪು ಆಡಳಿತ ಮಾದರಿಯಾಗಿ ದೆಯೇ ಹೊರತು, ಒಡೆಯರ್‌ ಆಡಳಿತವಲ್ಲ. ಭ್ರಷ್ಟಾ ಚಾರದ ಕೂಪದಲ್ಲಿ ಮುಳುಗಿರುವ, ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸರಕಾರದ ಭವಿಷ್ಯ ಏನೆಂಬುದು ಲೋಕಸಭೆ ಚುನಾವಣೆ ಬಳಿಕ ತೀರ್ಮಾನ ಆಗಲಿದೆ. ಇವರು ಮಾಡುತ್ತಿರುವ ಪಾಪದಿಂದಲೇ ಕುಸಿಯುತ್ತದೆ. ಲೋಕಸಭೆ ಚುನಾವಣೆ ಬಳಿಕ ಈ  ಸರಕಾರ ಉಳಿಯುವುದು ಕಷ್ಟ. ಅದು ಗೊತ್ತಾಗಿಯೇ ಈ ರೀತಿ ಲೂಟಿ ಮಾಡುತ್ತಿದೆ.

ವಿಪಕ್ಷದ ನಾಯಕರನ್ನು ಆಯ್ಕೆ ಮಾಡದೆ ನಿಮ್ಮ ಹೈಕಮಾಂಡ್‌ ಏಕೆ ವಿಳಂಬ ಧೋರಣೆ ಮಾಡುತ್ತಿದೆ?

ವಿಪಕ್ಷದ ನಾಯಕರ ಆಯ್ಕೆ ಆಗದಿದ್ದರೂ 66 ಶಾಸಕರೂ ವಿಪಕ್ಷ ನಾಯಕರಂತೆ ಹೊರಾಡಿದ್ದೇವೆ. ಎರಡು ದಿನಗಳ ಕಾಲ 10 ಜನರನ್ನು ಅಮಾನತು ಮಾಡಿದ್ದೇ ಇದಕ್ಕೆ ಸಾಕ್ಷಿ. ನಮ್ಮಲ್ಲಿ ಸಮಸ್ಯೆಗಳೇನೂ ಇಲ್ಲ. ಏನೋ ಒಂದು ಒಳ್ಳೆಯ ಉದ್ದೇಶ ಇದೆ. ಕೇಂದ್ರದವರು ಅದೇ ಉದ್ದೇಶದಿಂದ ನಾಯಕತ್ವದ ನೇಮಕ ವಿಳಂಬ ಮಾಡುತ್ತಿದೆ. ಆರಂಭದಲ್ಲಿ ಚುನಾವಣ ಸೋಲಿನಿಂದ ಹೊರಬರಬೇಕಿತ್ತು. ಅನಂತರದಲ್ಲಿ ಮೈತ್ರಿ ಮಾತುಕತೆ ಇತ್ತು. ಪಂಚರಾಜ್ಯಗಳ ಚುನಾವಣೆ ಬಂದಿದೆ. ನಾವೂ ಕೇಂದ್ರ ನಾಯಕರೊಟ್ಟಿಗೆ ಮಾತನಾಡಿದ್ದೇವೆ. ನಾಯಕರನ್ನು ಆಯ್ಕೆ ಮಾಡುವುದು ಒಳ್ಳೆಯದು ಎಂದಿದ್ದೇವೆ. ದಸರಾ ಅನಂತರ ಲೋಕಸಭೆ ಚುನಾವಣೆ ಒಳಗಾಗಿ ಘೋಷಿಸುವ ವಿಶ್ವಾಸವಿದೆ.

 ಶೇಷಾದ್ರಿ ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next