ಶಿವಮೊಗ್ಗ: ನನ್ನ ಶವ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ ಈಶ್ವರಪ್ಪ, “ಸಿದ್ದರಾಮಯ್ಯ ಅವರನ್ನು ಜೀವಂತವಾಗಿ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಇನ್ನೂ ಸಿದ್ದು ಹೆಣ ತೆಗೆದುಕೊಂಡು ನಾವು ಏನು ಮಾಡಬೇಕು. ಸಿದ್ದು ಹೆಣ ನಾಯಿನು ಮೂಸುವುದಿಲ್ಲ. ಅದನ್ನು ನಾವು ಯಾಕೆ ಮುಟ್ಟಬೇಕು. ಮಾಜಿ ಸಿಎಂ ಹುಚ್ಚರ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ” ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಸಿದ್ದು ಚಾಮುಂಡೇಶ್ವರದಲ್ಲಿ ಸೋತರು, ಬಾದಾಮಿಗೆ ಹೋದರೂ ಬಾರ್ಡರ್ ನಲ್ಲಿ ಗೆದ್ದರು. ಇನ್ನೂ ಅಲ್ಲಿ ಗೆಲ್ಲುವುದಿಲ್ಲ ಎನ್ನುವುದು ಗೊತ್ತಾಗಿ ಕೋಲಾರದಲ್ಲಿ ಮನೆ ಹುಡುಕುತ್ತಿದ್ದಾರೆ. ಹುಡುಕಲಿ ನನ್ನದು ಅಭ್ಯಂತರವಿಲ್ಲ. ಒಬ್ಬ ವ್ಯಕ್ತಿ ಹತಾಶೆಯಾಗಿರುವುದು ಕಂಡು ಬರುತ್ತಿದೆ. ಅಲೆಮಾರಿಯಂತೆ ಕ್ಷೇತ್ರಕ್ಕಾಗಿ ಓಡಾಟ ಮಾಡುತ್ತಿದ್ದಾರೆ ಎಂದರು.
ಬಾದಾಮಿ ದೂರ ಆಗುವುದಿದ್ದರೆ ಮತ್ತೆ ಚಾಮುಂಡೇಶ್ವರಿಗೆ ವಾಪಸ್ ಹೋಗಿ. ಅದು ನಿಮ್ಮದೆ ಕ್ಷೇತ್ರ. ಅನೇಕ ಬಾರಿ ಅಲ್ಲಿಗೆಲುವಾಗಿದೆ. ಅಲ್ಲಿ ಯಾಕೆ ಹೋಗುತ್ತಿಲ್ಲ? ಯಾಕೇ ಕೋಲಾರ ಹುಡುಕಿಕೊಂಡು ಹೊರಟಿದ್ದೀರಿ? ಆಯಾ ಮತದಾರರಿಗೆ ನಿಮ್ಮ ಹಣೆಬರಹ ಗೊತ್ತು. ಈ ವ್ಯಕ್ತಿ ನಂಬಿಕಸ್ಥನಲ್ಲ ಎನ್ನುವುದು ಮತದಾರರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸೋಲುವ ಭಯದಿಂದ ಸಿದ್ದು ಕ್ಷೇತ್ರದ ಹುಡುಕಾಟ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ:ಹಾಲಿ- ಮಾಜಿ ಸಿಎಂ ಗಳು ಪುಡಿ ರೌಡಿಗಳಂತೆ ಮಾತನಾಡುತ್ತಿದ್ದಾರೆ: ಎಚ್.ವಿಶ್ವನಾಥ ಅಸಮಾಧಾನ
ಕೇವಲ ಸಿದ್ದುಗೆ ಮಾತ್ರವಲ್ಲ ಇನ್ನು ಅನೇಕ ಕಾಂಗ್ರೆಸ್ ನಾಯಕರಿಗೆ ಈ ಸಮಸ್ಯೆಯಿದೆ. ಒಂದು ಕ್ಷೇತ್ರ ಸಿದ್ದು ಆಯ್ಕೆ ಮಾಡಿಕೊಂಡು ಆ ಜನರ ಸಮಸ್ಯೆಗೆ ಸ್ಪಂದಿಸುವುದು ಅವರ ಕರ್ತವ್ಯ. ನಾನು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸೋತಿದ್ದೆ. ನಾನು ಬೇರೆ ಕ್ಷೇತ್ರ ಹುಡುಕಿಕೊಂಡು ಹೋಗಬಹುದಿತ್ತು. ಆದರೆ ನಾನು ಹಾಗೆ ಮಾಡದೆ ಇಲ್ಲಿಯ ಜನರನ್ನು ಸಂತೃಪ್ತಿ ಪಡಿಸಿದೆ. ಮತ್ತೆ ಅದೇ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ರಾಷ್ಟ್ರೀಯ ನಾಯಕರ ತೀರ್ಮಾನ. ಬರುವ ದಿನಗಳಲ್ಲಿ ದೇಶದಲ್ಲಿ ಬಿಜೆಪಿ ಪಕ್ಷ ಬಿಟ್ಟು ಬೇರೆ ಯಾವ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇದು ಶತಸಿದ್ಧ. ಈ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬರುತ್ತದೆ. ರಾಜ್ಯದಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.