Advertisement

Gangavathi; ಮಾಜಿ ಸಚಿವ ಅನ್ಸಾರಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ: ಅಲಿಖಾನ್ ಆಕ್ರೋಶ

06:03 PM Jan 20, 2024 | Team Udayavani |

ಗಂಗಾವತಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ಸೋತಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅಭಿವೃದ್ಧಿಗೆ ವಿರೋಧಿಯಾಗಿದ್ದು ಮತ್ತೊಮ್ಮೆ ಜನರು ಬುದ್ಧಿ ಕಲಿಸಲಿದ್ದಾರೆಂದು ಶಾಸಕ ಗಾಲಿ ಜನಾರ್ದನರೆಡ್ಡಿ ಆಪ್ತ ಹಾಗೂ ಕೆಆರ್‌ಪಿ ಪಕ್ಷದ ಮುಖಂಡ ಅಲಿಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯಚಟುವಟಿಕೆಗಳು ಸುಗಮವಾಗಿ ನಡೆಯಲು ಮತ್ತು ಸ್ಥಳೀಯ ಸಹಭಾಗಿತ್ವಕ್ಕಾಗಿ ಶಾಸಕ ಗಾಲಿ ಜನಾರ್ದನರೆಡ್ಡಿಯವರು 8 ಜನರನ್ನು ಆರೋಗ್ಯ ರಕ್ಷಾ ಸಮಿತಿಗೆ ನೇಮಕ ಮಾಡಿಸಿದ್ದನ್ನು ಗಂಭೀರವಾಗಿ ತೆಗೆದುಕೊಂಡು ವೈದ್ಯಾಧಿಕಾರಿಗಳನ್ನು ಮನೆಗೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದ ಕ್ರಮವಲ್ಲ. ಉತ್ತಮ ಅಧಿಕಾರಿಗಳಿಗೆ ಪ್ರೋತ್ಸಾಹ ಕೊಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಅನ್ಸಾರಿಯವರು ಐದು ವರ್ಷಗಳ ಕಾಲ ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ಕೊಡಬೇಕು. ಅಧಿಕಾರಿಗಳ ವರ್ಗಾವಣೆ, ಅನುದಾನ ವಾಪಸ್ ಗೆ ಪತ್ರ ಬರೆಯುವುದು ಸೇರಿ ಕ್ಷೇತ್ರಕ್ಕೆ ಹಿತವಲ್ಲದ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ಗೆದ್ದಾಗ ಮಾತ್ರ ಅಭಿವೃದ್ಧಿ ಎಂದು ಕಾಲಹರಣ ಮಾಡಿರುವ ಅನ್ಸಾರಿ ಈಗ ಬೇರೊಬ್ಬರು ಗೆದ್ದಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಿ ಆಡಳಿತ ನಡೆಸಲು ಅವಕಾಶ ನೀಡಬೇಕು.

ಈ ಹಿಂದೆ ಎರಡು ಭಾರಿ ಶಾಸಕರಾಗಿದ್ದ ವೇಳೆ ಆರೋಗ್ಯ ರಕ್ಷಾ ಸಮಿತಿಗೆ ಆಪ್ತರನ್ನು ನೇಮಕ ಮಾಡಿಸಿದ್ದರು. ಶಾಸಕರಿಗೆ ಇದು ಪರಮಾಧಿಕಾರವಾಗಿದ್ದು ನೂತನ ಸಮಿತಿಗೆ ರೋಸ್ಟರ್ ಆಧಾರದಲ್ಲಿ 8 ಜನರನ್ನು ನೇಮಕ ಮಾಡಿದ್ದಕ್ಕೆ ರದ್ದಾಂತ ಮಾಡಿ ವೈದ್ಯಾಧಿಕಾರಿ ಕರ್ತವ್ಯ ಲೋಪ ಮಾಡಿದ್ದಾರೆಂದು ಸಸ್ಪೆಂಡ್ ಮಾಡಲು ಆರೋಗ್ಯ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವುದು ಖಂಡನೀಯವಾಗಿದೆ.

ಕ್ಷೇತ್ರವನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನದಲ್ಲಿ ಮಾದರಿಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಇದನ್ನು ಸಹಿಸದ ಅನ್ಸಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಅನುದಾನ ವಾಪಸ್ ಆಗುವಂತಹ ವಾತಾವರಣ ನಿರ್ಮಿಸುವುದು ಸರಿಯಲ್ಲ. ನಗರೋತ್ಥಾನ ಯೋಜನೆಯಡಿ ನಗರದ ರಾಣಾಪ್ರತಾಪ ಸಿಂಗ್ ವೃತ್ತದಿಂದ ನೀಲಕಂಠೇಶ್ವರ ವೃತ್ತದ ವರೆಗೆ ರಸ್ತೆ. ಪುಟ್‌ಪಾತ್, ಬೀದಿ ದೀಪ ಅಳವಡಿಕೆ ಮಾಡುವ ಕಾಮಗಾರಿ ನೆನಗುದಿಗೆ ಬೀಳಲು ಮತ್ತು ಅನುದಾನ ವಾಪಸ್ ಹೋಗಲು ಅನ್ಸಾರಿ ಕಾರಣರಾಗಿದ್ದಾರೆ.

ಕಾಮಗಾರಿ ನಿಲ್ಲದಂತೆ ಶಾಸಕ ಗಾಲಿ ಜನಾರ್ದನರೆಡ್ಡಿ ಕೆಕೆಆರ್‌ಡಿಬಿ ಅನುದಾನ 12.50 ಕೋಟಿ ಮೀಸಲಿಟ್ಟು ಬೈಪಾಸ್ ರಸ್ತೆ ನಿರ್ಮಾಣ ಮತ್ತು ಸೌಂದರೀಕರಣದ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಈಗಲಾದರೂ ಕ್ಷೇತ್ರದ ಜನತೆಯ ಹಿತದೃಷ್ಠಿಯಿಂದ ಅಭಿವೃದ್ಧಿ ಕಾರ್ಯಗಳಿಗೆ ಅನ್ಸಾರಿಯವರು ಅಡ್ಡಿಯಾಗಬಾರದು ಇದು ಮುಂದುವರಿದರೆ ಕೆಆರ್‌ಪಿ ಪಕ್ಷದ ಕಾರ್ಯಕರ್ತರು ಮುಂಬರುವ ಚುನಾವಣೆಯಲ್ಲಿ ಅನ್ಸಾರಿಗೆ ಬುದ್ಧಿ ಕಲಿಸಲಿದ್ದಾರೆಂದರು.

Advertisement

ರಾಮೋತ್ಸವ,ಚನ್ನಬಸವಸ್ವಾಮಿ, ದುರ್ಗಾದೇವಿ ಜಾತ್ರೆಗೆ ಮೂಲಸೌಕರ್ಯ: ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆಯ ನಿಮಿತ್ತ ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಪಾಲ್ಗೊಳ್ಳಲಿದ್ದು ಅಂಜನಾದ್ರಿಯಲ್ಲಿ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲಾಗುತ್ತದೆ.

ಮುಂಬರುವ ಶ್ರೀಚನ್ನಬಸವಸ್ವಾಮಿ ಹಾಗೂ ಗ್ರಾಮದೇವತೆ ಶ್ರೀದುರ್ಗಾದೇವಿ ಜಾತ್ರೆಯ ನಿಮಿತ್ತ ನಗರದಲ್ಲಿ ಮೂಲಸೌಕರ್ಯ ಹಾಗೂ ನಗರದ ಸ್ವಚ್ಚತೆ ಕಾಪಾಡಲು ಶಾಸಕ ಗಾಲಿ ಜನಾರ್ದನರೆಡ್ಡಿ ನಗರಸಭೆಯ ಪೌರಾಯುಕ್ತರಿಗೆ ಸೂಚನೆ ನೀಡಿದ್ದು ಕೆಆರ್‌ಪಿ ಪಕ್ಷದ ಮುಖಂಡರು ಕಾರ್ಯಕರ್ತರು ಸತತವಾಗಿ ಪೌರಕಾರ್ಮಿಕರ ಜತೆ ಕೈ ಜೋಡಿಸಿ ಸ್ವಚ್ಛತೆ ಹಾಗೂ ವಿದ್ಯುತ್ ಕಂಬ, ತಂತಿ ಬದಲಾವಣೆ ಮತ್ತು ಪ್ರತಿ ವಾರ್ಡಿನಲ್ಲಿ ನೈರ್ಮಲ್ಯ ಕಾಪಾಡಲು ನೆರವಾಗಲಿದ್ದಾರೆ.

ಮುಖಂಡರು ಹಾಗೂ ಕಾರ್ಯಕರ್ತರ ಜತೆಗೂಡಿ ನಗರದ ಮಟನ್ ಮಾರ್ಕೆಟ್, ಡೇಲಿ ಮಾರ್ಕೆಟ್, ಗುಂಡಮ್ಮನ ಕ್ಯಾಂಪ್ ದುರುಗಮ್ಮನಹಳ್ಳಸ್ವಚ್ಛ ಕಾರ್ಯ ಮಾಡಲು ಸಲಹೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕೆಆರ್‌ಪಿ ಪಕ್ಷದ ಬಾಷಾ, ಪತ್ರಕರ್ತ ಸೈಯದ್ ಅಲಿ, ಉಸ್ಮಾನ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next