ಮುಂಬೈ: ಮುಂಬರುವ ಏಷ್ಯಾ ಕಪ್ ಕೂಟಕ್ಕೆ ಭಾರತ ತಂಡ ಪ್ರಕಟಿಸಲಾಗಿದೆ. ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ತಂಡಕ್ಕೆ ಮರಳಿದ್ದಾರೆ. ರಾಹುಲ್ ಗೆ ಉಪ ನಾಯಕ ಸ್ಥಾನ ನೀಡಲಾಗಿದೆ. ಅಲ್ಲದೆ ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ತಂಡದಿಂದ ಹೊರಗುಳಿದಿದ್ದಾರೆ.
ಟೀಂ ಇಂಡಿಯಾ ಮಾಜಿ ಆಟಗಾರ ಕೃಷ್ಣಮಚಾರಿ ಶ್ರೀಕಾಂತ್ ಅವರು ಈ ತಂಡದ ಆಯ್ಕೆಯ ಬಗ್ಗೆ ಅಸಮಾಧಾನ ತೋರಿದ್ದಾರೆ. ತಂಡದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಸ್ಥಾನ ನೀಡದೇ ಇರುವುದನ್ನು ಅವರು ಟೀಕಿಸಿದ್ದಾರೆ.
“ನನ್ನ ತಂಡದಲ್ಲಿ ಶಮಿ ಇದ್ದಾರೆ. ಒಂದು ವೇಳೆ ನಾನು ಆಯ್ಕೆಯ ಸಮಿತಿ ಮುಖ್ಯಸ್ಥನಾಗಿದ್ದರೆ, ನಾನು ಶಮಿಯನ್ನು ಖಂಡಿತವಾಗಿಯೂ ಆಯ್ಕೆ ಮಾಡುತ್ತಿದ್ದೆ. ಬಹುಶಃ ನಾನು ರವಿ ಬಿಷ್ಣೋಯ್ ಗೆ ಸ್ಥಾನ ನೀಡುತ್ತಿರಲಿಲ್ಲ. ನನ್ನ ಪ್ರಕಾರ ಅಕ್ಷರ್ ಪಟೇಲ್ ಓರ್ವ ಪ್ರಬಲ ಸ್ಪರ್ಧಿ. ಅಶ್ವಿನ್ ಮತ್ತು ಅಕ್ಷರ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಿದ್ದೆ” ಎಂದು ಶ್ರೀಕಾಂತ್ ಹೇಳಿದರು.
ಇದು ಒಳ್ಳೆಯ ತಂಡ. ಆದರೆ ಮತ್ತೋರ್ವ ಮೀಡಿಯಂ ಪೇಸರ್ ನ ಅಗತ್ಯವಿತ್ತು. ಇಬ್ಬರು ರಿಸ್ಟ್ ಸ್ಪಿನ್ನರ್ ಗಳಿದ್ದಾರೆ. ಆದರೆ ಅಕ್ಷರ್ ಪಟೇಲ್ ಓರ್ವ ಇರಬೇಕಿತ್ತು. ಆದರೆ ಉತ್ತಮ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡಾ ಮಾಡಬಲ್ಲ ದೀಪಕ್ ಹೂಡಾ ಗೆ ಅವಕಾಶ ನೀಡಿದ್ದು ಒಳ್ಳೆಯದಾಯ್ತು ಎಂದಿದ್ದಾರೆ.
ಇದನ್ನೂ ಓದಿ:ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನೆ ಮೇಲೆ ಎಫ್ ಬಿಐ ದಾಳಿ
ಬುಮ್ರಾ ಮತ್ತು ಹರ್ಷಲ್ ಅನುಪಸ್ಥಿತಿಯಲ್ಲಿ ಭಾರತದ ವೇಗದ ಬೌಲಿಂಗ್ ನಲ್ಲಿ ಅನುಭವದ ಕೊರತೆಯಿದೆ. ಭುವನೇಶ್ವರ್ ಕುಮಾರ್ ಜೊತೆಗೆ ಅನನುಭವಿಗಳಾದ ಅರ್ಶದೀಪ್ ಮತ್ತು ಆವೇಶ್ ಖಾನ್ ಸ್ಥಾನ ಪಡೆದಿದ್ದಾರೆ.
ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಾಹರ್ ಅವರನ್ನು ಸ್ಟಾಂಡ್ ಬೈ ಗಳಾಗಿ ನೇಮಿಸಲಾಗಿದೆ. ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ರನ್ನು ಕಡೆಗಣಿಸಲಾಗಿದೆ.