ಚಂಡೀಗಢ: ಪಂಜಾಬ್ ಪೊಲೀಸ್ ಇಲಾಖೆಯಿಂದ ಅಮಾನತುಗೊಂಡಿದ್ದ ಅಸಿಸ್ಟೆಂಟ್ ಇನ್ಸ್ ಪೆಕ್ಟರ್ ಜನರಲ್ ತನ್ನ ಅಳಿಯನನ್ನೇ ಕೋರ್ಟ್ ಹಾಲ್ ನೊಳಗೆ ಗುಂಡಿಕ್ಕಿ ಕೊಲೆಗೈದಿರುವ ಘಟನೆ ಚಂಡೀಗಢದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತ ಹರ್ ಪ್ರೀತ್ ಸಿಂಗ್ ನೀರಾವರಿ ಇಲಾಖೆಯಲ್ಲಿ ಐಆರ್ ಎಸ್ (Indian Revenue service) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಾವ ಮಾಲ್ವಿಂದರ್ ಸಿಂಗ್ ಹಾಗೂ ಅಳಿಯ ಹರ್ ಪ್ರೀತ್ ಸಿಂಗ್ ಕುಟುಂಬದ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು.
ಇದನ್ನೂ ಓದಿ:Big Boss OTT 3 ಗೆದ್ದ ವಿಶ್ ಖ್ಯಾತಿಯ ನಟಿ ಸನಾ ಮಕ್ಬೂಲ್ ಖಾನ್
ಈ ವಿಚಾರದಿಂದಾಗಿ ಎರಡೂ ಕುಟುಂಬ ಸದಸ್ಯರು ಚಂಡೀಗಢ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಫ್ಯಾಮಿಲಿ ಕೋರ್ಟ್ ನಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ತನಗೆ ಶೌಚಾಲಯಕ್ಕೆ ಹೋಗುವ ದಾರಿ ತೋರಿಸುವಂತೆ ಅಳಿಯನ ಬಳಿ (ಹರ್ ಪ್ರೀತ್ ಸಿಂಗ್) ಕೇಳಿದಾಗ, ಇಬ್ಬರೂ ಹೊರಗೆ ಹೋಗಿದ್ದರು. ಸ್ವಲ್ಪ ಹೊತ್ತಿನಲ್ಲೇ ಐದು ಗುಂಡಿನ ಶಬ್ದ ಕೇಳಿಬಂದಿರುವುದಾಗಿ ವರದಿ ವಿವರಿಸಿದೆ.
ಗುಂಡಿನ ದಾಳಿಯಿಂದ ಹರ್ ಪ್ರೀತ್ ನೆಲದ ಮೇಲೆ ಕುಸಿದು ಬಿದ್ದಿದ್ದು, ಕೋರ್ಟ್ ರೂಂನಲ್ಲಿದ್ದ ಕುಟುಂಬ ಸದಸ್ಯರು ಸಹಾಯಕ್ಕಾಗಿ ಮೊರೆ ಇಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಹರ್ ಪ್ರೀತ್ ಕೊನೆಯುಸಿರೆಳೆದಿದ್ದ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಾಲ್ವಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.